Thursday, January 20, 2022

ಹುಬ್ಬಳ್ಳಿ: 9 ತಿಂಗಳಾದರೂ ಸಖಿಯಲ್ಲಿ ಆಪ್ತ ಸಮಾಲೋಚಕರ ನೇಮಕವಿಲ್ಲ..!

Must read

ಹುಬ್ಬಳ್ಳಿ: ಕೌಟುಂಬಿಕ ಕಲಹ, ವರದಕ್ಷಿಣೆ ಸೇರಿದಂತೆ ನಾನಾ ರೀತಿಯ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಸಹಾಯಕ್ಕಾಗಿ ಹುಬ್ಬಳ್ಳಿಯಲ್ಲಿ ಸ್ಥಾಪಿಸಿರುವ ಸಖಿ ಒನ್‌ ಸ್ಟಾಪ್‌ ಸೆಂಟರ್‌ನಲ್ಲಿ ಆಪ್ತ ಸಮಾಲೋಚಕರಿಲ್ಲದೆ ಜನರ ಸಖ್ಯ ಕಳೆದುಕೊಂಡಂತಾಗಿದೆ.

ನಿರ್ಭಯಾ ಅತ್ಯಾಚಾರ ಪ್ರಕರಣದ ನಂತರ ದೇಶದಾದ್ಯಂತ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಒಕ್ಕೊರಲಿನ ಕೂಗು ಕೇಳಿಬಂದಿತ್ತು. ಅದಕ್ಕೆ ಸ್ಪಂದಿಸಿದ ಕೇಂದ್ರ ಸರ್ಕಾರ ನಿರ್ಭಯಾ ಯೋಜನೆಯಡಿ 2019ರಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ಸೇರಿದಂತೆ ರಾಜ್ಯದ ಇತರ ಮಹಿಳಾ ಠಾಣೆಯಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ ಪ್ರಾರಂಭಿಸಿತ್ತು. ಆದರೆ, ಅವಳಿ ನಗರದಲ್ಲಿರುವ ಸಖಿ ಸೆಂಟರ್​ಗೆ ಕಳೆದ 9 ತಿಂಗಳುಗಳಿಂದ ಆಪ್ತ ಸಮಾಲೋಚಕರನ್ನೇ ನೇಮಕ ಮಾಡಿಲ್ಲ. ಹೀಗಾಗಿ, ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯ ಮೊದಲನೇ ಮಹಡಿಯಲ್ಲಿರುವ ಮಹಿಳಾ ಠಾಣೆಯ ಸಖಿ ಒನ್‌ ಸ್ಟಾಪ್‌ ಅಧೋಗತಿ ತಲುಪಿದೆ. ಈ ಹಿಂದೆ ನೇಮಕ ಮಾಡಿದ್ದ ಇಬ್ಬರು ಆಪ್ತ ಸಮಾಲೋಚಕರ ಅವಧಿ ಪೂರ್ಣಗೊಂಡಿದೆ. ಅವರ ಅವಧಿ ಮಗಿದು 9 ತಿಂಗಳಾದರೂ ಮತ್ತೆ ಸಮಾಲೋಚಕರನ್ನ ನೇಮಕ ಮಾಡಿಲ್ಲ‌.

2019-20ರಲ್ಲಿ ಒಟ್ಟು 752 ಪ್ರಕರಣಗಳು ಸಖಿ ಒನ್ ಸ್ಟಾಪ್ ಸೆಂಟರ್‌ನಲ್ಲಿ ದಾಖಲಾಗಿದ್ದವು. ಇದರಲ್ಲಿ 679 ಪ್ರಕರಣಗಳನ್ನು ಆಪ್ತ ಸಮಾಲೋಚಕರು ಇತ್ಯರ್ಥಪಡಿಸಿದ್ದಾರೆ. ಈ ಪೈಕಿ 28 ಪ್ರಕರಣಗಳ ಮೇಲೆ ಎಫ್​ಐಆರ್​ ದಾಖಲಾಗಿದೆ. ಸದ್ಯ ಠಾಣೆಗೆ ಆಗಮಿಸುವ ಮಹಿಳೆಯರು ಕುಟುಂಬ ಹಾಗೂ ಖಾಸಗಿ ಸಮಸ್ಯೆಗಳನ್ನು ಪೊಲೀಸರ ಬಳಿ ಹೇಳಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದೇ ಕಾರಣಕ್ಕೆ ಆಪ್ತ ಸಮಾಲೋಚಕರನ್ನ ನೇಮಕ ಮಾಡಿಕೊಳ್ಳಬೇಕಿದೆ.

Latest article