ಮಹಾರಾಷ್ಟ್ರ/ಹರಿಯಾಣ: ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭೆ ಚುನಾವಣೆಗೆ ಇನ್ನು 5 ದಿನ ಇರುವು ಹಾಗಲೇ ಪ್ರಮುಖ ಪಕ್ಷಗಳಾದ ಬಿಜೆಪಿ – ಕಾಂಗ್ರೆಸ್ ನಡುವೆ ವಾಕ್ಸಮರ ತಾರಕಕ್ಕೇರಿದೆ.
ಇಂದು ವಿದರ್ಭದಲ್ಲಿ ಕ್ಯಾಂಪೇನ್ ನಡೆಸಿದ ರಾಹುಲ್ ಗಾಂಧಿ ಅವರು ಕಳ್ಳತನ ಮಾಡಲು ಜನರ ಗಮನವನ್ನು ಬೇರೆಡೆ ಸೆಳೆಯುವ ಜೇಬುಗಳ್ಳರಂತೆ ಮೋದಿ ಅವರು ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಕಾರ್ಪೊರೇಟ್ ತೆರಿಗೆ ಮನ್ನಾ ಮಾಡಿದ್ದಕ್ಕೆ ಮೋದಿ ಸರ್ಕಾರವನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಲ್ಲದೇ ಯವತ್ಮಾಳ್ ಜಿಲ್ಲೆಯಲ್ಲಿ ಪ್ರಚಾರ ನಡೆಸಿ ಮಾತನಾಡಿದ ರಾಹುಲ್, ಪ್ರಧಾನಿ ಚಂದ್ರಯಾನ, ಆರ್ಟಿಕಲ್ 370 ರದ್ಧತಿ ಬಗ್ಗೆ ಮಾತನಾಡುತ್ತಾರೆ. ಆದರೆ, ಉದ್ಯೋಗ ಕೊರತೆ, ರೈತರ ಸಮಸ್ಯೆ ಬಗ್ಗೆ ಮೌನವಹಿಸುತ್ತಾರೆ. ಮೋದಿ ಸರ್ಕಾರ ಇರುವವರೆಗೂ ಉದ್ಯೋಗ ಕೊರತೆ ಸಮಸ್ಯೆ ಇರಲಿದೆ ಎಂದು ಅವರು ಇದೇ ಸಮಯದಲ್ಲಿ ಭವಿಷ್ಯ ನುಡಿದಿದ್ದಾರೆ.
ಈ ಸಂಬಂಧ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, 370 ಕಾಲಮ್ ರದ್ದತಿ ಮೂಲಕ ಬಿಜೆಪಿ ಜನರ ಗಮನ ಬೇರೆಡೆಗೆ ಸೆಳೆಯಲು ಯತ್ನಿಸುತ್ತಿದೆ ಅನ್ನುವುದು ನಾಚಿಕೆಗೇಡಿನ ಸಂಗತಿ. ರಾಜಕಾರಣ ಮತ್ತು ಕುಟುಂಬ ರಾಜಕಾರಣದ ಆಸಕ್ತಿಯಿಂದ ಮುಂದೆ ಬಂದವರು ಮಹಾರಾಷ್ಟ್ರ, ಜಮ್ಮು ಕಾಶ್ಮೀರಕ್ಕೆ ಏನು ಸಂಬಂಧ ಅಂತ ಕೇಳುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಅಂತೆಯೇ ಮುಂದುವರಿದ ಮಾತನಾಡಿದ ಮೋದಿ, ಅಂಬೇಡ್ಕರ್ಗೆ ದಶಕಗಳ ಕಾಲ ಭಾರತರತ್ನ ನೀಡದೆ ಪ್ರತಿ ಬಾರಿಯೂ ಅವಮಾನ ಮಾಡಿದ ಜನರೇ ಈಗ ಹಿಂದುತ್ವವಾದಿ ಸಾವರ್ಕರ್ ಅವರನ್ನು ಅವಮಾನ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಅಲ್ಲದೇ, ಮಹಾರಾಷ್ಟ್ರದಲ್ಲಿ ನಡೆದಿದ್ದ ಸರಣಿ ಸ್ಫೋಟದ ರೂವಾರಿಗಳು ಶತ್ರುರಾಷ್ಟ್ರಕ್ಕೆ ಪರಾರಿಯಾಗಲು ಕಾರಣ ಏನು ಅಂತ ಹೊಸ ಸುಳಿವುಗಳು ಸ್ಪಷ್ಟ ಚಿತ್ರಣ ನೀಡುತ್ತಿವೆ ಎಂದು ಮೋದಿ ಅವರು ಹೇಳಿದ್ದಾರೆ. ಆದರೆ, ಯಾರ ಹೆಸರನ್ನು ಕೂಡ ಇಲ್ಲಿ ಅವರು ಪ್ರಸ್ತಾಪಿಸಿಲ್ಲ.
ಈ ಸರಣಿ ಸ್ಫೋಟದ ಮಾಸ್ಟರ್ಮೈಂಡ್ಗಳ ಜೊತೆ ಮಹಾರಾಷ್ಟ್ರದ ಈ ರಾಜಕಾರಣಿಗಳು ಯಾವ ರೀತಿಯ ಸಂಬಂಧ ಹೊಂದಿದ್ದರು ಅಂತ ಮುಂದೊಂದು ದಿನ ಬಹಿರಂಗವಾಗಲಿದೆ. ಇಂಥವರು ಈಗ ತಮ್ಮ ರಕ್ಷಣೆಗಾಗಿ ಕೇಂದ್ರ ಸರ್ಕಾರ ಮತ್ತು ತನಿಖಾ ಸಂಸ್ಥೆಗಳಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ಅವರು ಕಿಡಿಕಾರಿದ್ದಾರೆ.
ಮತದಾನ ದಿನ ಹತ್ತಿರವಾಗುತ್ತಿದ್ದಂತೆ ಪ್ರಧಾನಿ ಮೋದಿ ಮಹಾರಾಷ್ಟ್ರದ ಇಬ್ಬರು ಮಹನೀಯರಾದ ವೀರ ಸಾವರ್ಕರ್, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸರಣಿ ಬಾಂಬ್ ಸ್ಫೋಟ ವಿಚಾರ ಪ್ರಸ್ತಾಪಿಸಿದ್ದಾರೆ. ನಿನ್ನೆ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ಸಾವರ್ಕರ್, ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರಿಗೆ ಭಾರತರತ್ನ ನೀಡುವ ಭರವಸೆ ನೀಡಿದೆ.
ನ್ಯೂಸ್ ಡೆಸ್ಕ್, ಟಿವಿ5