Monday, January 30, 2023

ನರೇಂದ್ರ ಮೋದಿ – ಕ್ಸಿ ಜಿನ್ ಪಿಂಗ್​ಗೆ ದೊಡ್ಡ ಜನಾದೇಶ ಸಿಕ್ಕಿದೆ..!

Must read

ಮಹಾಬಲಿಪುರಂ : ಪರಮ ಶತ್ರು ಚೀನಾ ಅಧ್ಯಕ್ಷ ಶುಕ್ರವಾರ ಭಾರತಕ್ಕೆ ಬಂದಿದ್ದಾರೆ. 2ನೇ ಬಾರಿಗೆ ಅನೌಪಚಾರಿಕ ಭೇಟಿ ನೀಡಿರುವ ಜಿನ್‌ಪಿಂಗ್‌ ನಡೆ ತೀವ್ರ ಕುತೂಹಲ ಮೂಡಿಸಿದೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಬೀಡುಬಿಟ್ಟಿರುವ ಜಿನ್‌ಪಿಂಗ್‌ ಜೊತೆ ಪ್ರಧಾನಿ ನರೇಂದ್ರ ಮೋದಿ ಇಂದು ಮಹತ್ವದ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಐತಿಹಾಸಿಕ ಭೇಟಿಗೆ ಶುಕ್ರವಾರ ತಮಿಳುನಾಡಿನ ಮಹಾಬಲಿಪುರಂ ಸಾಕ್ಷಿಯಾಗಿದೆ. ಚೆನ್ನೈಯಿಂದ 55 ಕಿಲೋ ಮೀಟರ್ ದೂರದಲ್ಲಿರುವ ಮಹಾಬಲಿಪುರಂನ ಮಾಮಲ್ಲಪುರಂನಲ್ಲಿ ಇಂದು ಮತ್ತು ನಾಳೆ ಅನೌಪಚಾರಿಕ ಶೃಂಗಸಭೆ ನಡೆಯುತ್ತಿದೆ. ಮೊದಲ ದಿನ ಬೇಟಿ ನೀಡಿದ ಉಭಯ ನಾಯಕರ ಮಹತ್ವದ ಭೇಟಿ ಆಗಿದ್ದು, ಎರಡು ದೇಶಗಳ ನಡುವಿನ ಹಲವು ವಿಷಯಗಳ ಕುರಿತಂತೆ ಅನೌಪಚಾರಿಕ ಮಾತುಕತೆ ನಡೆಯಲಾಗಿದೆ ಎಂದು ಹೇಳಲಾಗುತ್ತಿದೆ.

ಶುಕ್ರವಾರ ಮಧ್ಯಾಹ್ನ 2 ಗಂಟೆ 10 ನಿಮಿಷಕ್ಕೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್‌ ಅವರಿಗೆ ಸಾಂಪ್ರದಾಯಿಕವಾಗಿ ಕೆಂಪುಹಾಸಿನ ಸ್ವಾಗತ ಕೋರಿದ ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್‌ ಪುರೋಹಿತ್‌ ಹಾಗೂ ಸಿಎಂ ಪಳನಿಸ್ವಾಮಿ ಬರಮಾಡಿಕೊಂಡರು. ಜನಪದ ಕಲಾವಿದರು ನೃತ್ಯ ಪ್ರದರ್ಶಿಸಿ ಸ್ವಾಗತಿಸಿದರು. ಇದಾದ ಬಳಿಕ ಸಂಜೆ ಮಾಮಲ್ಲಪುರಂಗೆ ಜಿನ್‌ಪಿಂಗ್ ಬಂದಿಳಿದಾಗ ಪ್ರಧಾನಿ ಮೊದಿ ಆತ್ಮೀಯವಾಗಿ ಬರಮಾಡಿಕೊಂಡರು.

2018ರಲ್ಲಿ ಚೀನಾದ ವುಹಾನ್ ಎಂಬಲ್ಲಿ ಉಭಯ ನಾಯಕರೂ ಭೇಟಿಯಾದ ನಂತರ ಇದೀಗ ಇದೇ ಮೊದಲ ಬಾರಿಗೆ ಇಬ್ಬರೂ ಭೇಟಿಯಾಗಿದ್ದಾರೆ. ಒಂದೆಡೆ ಪಾಕಿಸ್ತಾನಕ್ಕೇ ತನ್ನ ಬೆಂಬಲ ಎಂದು ಚೀನಾ ಬಹಿರಂಗವಾಗಿಯೇ ಹೇಳಿಕೊಂಡು ಬರುತ್ತಿದೆ. ಕಳೆದ ಬುಧವಾರವಷ್ಟೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನೂ ಭೇಟಿಯಾಗಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅದನ್ನೇ ಪುನರುಚ್ಚರಿಸಿದ್ದರು. ಆದರೆ, ಇದೀಗ ಭಾರತಕ್ಕೆ ಆಗಮಿಸಿದ್ದು ಅವರ ನಡೆ ಹೇಗಿರಲಿದೆ ಎಂಬುದು ಕುತೂಹಲ ಸೃಷ್ಟಿಸಿದೆ.

ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್‌ 100 ಮಂದಿ ಒಳಗೊಂಡ ಪ್ರಬಲ ನಿಯೋಗದೊಂದಿಗೆ ಭಾರತಕ್ಕೆ ಬಂದಿದ್ದಾರೆ. ಪ್ರಧಾನಿ ಮೋದಿ ಜೊತೆ ಭಾರತದ ಭದ್ರತಾ ಸಲಹೆಗಾರ ಅಜಿತ್‌ ದೋವಲ್, ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಇದ್ದರೆ, ಜಿನ್‌ಪಿಂಗ್‌ ಜೊತೆ ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಮತ್ತು ಪಾಲಿಟ್‌ಬ್ಯೂರೋ ಸದಸ್ಯರು ಇದ್ದರು.

ಈ ಭೇಟಿ ಎರಡೂ ದೇಶಗಳ ನಡುವೆ ಸಹಕಾರ ಸಹಭಾಗಿತ್ವ ರೂಪಿಸುವ ಅನೌಪಚಾರಿಕ ಶೃಂಗ ಆಗಿರುವುದರಿಂದ ಉಭಯ ದೇಶಗಳ ನಡುವೆ ಯಾವುದೇ ತಿಳಿವಳಿಕೆ ಅಥವಾ ಒಪ್ಪಂದ ಏರ್ಪಡುವುದಿಲ್ಲ ಎನ್ನಲಾಗುತ್ತಿದೆ.

ತಮಿಳುನಾಡಿನ ಮಹಾಬಲಿಪುರಂನಲ್ಲಿ 18ನೇ ಶತಮಾನದಲ್ಲಿ ತಲೆ ಎತ್ತಿದ್ದ ಐತಿಹಾಸಿಕ ದೇಗುಲಗಳ ನಡುವೆ ಉಭಯ ನಾಯಕ ಭೇಟಿ ಮಹತ್ವದ ಪಡೆದಿದೆ. ಶುಕ್ರವಾರ ಮೋದಿ ಮತ್ತು ಜಿನ್‌ಪಿಂಗ್‌ ಸುಮಾರು 45 ನಿಮಿಷ ಕಾಲ ಮಾಮಲ್ಲಪುರಂ ಐತಿಹಾಸಿಕ ಸ್ಥಳದಲ್ಲಿ ವಿಹರಿಸಿದರು. ನಂತರ ಕಲಾ ಕ್ಷೇತ್ರದಲ್ಲಿ 20 ನಿಮಿಷ ಜೊತೆಯಾಗಿ ಕುಳಿತು ಭರತ ನಾಟ್ಯ, ಕೂಚುಪುಡಿ ಕಾರ್ಯಕ್ರಮ ವೀಕ್ಷಿಸಿದರು. ಈ ಎರಡು ದಿನದಲ್ಲಿ ಉಭಯ ನಾಯಕರು ಸುಮಾರು 6 ಗಂಟೆ ಕಾಲ ಜೊತೆಯಾಗಿಯೇ ಕಾಲ ಕಳೆಯಲಿದ್ದಾರೆ.

ಶುಕ್ರವಾರ ರಾತ್ರಿ ಶೋರ್‌ ದೇಗುಲ ಸಂಕೀರ್ಣದಲ್ಲಿ ಪ್ರಧಾನಿ ಮೋದಿ ಅವರು ಚೀನಾ ಅಧ್ಯಕ್ಷರಿಗೆ ಖಾಸಗಿ ಡಿನ್ನರ್ ಪಾರ್ಟಿ ಏರ್ಪಡಿಸಿದ್ದರು. ಒಂದೇ ಟೇಬಲ್‌ನಲ್ಲಿ ಭಾಷಾ ತರ್ಜುಮೆಗಾರರು ಬಿಟ್ಟರೆ ಬೇರೆ ಯಾರಿಗೂ ಅವಕಾಶ ಇರಲಿಲ್ಲ. ಟೇಬಲ್‌ನಲ್ಲಿ 8 ಮಂದಿ ಒಳಗೊಂಡ ನಿಯೋಗ ಇರಲಿದೆ. ಕಳೆದ ವರ್ಷ ನಡೆದ ವುಹಾನ್ ಶೃಂಗದಲ್ಲಿ ಭೇಟಿಯಾಗಿದ್ದಾಗ ಚರ್ಚೆಯಾಗಿದ್ದ ವಿಷಯಗಳ ಬಗ್ಗೆ, ಈಗ ಮೋದಿ – ಜಿನ್‌ಪಿಂಗ್‌ ಚರ್ಚೆ ನಡೆಸುವ ಸಾಧ್ಯತೆ ಇದೆ.

ಇಂದು ಈ ಉಭಯ ನಾಯಕರ ಭೇಟಿಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ಚರ್ಚೆಗಳು ಬಹಳ ಮುಕ್ತ ಹಾಗೂ ಸೌಹಾರ್ದವಾಗಿತ್ತು. ಉಭಯ ನಾಯಕರು ಆಯಾ ರಾಷ್ಟ್ರೀಯ ದೃಷ್ಟಿಕೋನಗಳ ಬಗ್ಗೆ ವಿವರವಾದ ಚರ್ಚೆಗಳನ್ನು ನಡೆಸಿದ್ದಾರೆ. ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹಾಗೂ ಪ್ರಧಾನಿ ಮಂತ್ರಿಗೆ ಅವರಿಗೆ ದೊಡ್ಡ ಜನಾದೇಶ ಸಿಕ್ಕಿದೆ. ಎಲ್ಲ ವಿಷಯಗಳ ಬಗ್ಗೆ ಪ್ರಧಾನ ಮಂತ್ರಿಯೊಂದಿಗೆ ಬಹಳ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಅವರು ಹೇಳಿದರು.

ಅಲ್ಲದೇ ವ್ಯಾಪಾರ ಸಂಬಂಧಿತ ವಿಷಯಗಳ ಬಗ್ಗೆ ಚರ್ಚೆಗಳನ್ನು ನಡೆಸಿದ್ದರು. ವ್ಯಾಪಾರದ ಮೌಲ್ಯವನ್ನು ಹೇಗೆ ಹೆಚ್ಚಿಸುವುದು ಎಂಬುದರ ಕುರಿತು ಈ ಸಭೆಯಲ್ಲಿ ಚರ್ಚೆಯಾಗಿದೆ ಎಂದು ವಿಜಯ್ ಗೋಖಲೆ​ ಅವರು ಹೇಳಿದರು.

ನ್ಯೂಸ್ ಡೆಸ್ಕ್, ಟಿವಿ5 ಕನ್ನಡ

Latest article