Wednesday, May 18, 2022

ತತ್ವ ಸಿದ್ಧಾಂತ ಒಪ್ಪಿದ್ದೇವೆ ಜೀವನ ಪರ್ಯಂತ ಬಿಜೆಪಿಯಲ್ಲೇ ಇರುತ್ತೇವೆ – ಸಚಿವ ಬೈರತಿ ಬಸವರಾಜ್

Must read

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿನಗರ ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿಗಳು ನಡೆಯುತ್ತಿವೆ. 77 ಕೋಟಿ ವೆಚ್ಚದಲ್ಲಿ ಅವಳಿ ನಗರದಲ್ಲಿ ಎಲ್​ಇಡಿ ಬೀದಿದೀಪಗಳ ಅಳವಡಿಕೆಗೆ ಕಾರ್ಯ ರೂಪಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್​ ಅವರು ಗುರುವಾರ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆ ಪರಿಪೂರ್ಣವಾಗಿ ಮುಕ್ತಾಯಗೊಳ್ಳಲು ನಮಗೆ ಇನ್ನೂ ಒಂದುವರೆ ವರ್ಷ ಕಾಲಾವಕಾಶವಿದೆ. ಅವಳಿ ನಗರದಾದ್ಯಂತ 64 ಸಾವಿರ ಬೀದಿ ದೀಪಗಳ ಅಳವಡಿಕೆಗೆ ಕಾರ್ಯ ರೂಪಿಸಲಾಗಿದೆ. ಸ್ಮಾರ್ಟ್ ಸಿಟಿ ಅಡಿಯಲ್ಲಿ ಯಾವುದೇ ಕಾಮಗಾರಿಗಳು ವಿಳಂಬವಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಸಿಎಂ ಬದಲಾವಣೆ ಪಕ್ಕಾ ಎಂಬ ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಸಿದ್ಧರಾಮಯ್ಯ ಯಾವಾಗ ಜ್ಯೋತಿಷಿ ಆದ್ರೋ ನನಗೆ ಗೊತ್ತಿಲ್ಲ. ಸಿಎಂ ಬದಲಾವಣೆ ವಿಚಾರ ಅಪ್ರಸ್ತುತ. ಸದ್ಯ ಸಿಎಂ ಕುರ್ಚಿ ಖಾಲಿ ಇಲ್ಲ, ಇನ್ನೂ ಎರಡೂವರೆ ವರ್ಷ ಯಡಿಯೂರಪ್ಪನವರೇ ಸಿಎಂ ಆಗಿರ್ತಾರೆ ಎಂದು ಹೇಳಿದರು.

ಕಾಂಗ್ರೆಸ್ ಬಿಟ್ಟು ಹೋದೋರು ಮರಳಿ ಬರ್ತಾರೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅದು ಡಿಕೆಶಿ ಅವರ ಭ್ರಮೆ, ನಾವು ಯಾರೂ ಮರಳಿ ಕಾಂಗ್ರೆಸ್​ಗೆ ಹೋಗಲ್ಲ. ತತ್ವ ಸಿದ್ಧಾಂತಗಳನ್ನ ಒಪ್ಪಿ ನಾವೆಲ್ಲ ಬಿಜೆಪಿ ಸೇರಿದ್ದೇವೆ. ಜೀವನ ಪರ್ಯಂತ ಬಿಜೆಪಿಯಲ್ಲೇ ಇರುತ್ತೇವೆ ಎಂದು ಸ್ಪಷ್ಟನೆ ನೀಡಿದರು.

ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಅವರು, ಸಂಪುಟ ವಿಸ್ತರಣೆ ಯಾವಾಗ ಬೇಕಾದರೂ ಆಗಬಹುದು. ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ಸಚಿವ ಸಂಪುಟ ವಿಸ್ತರಣೆ ಮಾಡುವುದು ಸಿಎಂ ಪರಮಾಧಿಕಾರ. ನಮ್ಮ ಜೊತೆಗೆ ಬಂದವರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದೇವೆ. ಅವರಿಗೂ ಸಚಿವ ಸ್ಥಾನ ಸಿಗಲಿದೆ ಎಂಬ ಭರವಸೆ ಇದೆ ಎಂದು ಸಚಿವ ಬೈರತಿ ಬಸವರಾಜ್ ಅವರು ಹೇಳಿದರು.

Latest article