ಹಾಸನ: ಯುವತಿ ಜೊತೆ ಅಸಭ್ಯ ವರ್ತನೆ ತೋರಿದ ಕಾರಣಕ್ಕೆ ಯುವಕನನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರುವ ಘಟನೆ ಹಾಸನ ನಗರದ ಹೇಮಾವತಿ ಪ್ರತಿಮೆ ಬಳಿ ನಡೆದಿದೆ.
ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಯುವಕ ಕೈ ಮುಗಿದು ಬೇಡಿಕೊಂಡರೂ ಬಿಡದ ಯುವಕರ ಗುಂಪು ಆತನ ಮೇಲೆ ಹಲ್ಲೆ ನಡೆಸಿದೆ. ಬಿಜಾಪುರ ಮೂಲದ ಮೇಘರಾಜ್ ಹಲ್ಲೆಗೊಳಗಾಗಿದ್ದು, ಈತ ಹಾಸನದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ. ಮೇಘರಾಜ್ ಯುವತಿ ಜೊತೆ ಅಸಭ್ಯ ವರ್ತನೆ ತೋರಿದ ಕಾರಣಕ್ಕೆ ಜನನಿಬಿಡ ಪ್ರದೇಶದಲ್ಲೇ ಬೆತ್ತಲೆಗೊಳಿಸಿ ಎಳೆದಾಡುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಹದ್ದು ಮೀರಿ ವರ್ತನೆ ಮಾಡಿದ ಯುವಕರ ವಿರುದ್ದ ಸಾರ್ವಜನಿಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಯುವಕ ನನ್ನನ್ನು ಬಿಟ್ಟುಬಿಡಿ ಎಂದು ಬೇಡಿಕೊಂಡರೂ ಬಿಡದೆ ಜುಟ್ಟು ಹಿಡಿದು ಮೆರವಣಿಗೆ ಮಾಡಲಾಗಿದೆ. ಇದೀಗ ಯುವಕನನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಕರ್ನಾಟಕ ಪ್ರಜಾಶಕ್ತಿ ಸಮಿತಿ ಜಿಲ್ಲಾಧ್ಯಕ್ಷ ಪ್ರವೀಣ್ಗೌಡ ಸೇರಿದಂತೆ ಕೆಲವರ ಮೇಲೆ ದೂರು ದಾಖಲಾಗಿದೆ.