ತುಮಕೂರು: ಕಣ್ಣು ಆಪರೇಷನ್ ಹೆಸರಲ್ಲಿ ವೃದ್ದ ದಂಪತಿಗೆ ಮಕ್ಮಲ್ ಟೋಪಿ ಹಾಕಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ ದೊಡ್ಡಪೇಟೆ ಬಡಾವಣೆಯಲ್ಲಿ ನಡೆದಿದೆ.
ಕಣ್ಣು ಆಪರೇಷನ್ ಮಾಡಿಸಿಕೊಂಡರೆ 10 ಸಾವಿರ ಹಣದ ಆಮಿಷವೊಡ್ಡಿ ಗಿರಿಜಮ್ಮ ಹಾಗೂ ರೇಣುಕಪ್ಪ ದಂಪತಿಗೆ ವಂಚನೆ ಮಾಡಲಾಗಿದೆ. ಖದೀಮನೋರ್ವ ದಂಪತಿಯ ಕಣ್ಣು ಆಪರೇಷನ್ಗಾಗಿ ಆಧಾರ್, ಪಾನ್ ಹಾಗೂ ವೋಟರ್ ಐಡಿ ಪಡೆದು ನಾಟಕವಾಡಿದ್ದಾನೆ. ಕಣ್ಣು ಆಪರೇಷನ್ ಮಾಡಿಸಿಕೊಂಡರೆ 10 ಸಾವಿರ ಹಣ ಸಿಗುತ್ತದೆ. ಆ ಹತ್ತು ಸಾವಿರದಲ್ಲಿ ಒಂದು ಸಾವಿರ ತನಗೆ ನೀಡಬೇಕೆಂದು ಹೇಳಿದ್ದಾನೆ.
ಆತನ ಮಾತು ನಂಬಿದ ದಂಪತಿ ಕಣ್ಣು ಆಪರೇಷನ್ಗೆ ಒಪ್ಪಿಕೊಂಡಿದ್ದಾರೆ. ಬಳಿಕ ವೃದ್ಧೆಯನ್ನು ಆಸ್ಪತ್ರೆ ಬಳಿ ಕರೆತಂದ ಖದೀಮ, ಒಡವೆ ತೆಗೆದಿಡುವಂತೆ ತಿಳಿಸಿದ್ದಾನೆ. ಬಳಿಕ ಅಜ್ಜಿ ಬಳಿಯಿದ್ದ ಓಲೆ, ನತ್ತು, ಉಂಗುರ ಹಾಗೂ ಮಾಂಗಲ್ಯ ಸರ ಸೇರಿ ಸುಮಾರು 5 ಲಕ್ಷ ಬೆಲೆಬಾಳುವ ಒಡವೆ ದೋಚಿಕೊಂಡು ಪರಾರಿಯಾಗಿದ್ದಾನೆ. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.