Tuesday, November 29, 2022

'ದಕ್ಷ ಅಧಿಕಾರಿಗಳನ್ನು ನೇಮಕ ಮಾಡದಿರೋದು ಈ ಘಟನೆಗೆ ಕಾರಣ' – ಮಾಜಿ ಸಚಿವ ಸಾ.ರಾ ಮಹೇಶ್​

Must read

ಮೈಸೂರು: ಮೈಮುಲ್ ನೇಮಕಾತಿಯಲ್ಲಿ ಅಕ್ರಮ ಆರೋಪ ವಿಚಾರದ ಕುರಿತು ಮಾಜಿ ಸಚಿವ ಸಾ.ರಾ ಮಹೇಶ್ ಅವರು ಮಾತನಾಡಿದ್ದು, ಈಗಾಗಲೇ ಹೈಕೋರ್ಟ್​ನಿಂದ ಮಧ್ಯಂತರ ಆದೇಶ ಬಂದಿದೆ. ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸದಂತೆ ಆದೇಶವಾಗಿದೆ ಎಂದು ಅವರು ಹೇಳಿದರು.

ಸೋಮವಾರ ಮೈಸೂರು ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಕ್ರಮ ಆಗಿದ್ಯಾ(?) ಇಲ್ವಾ (?) ಎಂದು ಬಹಿರಂಗವಾಗಬೇಕು. ನ್ಯಾಯಾಲಯದ ಆದೇಶವಿದ್ದರೂ ಪಟ್ಟಿ ಬಿಡುಗಡೆಗೆ ಯತ್ನ ಮಾಡಲಾಗಿದ್ದು, ಒಂದು ವೇಳೆ ಪಟ್ಟಿ ಬಿಡುಗಡೆ ಮಾಡಿದ್ರೆ ನ್ಯಾಯಾಂಗ ನಿಂದನೆ ಕೇಸ್ ದಾಖಲು ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇನ್ನು ಆಡಳಿತ ಮಂಡಳಿ ಬದಲಾಗುವ ಮುನ್ನ ಎಲ್ಲಾ ಪ್ರಕ್ರಿಯೆ ಮುಗಿಸುವ ಹುನ್ನಾರ ನಡೆದಿದೆ. ಮುಂದಿನ ತಿಂಗಳು ಈ ಅವಧಿ ಮುಗಿಯಲಿದೆ. ಸಹಕಾರ ಮಂತ್ರಿಗಳು ಇದಕ್ಕೆ ಉತ್ತರ ನೀಡಬೇಕು. ಯಾರ ಒತ್ತಡಕ್ಕೆ ಅವರ ಮಣಿದಿದ್ದಾರೆ ಅನ್ನೋದನ್ನು ಸ್ಪಷ್ಟಪಡಿಸಬೇಕು. ಸರ್ಕಾರ ಬೇರೆಯವರ ಕೈಗೊಂಬೆಯಾಗಿ ಒತ್ತಡಕ್ಕೆ ಮಣಿದಿದೆ. ಹೀಗಾಗಿ ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಸಾ.ರಾ ಮಹೇಶ್ ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಇದೇ ವೇಳೆ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆ ಮೇಲೆ ದಾಳಿ ವಿಚಾರದ ಬಗ್ಗೆ ಮಾತನಾಡಿದ ಅವರು, ಇದೇನು ಬಿಹಾರನಾ(?) ಸಂಪರ್ಕ ಇಲ್ಲದ ಹಳ್ಳಿಯಲ್ಲಿ ಘಟನೆ ನಡದಿದ್ಯಾ(?) ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಸದ್ಯ ಇದು ಸಂಪೂರ್ಣ ಗುಪ್ತಚರ ಇಲಾಖೆ ವೈಫಲ್ಯ. ಗೃಹ ಇಲಾಖೆ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ದಕ್ಷ ಅಧಿಕಾರಿಗಳನ್ನು ನೇಮಕ ಮಾಡದಿರೋದು ಈ ಘಟನೆಗೆ ಕಾರಣ. ಬೇರೆ ಬೇರೆ ಕಾರಣಗಳಿಗೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪೊಲೀಸ್ ಇಲಾಖೆ ನಿದ್ದೆ ಮಾಡುತ್ತಿದೆ. ಇದು ತಲೆ ತಗ್ಗಿಸುವ ವಿಚಾರವಾಗಿದೆ ಎಂದು ಸಾ.ರಾ ಮಹೇಶ್ ವಾಗ್ದಾಳಿ ನಡೆಸಿದ್ದಾರೆ.

Latest article