ಬೆಂಗಳೂರು: ಪೊಲೀಸರ ಪರ್ಮಿಷನ್ ತೊಗೊಂಡೇ ಚಿತ್ರರಂಗದ ವಿಕಟಕವಿ ಯೋಗರಾಜ್ ಭಟ್ರು ಕೊರೊನಾ ಜಾಗೃತಿಯ ಹಾಡಿಗೆ ಆ್ಯಕ್ಷನ್ ಕಟ್ ಹೇಳಿರೋದು ಎಲ್ಲರಿಗೂ ಗೊತ್ತಿರುವ ವಿಷಯ. ಇಂದು ಫ್ರೀಡಂ ಪಾರ್ಕ್ ಬಳಿ ಚಿತ್ರೀಕರಣ ನಡೆದಿದ್ದು, ಕೊರೊನ ನಿಯಂತ್ರಣಕ್ಕೆ ಕೆಲಸಮಾಡುತ್ತಿರುವ ಸಿಬ್ಬಂದಿಗಳನ್ನು ಬಳಸಿ ಶೂಟಿಂಗ್ ಮಾಡಲಾಗುತ್ತಿದೆ.
ಇನ್ನು ಈ ಬಗ್ಗೆ ಮಾತನಾಡಿದ ನಿರ್ದೇಶಕ ಯೋಗರಾಜ್ ಭಟ್ರು, ಯಾರೋ ನೀನು ಮಾನವ ಕೇಳುತ್ತಿಹುದು ಕರೋನ ಎಂಬ ಸಾಲಿನ ಮೂಲಕ ಹಾಡು ಪ್ರಾರಂಭವಾಗುತ್ತದೆ. ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಹಾಡಿದ್ದು, ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ ಎಂದರು.
ಅಲ್ಲದೇ, ಈ ಜಾಗೃತಿ ಹಾಡಿಗೆ ಸಿಎಂ ಯಡಿಯೂರಪ್ಪ, ಸುಧಾಮೂರ್ತಿ, ಆರೋಗ್ಯ ಸಚಿವ ಶ್ರೀರಾಮುಲು, ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರುಗಳ ಚಿತ್ರೀಕರಣ ಮುಗಿದಿದೆ.
ಸಧ್ಯ ಕೊರೋನ ವಾರಿಯರ್ಸ್ನಲ್ಲಿ ಮಾಧ್ಯಮಗಳದ್ದು ಕೂಡ ಮಹತ್ತರವಾದ ಪಾತ್ರ ಇದೆ. ಎಲ್ಲಾ ಮನೆಯಲ್ಲಿ ಇರುವಾಗ ನೀವು ಮಾಧ್ಯಮಗಳು ಹೊರಗಡೆ ಬಂದು ಜನರಿಗೆ ಮಾಹಿತಿ ನೀಡುತ್ತೀರಾ. ಲಾಕ್ ಡೌನ್ ನಡುವಿನಲ್ಲಿ ಜನಸಾಮಾನ್ಯರ ಜೀವನ ಶೈಲಿ ಕೂಡ ಈ ಹಾಡಿನಲ್ಲಿ ಇದೆ ಎಂದು ಹೇಳಿದ್ದಾರೆ.