ಅವಧಿಪೂರ್ವ ಪ್ರಸವದ ವೇಳೆ ಅವಿವಾಹಿತ ಯುವತಿ ಸಾವು

ಅವಧಿಪೂರ್ವ ಪ್ರಸವದ ವೇಳೆ ಅವಿವಾಹಿತ ಯುವತಿ ಸಾವು

ಶಿವಮೊಗ್ಗ: ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಅವಧಿಪೂರ್ವ ಪ್ರಸವದ ವೇಳೆ ಅವಿವಾಹಿತ ಯುವತಿ ಸಾವನ್ನಪ್ಪಿದ್ದಾಳೆ. ಶಿವಮೊಗ್ಗ ತಾಲೂಕಿನ ಕುಂಸಿ ಗ್ರಾಮದ ಅಶ್ವಿನಿ ಮೃತ ಯುವತಿ.

ಅಶ್ವಿನಿ ಆರೋಗ್ಯದಲ್ಲಿ ಹದಗೆಟ್ಟಿದ್ದರಿಂದ ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ಆಕೆಗೆ ಅವಧಿಪೂರ್ವ ಹೆರಿಗೆಯಾಗಿದ್ದು, ಎರಡು ಗಂಟೆಯ ಒಳಗಾಗಿ ತಾಯಿ-ಮಗು ಇಬ್ಬರೂ ಸಾವನ್ನಪ್ಪಿದ್ದಾರೆ. ಇನ್ನು, ಅಶ್ವಿನಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಈಕೆ ಬೆಂಗಳೂರಿಗೆ ತೆರಳುವ ಮೊದಲು ಆಯನೂರು ಸಮೀಪದ ಮಧುಸೂದನ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ, ಬೆಂಗಳೂರಿಗೆ ತೆರಳಿದ ಬಳಿಕ ಬೆಂಗಳೂರು ಮೂಲದ ಬಸವರಾಜ್ ಎಂಬಾತನನ್ನು ಪ್ರೀತಿಸಲಾರಂಭಿಸಿದ್ದಳು ಎನ್ನಲಾಗಿದೆ.

ಅಷ್ಟೇ ಅಲ್ಲದೇ, ಕೊರೊನಾ ಲಾಕ್​ಡೌನ್​ ವೇಳೆ ಬಸವರಾಜ್​ನನ್ನು ಕುಂಸಿಯ ತನ್ನ ಮನೆಗೆ ಕರೆದುಕೊಂಡು ಬಂದಿದ್ದಳು. ಮನೆಯವರು ಬಸವರಾಜ್​ ಬಗ್ಗೆ ವಿಚಾರಿಸಿದಾಗ ನಾವಿಬ್ಬರು ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಲಾಕ್​ಡೌನ್​ ಕಾರಣ ಅವನು ನಮ್ಮ ಮನೆಗೆ ಬಂದಿದ್ದಾನೆ ಎಂದಿದ್ದಳು. ಆದಾದ 15 ದಿನಗಳ ಬಳಿಕ ಬಸವರಾಜ್​ ಬೆಂಗಳೂರಿಗೆ ಮರಳಿದ್ದ ಎನ್ನಲಾಗಿದೆ.

ಬಸವರಾಜ್ ಬೆಂಗಳೂರಿಗೆ ತೆರಳಿದ ಬಳಿಕ ಅಶ್ವಿನಿ ಆರೋಗ್ಯದಲ್ಲಿ ಏರುಪೇರಾಗಲಾರಂಭಿಸಿತ್ತು. ಈ ಬಗ್ಗೆ ಪೋಷಕರು ವಿಚಾರಿಸಿದಾಗ ಅಸಿಡಿಟಿಯಿಂದ ಹೊಟ್ಟೆ ಊದಿಕೊಂಡಿದೆ ಎಂದಿದ್ದಳು. ಅಶ್ವಿನಿಗೆ ಎಂಟು ತಿಂಗಳು ತುಂಬಿದಾಗ ಆಕೆಯ ಆರೋಗ್ಯ ಹದಗೆಟ್ಟಿದ್ದು, ಪಾಲಕರು ಮೆಗ್ಗಾನ್ ಆಸ್ಪತ್ರೆಗೆ ಕರೆತಂದಾಗ ಗರ್ಭಿಣಿಯಾಗಿರುವುದು ತಿಳಿದಿದೆ.

ಇದೇ ವೇಳೆಯೇ ಆಕೆಗೆ ಹೆರಿಗೆನೋವು ಸಹ ಕಾಣಿಸಿಕೊಂಡಿದ್ದು, ಅವಧಿಪೂರ್ವವಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ, ದುರದೃಷ್ಟವಶಾತ್ ಹೆರಿಗೆಯಾದ 2 ಗಂಟೆ ಒಳಗಾಗಿ ತಾಯಿ-ಮಗು ಇಬ್ಬರೂ ಸಾವನ್ನಪ್ಪಿದ್ದಾರೆ.

ಇದೀಗ ಅಶ್ವಿನಿ ಗರ್ಭಿಣಿಯಾಗಲು ಕಾರಣ ಯಾರೆಂಬುದನ್ನು ಪತ್ತೆಹಚ್ಚವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದು, ಮಗುವಿನ ಡಿಎನ್​ಎ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ.

Related Stories

No stories found.
TV 5 Kannada
tv5kannada.com