Wednesday, May 18, 2022

'ಎಲ್ಲರೂ ಕೂಡ ಹೊರಬೇಕಾಗಿರುವ ಭಾರ, ಸ್ವಲ್ಪ ಸಹಿಸಿಕೊಳ್ಳಬೇಕಾಗುತ್ತೆ' – ಡಿಸಿಎಂ ಲಕ್ಷ್ಮಣ್ ಸವದಿ

Must read

ಬೆಳಗಾವಿ: ಕಾರ್ಮಿಕರ ಹಿತದೃಷ್ಟಿಯಿಂದ ಸಿಂಗಲ್ ಫೇರ್ ತೆಗೆದುಕೊಂಡು ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಸಾರಿಗೆ ಸಚಿವ, ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು ಶನಿವಾರ ಹೇಳಿದ್ದಾರೆ.

ವಲಸೆ ಕಾರ್ಮಿಕರಿಂದ ಕೆಸ್​ಆರ್​ಟಿಸಿ ಬಸ್​​ಗಳಲ್ಲಿ ದುಪ್ಪಟ್ಟು ದರ ವಸೂಲಿ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಟಿವಿ 5 ಕನ್ನಡ ಜೊತೆ ಮಾತನಾಡಿರುವ ಅವರು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಸ್​​ನಲ್ಲಿ ಕಡಿಮೆ ಜನರನ್ನು ಕಳಿಸಬೇಕಾಗುತ್ತೆ, ಕಾರ್ಮಿಕರನ್ನು ಅವರ ಊರಿಗೆ ಬಿಟ್ಟು ವಾಪಸ್ ಬರುವಾಗ ಖಾಲಿ ಬರಬೇಕಾಗುತ್ತೆ, ಆದರೂ ಈ ಹೊರೆ ಸಹಿಸಿಕೊಂಡು ಸಿಂಗಲ್ ಫೇರ್ ಪಡೆಯಲಾಗುತ್ತೆ ಎಂದು ಅವರು ತಿಳಿಸಿದರು.

ವಲಸೆ ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಸಹಾಯ ಮಾಡಿದ್ದೇವೆ. ಎಲ್ಲರೂ ಕೂಡ ಹೊರಬೇಕಾಗಿರುವ ಭಾರ, ಸ್ವಲ್ಪ ಸಹಿಸಿಕೊಳ್ಳಬೇಕಾಗುತ್ತೆ, ಮೇ 4ರಿಂದ ಕೊರೊನಾ ಹಾಟ್​ ಸ್ಪಾಟ್​ತಾಲ್ಲೂಕು ಹೊರತುಪಡಿಸಿ ಇತರೆಡೆ ಸಾರಿಗೆ ಸಂಚಾರವಿರಲಿದೆ. ಆಯಾ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಸಾರಿಗೆ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ನುಡಿದರು.

ಹೊರರಾಜ್ಯಗಳ ಕಾರ್ಮಿಕರನ್ನು ರಾಜ್ಯಕ್ಕೆ ಕರೆತರುವ ಬಗ್ಗೆ ಮಾತನಾಡಿದ ಅವರು, ಹೊರರಾಜ್ಯದ ಕಾರ್ಮಿಕರನ್ನು ಕರೆತಂದ ಮೇಲೆ ಕ್ವಾರಂಟೈನ್​ನಲ್ಲಿ ಇರಿಸಬೇಕಾಗುತ್ತದೆ. ಈ ಕುರಿತು ಇನ್ನೆರಡು ದಿನಗಳಲ್ಲಿ ನಿರ್ಧರಿಸಲಾಗುತ್ತೆ, ಗೋವಾದಲ್ಲಿ ಕೊರೊನಾ ಕೇಸ್ ಜೀರೋ ಇದೆ. ಅದೇ ಮಹಾರಾಷ್ಟ್ರದಲ್ಲಿ ಕೇಸ್ ಜಾಸ್ತಿ ಇದಾವೆ. ಈಗಾಗಲೇ ಮುಂಬೈನಿಂದ ಮಂಡ್ಯಕೆ ಶವ ತರಲಾಗಿತ್ತು. ಹೀಗಾಗಿ ಮುಂಜಾಗೃತ ಕ್ರಮವಾಗಿ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರು ಸ್ಪಷ್ಟನೆ ನೀಡಿದ್ದಾರೆ.

Latest article