Tuesday, November 29, 2022

ಚಿರಂಜೀವಿ 65ನೇ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ಮೆಗಾ ಪ್ಲಾನ್

Must read

ಮೆಗಾಸ್ಟಾರ್​ ಚಿರಂಜೀವಿ 65ನೇ ವರ್ಷದ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಪ್ರತಿವರ್ಷ ಅಭಿಮಾನಿಗಳು ಬಹಳ ಅದ್ಧೂರಿಯಾಗಿ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸುತ್ತಿದ್ದರು. ಆದರೆ, ಈ ವರ್ಷ ಕೊರೊನಾ ಅದಕ್ಕೆ ಬ್ರೇಕ್​​ ಹಾಕಿದೆ. ಆದರೆ, ಅಭಿಮಾನಿಗಳ ಸಂಭ್ರಮಕ್ಕೆ ಬ್ರೇಕ್​ ಹಾಕೋರೇ ಇಲ್ಲ. ಈ ವರ್ಷ ಬಹಳ ವಿಭಿನ್ನವಾಗಿ ಮೆಗಾ ಸೆಲೆಬ್ರೇಷನ್​ಗೆ ಪ್ಲಾನ್​ ಮಾಡಿದ್ದಾರೆ.

ಮೆಗಾಸ್ಟಾರ್​ ಚಿರಂಜೀವಿ. ಡ್ಯಾನ್ಸ್​ ಐಕಾನ್. ಸ್ಟೈಲ್​​ ಕಿಂಗ್​. ಮಾಸ್​ ಪ್ರೇಕ್ಷಕರ ಫೇವರಿಟ್​ ಆ್ಯಕ್ಟರ್. 80-90ರ ದಶಕದಲ್ಲಿ ಟಾಲಿವುಡ್​ನಲ್ಲಿ ಸೆನ್ಸೇಷನ್​ ಕ್ರಿಯೇಟ್​ ಮಾಡಿದ ​ಹೀರೋ. ಒಂದ್ಕಾಲದಲ್ಲಿ ಬಾಲಿವುಡ್​ ಬಿಗ್​ ಬಿನ ಮೀರಿಸಿದ ಸೌತ್​​ ಸೂಪರ್​ ಸ್ಟಾರ್. ಇವತ್ತಿಗೂ ಯಂಗ್​ ಹೀರೋಗಳಿಗೆ ಟಫ್​ ಕಾಂಪಿಟೇಷನ್​ ಕೊಡ್ತಿರೋ ಸ್ಟಾರ್​ ಈ ಮೆಗಾ ಸ್ಟಾರ್.

ಎನ್​ಟಿಆರ್​ ಬಿಟ್ರೆ, ಟಾಲಿವುಡ್​ನಲ್ಲಿ ದೊಡ್ಡಮಟ್ಟದಲ್ಲಿ ಕ್ರೇಜ್​ ಸೃಷ್ಟಿಸಿದ ನಟ ಚಿರಂಜೀವಿ. ಬ್ಲಾಕ್​ಬಸ್ಟರ್​ ಸಿನಿಮಾಗಳಿಂದ ಬಾಕ್ಸಾಫೀಸ್​ ಶೇಕ್​ ಮಾಡ್ತಾ, ತೆಲುಗು ಚಿತ್ರರಂಗದ ಅನಭಿಷಿಕ್ತ ದೊರೆಯಾಗಿ ಮೆರೆಯುತ್ತಿರುವ ನಟ ಚಿರಂಜೀವಿ. ಮೆಗಾಸ್ಟಾರ್​ ಚಿರಂಜೀವಿಗೆ ಫ್ಯಾನ್​ ಫಾಲೋಯಿಂಗ್​ ಹೇಗಿದೆ ಅನ್ನೋದನ್ನ ಬಿಡಿಸಿ ಹೇಳೋದೇ ಬೇಡ. ಇನ್ನು ಚಿರು ಬರ್ತ್​ಡೇ ಅಂದ್ರೆ, ಅಭಿಮಾನಿಗಳಿಗೂ ದೊಡ್ಡ ಹಬ್ಬ.

ಆಗಸ್ಟ್​ 22, ಮೆಗಾಸ್ಟಾರ್​ ಹುಟ್ಟುಹಬ್ಬ. ಅಭಿಮಾನಿಗಳ ಪಾಲಿಗೆ ಅಂದೇ ಯುಗಾದಿ. ಅಂದೇ ದೀಪಾವಳಿ. ಪ್ರತಿವರ್ಷ ಅಭಿಮಾನಿಗಳ ಬಹಳ ಅದ್ಧೂರಿಯಾಗಿ ನೆಚ್ಚಿನ ನಟನ​ ಹುಟ್ಟುಹಬ್ಬ ಆಚರಿಸುತ್ತಿದ್ದರು. ರಕ್ತದಾನ ಸೇರಿದಂತೆ ಸಾಮಾಜಿಕ ಕಾರ್ಯಕ್ರಮಗಳು ಮೂಲಕ ಆ ದಿನವನ್ನ ವಿಶೇಷವಾಗಿಸುತ್ತಿದ್ದರು. ಹೈದರಾಬಾದ್​​ ಶಿಲ್ಪ ಕಲಾವೇದಿಕೆಯಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಸಲಾಗ್ತಿತ್ತು. ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಫ್ಯಾನ್ಸ್​ ಜೊತೆಗೆ ಮೆಗಾ ಫ್ಯಾಮಿಲಿ ಸ್ಟಾರ್​ ಭಾಗಿಯಾಗ್ತಿದ್ರು. ಇನ್ನು ಚಿರು ಕೂಡ ಬಾಲಿವುಡ್​ ಸೇರಿದಂತೆ ಎಲ್ಲಾ ಇಂಡಸ್ಟ್ರಿಗಳಲ್ಲಿರೋ ಸ್ನೇಹಿತರನ್ನ ಕರೆದು ಪಾರ್ಟಿ ಕೊಡುತ್ತಿದರು. ಆದರೆ, ಈ ವರ್ಷ ಅದಕ್ಕೆಲ್ಲಾ ಬ್ರೇಕ್​ ಬಿದ್ದಿದೆ.

ಕೊರೊನಾ ಹಾವಳಿ ಹಿನ್ನಲೆಯಲ್ಲಿ ಮೆಗಾಸ್ಟಾರ್​ ಚಿರಂಜೀವಿ ಹುಟ್ಟುಹಬ್ಬವನ್ನ ಅಭಿಮಾನಿಗಳೆಲ್ಲಾ ಒಂದೆಡೆ ಸೇರಿ ಅದ್ಧೂರಿಯಾಗಿ ಆಚರಿಸೋಕ್ಕೆ ಸಾಧ್ಯವಾಗ್ತಿಲ್ಲ. ಆದರೆ, ಅಭಿಮಾನಿಗಳು ಸೋಷಿಯಲ್​ ಮೀಡಿಯಾದಲ್ಲೇ ಮೆಗಾ ಬರ್ತ್​ಡೇ ಸೆಲೆಬ್ರೇಷನ್​ಗೆ ಪ್ಲಾನ್​ ಮಾಡಿದ್ದಾರೆ. ಒಂದರ್ಥದಲ್ಲಿ ಈಗಾಗಲೇ ಸೋಷಿಯಲ್​ ಮೀಡಿಯಾದಲ್ಲಿ ಚಿರಂಜೀವಿ ಬರ್ತ್​ಡೇ ಸೆಲೆಬ್ರೇಷನ್​ ಶುರುವಾಗಿದೆ.

ಕೊರೊನಾ ಹಾವಳಿ ಹಿನ್ನಲೆಯಲ್ಲಿ ಎಲ್ಲಾ ಸೆಲೆಬ್ರೇಷನ್​​ ಸೋಷಿಯಲ್​ ಮೀಡಿಯಾಗೆ ಸೀಮಿತವಾಗ್ತಿದೆ. ಸ್ಪೆಷಲ್​ ಡಿಪಿಗಳನ್ನ ಡಿಸೈನ್​ ಮಾಡಿ ಅದನ್ನ ಇಡೀ ದಿನ ಟ್ವಿಟ್ಟರ್​ ಟ್ರೆಂಡ್​ನಲ್ಲಿ ಇರುವಂತೆ ನೋಡಿಕೊಳ್ಳೋದು, ಕಾಮನ್​ ಆಗ್ಬಿಟ್ಟಿದೆ. ಮೆಗಾಸ್ಟಾರ್​ ಹುಟ್ಟುಹಬ್ಬಕ್ಕೂ ಇದೇ ರೀತಿ ಪ್ಲಾನ್​ ಮಾಡಲಾಗ್ತಿದೆ. ಚಿರಂಜೀವಿ ಹುಟ್ಟುಹಬ್ಬಕ್ಕೆ ಸ್ಪೆಷಲ್​ ಕಾಮನ್​ ಮೋಷನ್​ ಪೋಸ್ಟರ್​ ರೆಡಿ ಮಾಡುತ್ತಿದ್ದಾರೆ ಫ್ಯಾನ್ಸ್​​. ಈ ಪೋಸ್ಟರ್​ನ ಭಾರತೀಯ ಚಿತ್ರರಂಗದ 65 ಜನ ಸೆಲೆಬ್ರೆಟಿಗಳು ಲಾಂಚ್​ ಮಾಡ್ತಿರೋದು ವಿಶೇಷ.

ಚಿರಂಜೀವಿಗೆ ಅಭಿಮಾನಿಗಳು ಮಾತ್ರವಲ್ಲ. ಎಲ್ಲಾ ಇಂಡಸ್ಟ್ರಿಗಳಲ್ಲೂ ಸ್ನೇಹಿತರಿದ್ದಾರೆ. ಅದಕ್ಕೆ ಬಾಲಿವುಡ್ನಲ್ಲೂ ಸಹ. ಚಿರಂಜೀವಿ 65ನೇ ವರ್ಷ ಹುಟ್ಟುಹಬ್ಬದ ಕಾಮನ್​ ಮೋಷನ್​ ಪೋಸ್ಟರ್ನ 65 ಜನ ಸೆಲೆಬ್ರಿಟಿಗಳಿಂದ ಲಾಂಚ್​ ಮಾಡಿಸಲಾಗುತ್ತಿದೆ. ಆ ಮೂಲಕ ನೆಚ್ಚಿನ ನಟನಿಗೆ ಸ್ಪೆಷಲ್​ ಟ್ರೀಟ್​ ಕೊಡೋಕ್ಕೆ ಪ್ಲಾನ್​ ಮಾಡಿದ್ದಾರೆ. ರಾಧಿಕಾ ಶರತ್​ಕುಮಾರ್​, ಮಮ್ಮುಟಿ, ವೆಂಕಟೇಶ್​ ಹೀಗೆ 65 ಜನ ನಟನಟಿಯರು ಚಿರು ಫ್ಯಾನ್ಸ್​ ಜೊತೆ ಕೈ ಜೋಡಿಸಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಶಿವಣ್ಣ, ಗೋಲ್ಡನ್​ ಸ್ಟಾರ್​ ಗಣೇಶ್, ರಶ್ಮಿಕಾ ಮಂದಣ್ಣ ಸೇರಿದಂತೆ ಸಾಕಷ್ಟು ಜನ ಸಾಥ್​ ಕೊಡ್ತಿದ್ದಾರೆ. ಈಗಾಗಲೇ ಈ ಬಗ್ಗೆ ಸ್ಪೆಷಲ್​ ಟೀಸರ್​ ರೆಡಿ ಮಾಡಿ ಫ್ಯಾನ್ಸ್​ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡ್ತಿದ್ದಾರೆ.

ಇನ್ನು ಮೆಗಾಸ್ಟಾರ್​ ಬರ್ತ್​ಡೇ ಸ್ಪೆಷಲ್​ ರ‍್ಯಾಪ್‌ ಸಾಂಗ್​ ಕೂಡ ರೆಡಿಯಾಗ್ತಿದೆ. ಈಗಾಗಲೇ ಆ ಸಾಂಗ್​ ಟೀಸರ್​ ರಿಲೀಸ್ ಆಗಿದೆ. ಮಕ್ಕಳು ಚಿರಂಜೀವಿ ಮುಖವಾಡ ಹಾಕಿಕೊಂಡು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಸಾಂಗ್​ ಮೇಕಿಂಗ್​ ಅದ್ಧೂರಿಯಾಗಿದ್ದು, ಚಿರು ಹುಟ್ಟುಹಬ್ಬಕ್ಕೆ ಸ್ಪೆಷಲ್​ ಗಿಫ್ಟ್​ ಅನ್ನಬಹುದು.

ನೆಚ್ಚಿನ ನಟನ ಹುಟ್ಟುಹಬ್ಬವನ್ನ ಇಷ್ಟು ಸ್ಪೆಷಲ್​ ಮಾಡೋಕ್ಕೆ ಪ್ಲಾನ್​ ಮಾಡಿದ್ದಾರೆ ಫ್ಯಾನ್ಸ್​. ಅಂತಹ ಫ್ಯಾನ್ಸ್​ಗೆ ಚಿರಂಜೀವಿ ಕಡೆಯಿಂದಲೂ ಬಿಗ್ ಸರ್​ಪ್ರೈಸ್​ಗಳು ಕಾದಿದೆ. ಸೈರಾ ನರಸಿಂಹ ರೆಡ್ಡಿ ಸಿನಿಮಾ ನಂತರ ಚಿರು ಆಚಾರ್ಯ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಈ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಫಸ್ಟ್​ ಲುಕ್​ ಚಿರು ಬರ್ತ್ ಡೇ ಸ್ಪೆಷಲ್ಲಾಗಿ ರಿವೀಲ್​ ಆಗಲಿದೆ.

ಚಿರು ಮಲಯಾಳಂನ ಲೂಸಿಫರ್​ ರೀಮೇಕ್​ನಲ್ಲಿ ನಟಿಸಲು ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ. ಡೈರೆಕ್ಟರ್ ಬಾಬಿ ಆ್ಯಕ್ಷನ್​ ಕಟ್​ನಲ್ಲೂ ಚಿರು ನಟಿಸೋದು ಪಕ್ಕಾ ಆಗಿದೆ. ಈ ಎರಡು ಸಿನಿಮಾಗಳನ್ನ ಅಫೀಷಿಯಲ್ಲಾಗಿ ಆಗಸ್ಟ್​ 22ರಂದು ಅನೌನ್ಸ್​ ಮಾಡಲಿದ್ದಾರೆ. ಒಟ್ನಲ್ಲಿ ಈ ವರ್ಷ ಮೆಗಾಸ್ಟಾರ್​ ಹುಟ್ಟುಹಬ್ಬ ವಿಭಿನ್ನವಾಗಿ ಮತ್ತು ಅಷ್ಟೇ ವಿಶೇಷವಾಗಿ ಇರಲಿದೆ.

Latest article