Saturday, July 2, 2022

'ನಾನು ಸಿಎಂ ಬಿ.ಎಸ್​ ಯಡಿಯೂರಪ್ಪ ಕ್ಯಾಬಿನೆಟ್​ನಲ್ಲಿ ಮಂತ್ರಿ ಆಗೊಲ್ಲ'

Must read

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರನ್ನು ಅಭಿವೃದ್ಧಿ ವಿಚಾರವಾಗಿ ಭೇಟಿ ಆಗಿದ್ದೆವು. ಕೆಲಸ ಆಗಿಲ್ಲ ಅಂತ ಅಸಮಾಧಾನ ಇತ್ತು. ಹೀಗಾಗಿ ಅವರನ್ನು ಭೇಟಿ ಮಾಡಿದ್ವಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದರು.

ಇಂದು ವಿಧಾನಸೌಧದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಇದು ಯಾವುದೇ ಭಿನ್ನಮತ ಅಲ್ಲ, ಸಿಎಂ ಅವರ ಕೆಲಸವನ್ನು ಪಿಎಂ, ರಾಷ್ಟ್ರ ಅಧ್ಯಕ್ಷರು ಹೊಗಳಿದ್ದಾರೆ. ಶಾಸಕರು ಸಿಎಂ ಕೆಲಸ ಮೆಚ್ಚಿದ್ದಾರೆ. ಕೆಲ ಮಾಧ್ಯಮಗಳು ಈ ಸಮಯದಲ್ಲಿ ಭಿನ್ನಮತ ಬೇಕಾ ಅಂತ ಸುದ್ದಿ ಮಾಡಿವೆ ಎಂದು ಅವರು ಹೇಳಿದರು.

ಸದ್ಯ ನಾವು ಯಾವುದೇ ಭಿನ್ನಮತ ಸಭೆ ಮಾಡಿಲ್ಲ, ಅನುದಾನ, ನಾಯಕತ್ವದ ಬಗ್ಗೆ ಅಧಿಕಾರಿಗಳ ವರ್ಗಾವಣೆ ಬಗ್ಗೆ ಮಂತ್ರಿ ಆಗೋ ಬಗ್ಗೆ ಚರ್ಚೆ ಆಗಿಲ್ಲ. ನಾನು ಸಿಎಂ ಯಡಿಯೂರಪ್ಪ ಕ್ಯಾಬಿನೆಟ್​ನಲ್ಲಿ ಮಂತ್ರಿ ಆಗೊಲ್ಲ. ಅಭಿವೃದ್ಧಿ ಸಲುವಾಗಿ ನಾನು ಕೆಲಸ ಮಾಡ್ತೀನಿ. ಅಭಿವೃದ್ಧಿ ಬಗ್ಗೆ ಮಾತ್ರ ಅಧ್ಯಕ್ಷರ ಬಳಿ ಮಾತಾಡಿದ್ದೇವೆ. ಸಮಾಧಾನ ಇದೆಯೋ, ಅಸಮಾಧಾನ ಇದೆಯೋ ಯಾರಿಗೆ ತಲುಪಿಸಬೇಕೋ ಅವರಿಗೆ ತಲುಪಿಸುತ್ತೇವೆ ಎಂದು ಅವರು ಮಾರ್ಮಿಕವಾಗಿ ಹೇಳಿದರು.

ಇನ್ನು ನನಗೆ ಸಚಿವ ಆಗೋ ಮನಸ್ಸು ಇಲ್ಲ. ನಾನೇ ನಿರ್ಧಾರ ಮಾಡಿದ್ದೇನೆ ಸಚಿವ ಆಗೊಲ್ಲ ಅಂತ. ನಾವು ಯಾವುದೇ ಸಭೆ ಮಾಡಿಲ್ಲ. ಊಟಕ್ಕೆ ಸೇರಿದ್ವಿ. ರಾಜ್ಯಸಭೆಗೆ ಸಭೆ ಮಾಡಿದ್ವಿ ಅಂತ ಆಯ್ತು. ರೊಟ್ಟಿ ತಿಂದಿದ್ದು ಸುದ್ದಿ ಆಯ್ತು. ಯಾವ ಕಾಲದಲ್ಲಿ ಹೇಗೆ ಇರಬೇಕು ಹಾಗೆ ಇರಬೇಕು. ಕಾಲಾಯ ತಸ್ಮೈ ನಮಃ, ನಾನು ತಲೆ ಬಗ್ಗಿಸಿ ನಡೆಯುತ್ತಿದ್ದೇನೆ ಅಂದರೆ ಮುಂದೆ ಒಳ್ಳೆಯದು ಆಗುತ್ತೆ ಅಂತ ಅರ್ಥ ಎಂದು ಬೆಂಗಳೂರಿನಲ್ಲಿ ಬಸನಗೌಡ ಪಾಟೀಲ್​ ಯತ್ನಾಳ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Latest article