ಹಾಸನ: ಬೈಕ್ನಲ್ಲಿ ತೆರಳುತ್ತಿದ್ದ ಯುವಕನನ್ನು ಅಡ್ಡಗಟ್ಟಿ ಲಾಂಗು-ಮಚ್ಚುಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಹಿರೀಸಾವೆ ಸಮೀಪದ ಚೋಳಂಬಳ್ಳಿ ಗ್ರಾಮದ ಬಳಿ ನಡೆದಿದೆ.
ಕಮರವಳ್ಳಿ ಗ್ರಾಮದ ಸಂದೀಪ್ ( 25) ಕೊಲೆಯಾದ ಯುವಕ. ಸಂದೀಪ್ ಹಾಗೂ ಮಂಜುನಾಥ್ ಹಿರೀಸಾವೆಯಿಂದ ಕಮರವಳ್ಳಿ ಗ್ರಾಮಕ್ಕೆ ಬೈಕ್ನಲ್ಲಿ ಹೋಗುತ್ತಿದ್ದರು. ಈ ಸಂದರ್ಭ ಚೋಳಂಬಳ್ಳಿ ಗ್ರಾಮದ ಸಮೀಪ ಬರುತ್ತಿದ್ದಂತೆ ಹಿಂಬದಿಯಿಂದ ಕಾರೊಂದು ಡಿಕ್ಕಿ ಹೊಡೆದಿದೆ. ಬಳಿಕ ಕಾರಿನಿಂದ ಇಳಿದ ಬಂದ ದುಷ್ಕರ್ಮಿಗಳು, ಮಂಜುನಾಥ್ಗೆ ಬೆದರಿಸಿ ಓಡಿಸಿದ್ದಾರೆ. ಬಳಿಕ ಕಬ್ಬಿಣದ ಸಲಾಕೆಯಿಂದ ಸಂದೀಪ್ ತಲೆಗೆ ಒಡೆದಿದ್ದಾರೆ. ನಂತರ ಲಾಂಗು-ಮಚ್ಚುಗಳಿಂದ ಮನಸ್ಸೋ ಇಚ್ಚೆ ಥಳಿಸಿ ಗುರುತು ಸಿಗದಂತೆ ಕೊಚ್ಚಿದ್ದಾರೆ.
ಸಂದೀಪ್ ರೌಡಿಶೀಟರ್ ಲಿಂಗರಾಜು ಹತ್ಯೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ. ರೌಡಿಶೀಟರ್ ಲಿಂಗರಾಜು ಹತ್ಯೆಗೆ ಮಾಹಿತಿ ನೀಡಿದ್ದ ಎಂಬ ಕಾರಣಕ್ಕೆ ಸಂದೀಪ್ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.