Monday, January 30, 2023

ಈ ಸರ್ಕಾರಕ್ಕೆ ಪಂಚೇಂದ್ರಿಯಗಳೇ ಇಲ್ಲ…!

Must read

ಬಾಗಲಕೋಟೆ: ಸರ್ಕಾರ ಜನಪರ ಆಡಳಿತ ಕೊಡುವ ನಿಟ್ಟಿನಲ್ಲಿ ವಿರೋಧ ಪಕ್ಷದಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ. ಕಾಯಾ ವಾಚಾ ಮನಸಾ ಕೆಲಸ ಮಾಡುತ್ತೇನೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರು ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಮಾಧ್ಯಮಗಳನ್ನು ಹೊರಗಿಟ್ಟಿದ್ದು ಸರಿಯಲ್ಲ. ಮಾಧ್ಯಮ ಸ್ವಾತಂತ್ರ್ಯದ ಹಕ್ಕನ್ನು ಮೊಟಕುಗೊಳಿಸುವುದು ಸರಿಯಲ್ಲ. ವಿಧಾನಪರಿಷತ್ತಿನಲ್ಲಿ ನಮ್ಮ ಸಭಾಪತಿಗಳು ಎಲ್ಲಾ ಮಾಧ್ಯಮದವರಿಗೆ ಅವಕಾಶ ಕಲ್ಪಿಸಿದ್ದಾರೆ.

ಜನರಿಂದ ಆಯ್ಕೆಯಾದ ನಾವು ಜನರ ಒಳಿತಿಗಾಗಿ ಹೇಗೆ ಕೆಲಸ ಮಾಡುತ್ತೇವೆ ಅನ್ನುವುದನ್ನು ಮಾಧ್ಯಮದ ಮೂಲಕ ಜನರು ಗಮನಿಸುತ್ತಾರೆ. ಆದರೆ ಮಾಧ್ಯಮಗಳ ಕಣ್ಣಿಗೆ ಬಟ್ಟೆ ಕಟ್ಟಿ ಮಾಧ್ಯಮಗಳನ್ನು ಹೊರಗಿಡುವುದು ಸರಿಯಲ್ಲ ಎಂದು ಅವರು ರಾಜ್ಯ ಸರ್ಕಾರದ ನಡೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಐಟಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವಕ್ಕೆ ಮಾರಕವಾಗುವ ಕೆಲಸ ಪ್ರಧಾನಿ ಮೋದಿ ಅವರಿಂದ ಸತತವಾಗಿ ನಡೆಯುತ್ತಿಲೇ ಇದೆ. ಮಾಜಿ ಡಿಸಿಎಂ ಜಿ.ಪರಮೇಶ್ವರ ಮೇಲೆ ಐಟಿ ದಾಳಿಯು ರಾಜಕೀಯ ದುರುದ್ಧೇಶದಿಂದ ನಡೆದಿದೆ. ಈ ದೇಶದ ಸಮರ್ಥ ಮುಖಂಡರ ಮನೆ ಮೇಲೆ ದಾಳಿ ನಡೆಯುತ್ತಿದೆ. ಅದರಲ್ಲೂ ಕಾಂಗ್ರೆಸ್ ಮುಖಂಡರ ಮನೆ ಮೇಲೆ ದಾಳಿ ನಡೆಯುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಐಟಿಗೆ ಕಾಂಗ್ರೆಸ್ ನವರು ಜಗ್ಗುವುದಿಲ್ಲ. ಕೇವಲ ನಮ್ಮ ನಾಯಕರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ನಮ್ಮ ನಾಯಕರ ಮೇಲೆ ಐಟಿ ದಾಳಿ ಮಾಡಿದರೆ ನಾವು ಕುಗ್ಗುತ್ತೀವಿ ಅನ್ನುವುದು ಅಸಾಧ್ಯದ ಮಾತು ಎಂದ ಅವರು, ಪ್ರಜಾಪ್ರಭುತ್ವದಲ್ಲಿ ಸ್ವಂತ ಅಭಿಪ್ರಾಯ ಹೇಳುವ ಹಕ್ಕಿದೆ ಎಂದರು.

ಅಲ್ಲದೇ ಸರ್ಕಾರದ ವಿರುದ್ಧ ಮಾತನಾಡಿದ ಅವರು, ನೆರೆ ಸಂತ್ರಸ್ತರಿಗೆ ಐದು ಲಕ್ಷದ ಬದಲಿಗೆ ಹತ್ತು ಲಕ್ಷ ರೂಪಾಯಿ ಕೊಡುವಂತೆ ಒತ್ತಾಯ ಮಾಡಿದ್ದೇನೆ. ಈ ಹಿಂದೆ ನಮ್ಮ ಸರ್ಕಾರ ಕೊಡಗಿನಲ್ಲಿ ಹತ್ತು ಲಕ್ಷ ಪರಿಹಾರ ನೀಡಲಾಗಿದೆ. ಈ ಸರ್ಕಾರಕ್ಕೆ ಪಂಚೇಂದ್ರಿಯಗಳು ಇಲ್ಲ. ಕಿವಿ, ಮೂಗು, ಕಣ್ಣು, ಚರ್ಮ ಇಲ್ಲದ ಚರ್ಮಗೇಡಿ ಸರ್ಕಾರ ಎಂದು ಎಸ್​.ಆರ್ ಪಾಟೀಲ್ ಅವರು ಲಘುವಾಗಿ ಟೀಕಿಸಿದ್ದಾರೆ.

Latest article