ವಿಜಯಪುರ: ಕರ್ನಾಟಕ, ಮಹಾರಾಷ್ಟ್ರ ಸಹೋದರ ರಾಜ್ಯಗಳು ಹೀಗಾಗಿ ಕೊಡುವುದು, ತೆಗೆದುಕೊಳ್ಳುವುದು ಸಹಜ ಪ್ರಕ್ರಿಯೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ಗುರುವಾರ ಹೇಳಿದ್ದಾರೆ.
ನಗರದಲ್ಲಿಂದು ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ನೀರು ಬಿಡುವ ಕುರಿತು ಸಿಎಂ ಹೇಳಿಕೆ ಬಗ್ಗೆ ಯತ್ನಾಳ ಅವರು ಸರ್ಮರ್ಥಿಸಿಕೊಂಡರು. ಮಹಾದಾಯಿ ವಿವಾದದಲ್ಲಿ ಗೋವಾ ಮೊಂಡುತನ ಮಾಡುತ್ತಿದೆ. ಮಹಾದಾಯಿ ವಿವಾದದ ಕುರಿತು ಈ ಹಿಂದೆಯೂ ಚರ್ಚಿಸಲಾಗಿದೆ. ಮಹಾರಾಷ್ಟ್ರದ ಜತ್ ಭಾಗದಲ್ಲಿ ಕನ್ನಡಿಗರೇ ಹೆಚ್ಚಾಗಿದ್ದಾರೆ ಎಂದರು.
ಈ ಹಿಂದೆ ಜತ್ತಿ ಸಿಎಂ ಆಗಿದ್ದಾಗ ಮಾಡಿದ ಪ್ರಮಾದವಾಗಿದೆ. ಈ ನೀರು ಹಂಚಿಕೆ ಬಗ್ಗೆ ಕರ್ನಾಟಕ, ಮಹಾರಾಷ್ಟ್ರ ಸಿಎಂ ಪರಸ್ಪರ ಮಾತುಕತೆ ಮೂಲಕ ಬಗೆಹರಿಸಬೇಕು. ಕರ್ನಾಟಕ, ಮಹಾರಾಷ್ಟ್ರ ಒಂದೇ ತಾಯಿಯ ಮಕ್ಕಳಿದ್ದಂತೆ. ಭಾರತ ಪಾಕಿಸ್ತಾನಕ್ಕೆ ನೀರು ಬಿಟ್ಟಿದೆ. ಈ ಹಿಂದೆ ಮಹಾರಾಷ್ಟ್ರ ಹಣ ಪಡೆಯದೇ ಕರ್ನಾಟಕಕ್ಕೆ ಕೃಷ್ಣಾ, ಭೀಮಾ ನದಿಗೆ ನೀರು ಬಿಡುಗಡೆ ಮಾಡಿದೆ ಎಂದು ತಿಳಿಸಿದರು.
ಕೊಡುವುದು, ಕೊಳ್ಳುವ ನೀತಿ ಅನುಸರಿಸುವುದು ಸೂಕ್ತ. ಈ ಮೂಲಕ ಬಹುದಿನಗಳ ಬೇಡಿಕೆ ಈಡೇರಿಸಬೇಕು. ಗಡಿ, ಜಲ ವಿವಾದ ಮೀರಿ ಮಾನವೀಯತೆ ಮೇಲೆ ವರ್ತಿಸುವುದು ಅಗತ್ಯವಾಗಿದೆ. ಮಹಾದಾಯಿ ವಿವಾದದಲ್ಲಿ ಕೇಂದ್ರ ಸರಕಾರ ಗೋವಾ ಜೊತೆ ಮಾತನಾಡಬೇಕು. ಮಹಾರಾಷ್ಟ್ರ, ಕರ್ನಾಟಕ ಒಂದಾದರೆ ಗೋವಾ ಒಪ್ಪಲೇ ಬೇಕಾಗುತ್ತದೆ. ಈ ಮೂಲಕ ಮಹಾದಾಯಿ ಸಮಸ್ಯೆಗೆ ಪರಿಹಾರ ಸಿಗಲಿದೆ. ಸಿಎಂ ಈಗಷ್ಟೇ ಅಲ್ಲ, ಚುನಾವಣೆ ಬಳಿಕವೂ ಈ ಬಗ್ಗೆ ಗಮನ ಹರಿಸಬೇಕು ಎಂದು ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದ್ದಾರೆ.