ಭಾರತವನ್ನೇ ಬೆಚ್ಚಿಬೀಳಿಸಿತ್ತು ಆ ಒಂದು ಕೊಲೆ.. ಇಡೀ ದೇಶವನ್ನೇ ನಿಬ್ಬೆರಗಾಗಿಸಿತ್ತು ಕೋರ್ಟ್​ ನೀಡಿದ ತೀರ್ಪು..!

ಭಾರತವನ್ನೇ ಬೆಚ್ಚಿಬೀಳಿಸಿತ್ತು ಆ ಒಂದು ಕೊಲೆ.. ಇಡೀ ದೇಶವನ್ನೇ ನಿಬ್ಬೆರಗಾಗಿಸಿತ್ತು ಕೋರ್ಟ್​ ನೀಡಿದ ತೀರ್ಪು..!

ಭಾರತದ ಇತಿಹಾಸದಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದ ಅನೇಕ ರಹಸ್ಯ ಹಾಗೂ ಭಯಾನಕ ಹತ್ಯೆಗಳು ನಡೆದಿವೆ. ಭಯಾನಕತೆಯ ಜೊತೆಗೆ ಅವುಗಳ ತನಿಖೆಯೂ ಅಷ್ಟೇ ಕುತೂಹಲವನ್ನು ಮೂಡಿಸಿವೆ. ಈ ಹತ್ಯೆಗಳು ಅಂದಿನ ಸಮಯದ ಎಲ್ಲಾ ಪತ್ರಿಕೆಗಳ ಮೊದಲ ಪುಟಗಳಲ್ಲಿ ರಾರಾಜಿಸುತ್ತಿದ್ದದ್ದೂ ಇದೆ. ಏಕೆಂದರೆ ಜನರಲ್ಲಿ ಅಷ್ಟೊಂದು ಕುತೂಹಲ ಮೂಡಿಸಿ ತನಿಖಾ ಸಂಸ್ಥೆಗಳಿಗೆ ಅಪಾರ ಸವಾಲೊಡ್ಡಿದ್ದ ಪ್ರಕರಣಗಳಾಗಿದ್ದದ್ದೂ ಇದಕ್ಕೆ ಒಂದು ಕಾರಣ ಎನ್ನಬಹುದು. ಅಂತಹ ಕೆಲವು ಪ್ರಕರಣಗಳನ್ನು ನೋಡುವುದಾದರೆ. ಆರುಷಿ-ಹೇಮರಾಜ್ ಜೋಡಿ ಕೊಲೆ, ಸುನಂದಾ ಪುಷ್ಕರ್ ಕೊಲೆ, ಟಿಕ್ಕು ಕಕ್ಕರ್ ಜೋಡಿ ಕೊಲೆ, ನೀರಜ್ ಗ್ರೋವರ್ ಕೊಲೆ, ಶಿವಾನಿ ಭಟ್ನಾಗರ್ ಪ್ರಕರಣ, ಪ್ರಿಯದರ್ಶಿನಿ ಮಟ್ಟೂ ಪ್ರಕರಣ ಇಂತಹ ಇನ್ನೂ ಅನೇಕ ಸಂವೇದನಾಶೀಲ ಕೊಲೆ ಪ್ರಕರಣಗಳು ನಡೆದು ಹೋಗಿವೆ. ಅಲ್ಲದೆ ಪ್ರತಿಯೊಂದು ಕೊಲೆಗಳು ತಮ್ಮದೇ ಆದ ರಹಸ್ಯ ಹಾಗೂ ರೋಮಾಂಚನಕಾರಿ ತಿರುವುಗಳನ್ನು ಹೊಂದಿವೆ. ಇವೆಲ್ಲದರ ನಡುವೆ ಭಾರತದಲ್ಲಿ ಇಂದಿಗೂ ಅತೀ ಹೆಚ್ಚು ಚರ್ಚೆಗೆ ಒಳಗಾಗುವ ಹಾಗೂ ಅತ್ಯಂತ ಕುತೂಹಲ ಮೂಡಿಸುವ ಕೊಲೆ ಪ್ರಕರಣವೆಂದರೆ ಅದು ಅಲಾವಂದರ್ ಹತ್ಯೆಯ ಪ್ರಕರಣ.

1952ರಲ್ಲಿ ನಡೆದ ಈ ಹತ್ಯೆ ಇಂದಿಗೂ ಭಾರತದಲ್ಲಿ ಅಪಾರ ಚರ್ಚೆಗೆ ಒಳಪಡುತ್ತದೆ ಅಲ್ಲದೆ ತನಿಖಾ ಸಂಸ್ಥೆಗಳಲ್ಲಿ ಮುಖ್ಯವಾಗಿ ಫಾರೆನ್ಸಿಕ್ ವಿಜ್ಞಾನದಲ್ಲಿ ಇಂದಿಗೂ ಇದನ್ನು ಅಭ್ಯಸಿಸಲಾಗುತ್ತದೆ. ಅಲ್ಲದೆ ಈ ಹತ್ಯೆಯ ಬಗ್ಗೆ ಧಾರಾವಹಿಯನ್ನು ಕೂಡ ನಿರ್ಮಿಸಲಾಗಿತ್ತು ಹಾಗೂ ಅದು ಅಪಾರವಾಗಿ ಹೆಸರನ್ನು ಕೂಡ ಮಾಡಿತು ಅಂದರೆ ನೀವು ಈ ಪ್ರಕರಣದ ಮಹತ್ವ ಈ ಮೂಲಕ ಅರಿಯ ಬಹುದು. ಈ ಹತ್ಯೆಯ ಕಥೆ 69 ವರ್ಷಗಳ ಹಿಂದೆ ಯಾವ ರೀತಿ ಫಾರೆನ್ಸಿಕ್ ವಿಜ್ಞಾನಕ್ಕೆ ಹೇಗೆ ಸವಾಲೊಡ್ಡಿತು ಹೇಗೆ ಈ ಪ್ರಕರಣವನ್ನು ತನಿಖೆ ಮಾಡಿ ಅಪರಾಧಿಗಳನ್ನು ಹಿಡಿಯಲಾಯಿತು ಎನ್ನುವ ಕುತೂಹಲವನ್ನು ಬಿಚ್ಚಿಡುತ್ತದೆ.

ಈ ಕಥೆ ಅಂದಿನ ದಿನಗಳಲ್ಲಿ ಒಂದು ಸಂಚಲನವನ್ನೇ ಹುಟ್ಟು ಹಾಕಿತ್ತು, ಈ ಪ್ರಕರಣ ಅಂದಿನ ದಿನಗಳಲ್ಲಿನ ಪ್ರತಿಯೊಂದು ಪತ್ರಿಕೆಗಳಲ್ಲಿ ಮೊದಲ ಪುಟವನ್ನು ತನ್ನದಾಗಿಸಿಕೊಂಡಿತ್ತು. ಮೊದಲೇ ಹೇಳಿದ ಹಾಗೆ ಈ ಹತ್ಯೆ ಅಂದಿನ ಫಾರೆನ್ಸಿಕ್ ತನಿಖೆಗೆ ಬಹುದೊಡ್ಡ ಸವಾಲನ್ನು ಒಡ್ಡಿತ್ತು. ಆದರೂ ವಿಧಿ ವಿಜ್ಞಾನ ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿತ್ತು. ಒಂದು ತಲೆ ಇಲ್ಲದ ಶವದ ಧರ್ಮವನ್ನೂ ಪತ್ತೆಹಚ್ಚುವಲ್ಲಿ ಗೊಂದಲ ಉಂಟಾಗುವಂತೆ ಮಾಡಿತ್ತು. ಈ ಕಥೆ ಇಂದಿನಿಂದ ಸರಿಯಾಗಿ 69 ವರ್ಷಗಳ ಹಿಂದಿನದು 1952ರಲ್ಲಿ ಭೀಕರ ಹಾಗೂ ಬರ್ಬರತೆಯಿಂದ ಕೂಡಿತ್ತು. ಅಲ್ಲದೆ ಅಪಾರ ರಹಸ್ಯ ಹಾಗೂ ರೋಮಾಂಚಕತೆಯಿಂದಲೂ ಕೂಡಿತ್ತು.

ಈ ಕಥೆ ಆಗಸ್ಟ್ 28, 1952 ರಂದು ಪ್ರಾರಂಭವಾಗುತ್ತದೆ. ಮದ್ರಾಸ್​ನಲ್ಲಿ ವಾಸವಾಗಿದ್ದ ಒಬ್ಬ ಉದ್ಯಮಿ, ಆತನದ್ದು ಸೀರೆಯ ಉದ್ಯಮವಾಗಿತ್ತು ಅದರೊಂದಿಗೆ ಆತ ಪೆನ್​ಗಳ ಉದ್ಯಮವನ್ನೂ ನಡೆಸುತ್ತಿದ್ದ. ಅಲ್ಲದೆ ಆತ ಒಬ್ಬ ಸೈನಿಕನೂ ಆಗಿದ್ದ ಬ್ರಿಟಿಷರ ಸೇನೆಯಲ್ಲಿದ್ದು ಎರಡನೆ ವಿಶ್ವಯುದ್ಧದಲ್ಲಿಯೂ ಆತ ಭಾಗಿಯಾಗಿದ್ದ. ಎರಡನೆ ವಿಶ್ವಯುದ್ಧದ ನಂತರ ಆತ ಸೇನೆಗೆ ರಾಜೀನಾಮೆ ನೀಡಿ ಆತ ಉದ್ಯಮವನ್ನು ಆರಂಭಿಸಿದ್ದ. ಮದುವೆಯಾಗಿತ್ತು ಇಬ್ಬರು ಮಕ್ಕಳು ಜೀವನ ಬಹಳಷ್ಟು ಆರಾಮವಾಗಿತ್ತು.

28 ಆಗಸ್ಟ್ 1952ರಂದು ಒಬ್ಬ ಮಹಿಳೆ ಮದ್ರಾಸ್ ಪೋಲಿಸ್ ಠಾಣೆಯಲ್ಲಿ ತನ್ನ ಗಂಡ ಕಾಣೆಯಾಗಿದ್ದಾರೆ. ನೆನ್ನೆಯಿಂದ ಅವರು ಮನೆಗೆ ಮರಳಿ ಬಂದಿಲ್ಲ ಎಂದು ಪ್ರಕರಣ ದಾಖಲಿಸುತ್ತಾಳೆ. ಗಂಡನ ಹೆಸರು ಹೆಸರು ಅಲಾವಂದರ್, ವಯಸ್ಸು 42-43ರ ಆಸುಪಾಸು, ಎಂದಿನಂತೆ ಅಂದು ಬೆಳಿಗ್ಗೆ ಆತ ತನ್ನ ಅಂಗಡಿಗೆ ಹೋಗಿದ್ದ. ಆದರೆ ಮಧ್ಯಾಹ್ನ ಹೊರಗಡೆ ಹೋದವನು ಮರಳಿ ಬಂದಿರಲಿಲ್ಲ. ರಾತ್ರಿ ಗಂಡ ಮನೆಗೆ ಬಾರದಿದ್ದಾಗ ಹೆಂಡತಿ ಅಂಗಡಿಗೆ ಹೋಗಿ ವಿಚಾರಿಸುತ್ತಾಳೆ. ಆಕೆಯ ಗಂಡನ ಸ್ನೇಹಿತ ಮಧ್ಯಾಹ್ನದ ನಂತರ ಆತ ಎಲ್ಲಿಗೆ ಹೋದ ತಿಳಿದಿಲ್ಲ ಎನ್ನುತ್ತಾನೆ. ಆಕೆ ಅಕ್ಕಪಕ್ಕದವರನ್ನು ವಿಚಾರಿಸಿದಾಗ ದೇವಕಿ ಎನ್ನುವ ಮಹಿಳೆಯ ಜೊತೆಗೆ ಹೊರ ಹೋಗಿರುವುದಾಗಿ ಹೇಳುತ್ತಾರೆ. ಆಕೆ ದೇವಕಿಯ ಮನೆಗೆ ಬಂದು ತನ್ನ ಗಂಡನ ಬಗ್ಗೆ ವಿಚಾರಿಸಿದಾಗ ಆಕೆ ಮಧ್ಯಾಹ್ನ ಸಿಕ್ಕಿದ್ದು ನಿಜ ನಂತರ ಎಲ್ಲಿ ಹೋದರೋ ತಿಳಿದಿಲ್ಲ ಎನ್ನುತ್ತಾಳೆ. ನಂತರ ವಿಧಿ ಇಲ್ಲದೆ ಆಕೆ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಾಳೆ.

ರೈಲಿ​ನಲ್ಲಿರಿಸಿದ್ದ ಕಬ್ಬಿಣದ ಪೆಟ್ಟಿಗೆಯಲ್ಲಿ ತಲೆ ಇಲ್ಲದ ಶವ.
ಆ ದಿನಗಳಲ್ಲಿ ಮದ್ರಾಸ್​ನಿಂದ ಧನುಷ್​ಕೋಡಿಯವರೆಗೆ ಒಂದು ರೈಲು ಹೊಗುತ್ತಿತ್ತು. ಇಂಡೋ-ಸಿಲೋನ್ ಬೋಟ್ ಮೇಲ್ ಎಂದೇ ಪ್ರಸಿದ್ಧವಾಗಿತ್ತು. ಇದು ಭಾರತ ಮತ್ತು ಸಿಲೋನ್ (ಇಂದಿನ ಶ್ರೀಲಂಕಾ ) ಮದ್ರಾಸ್​ ಮತ್ತು ಧನುಷ್​ಕೋಡಿ ಸಂಪರ್ಕಿಸುವ ಪ್ರಸಿದ್ದ ರೈಲು ಮಾರ್ಗವಾಗಿತ್ತು. ಈ ರೈಲು ಧನುಷ್​ಕೋಡಿಯಿಂದ ಇನ್ನೇನು ಮದ್ರಾಸ್​ ಸಮೀಪಿಸುತ್ತಿದ್ದಂತೆ ಕೆಲವು ಪ್ರಯಾಣಿಕರು ಒಂದು ಕಬ್ಬಿಣದ ಪೆಟ್ಟಿಗೆಯಿಂದ ಕೆಟ್ಟ ವಾಸನೆ ಬರುತ್ತಿರುವುದಾಗಿ ತಿಳಿಸಿದರು. ರೈಲ್ವೇ ಅಧಿಕಾರಿಗಳು ರೈಲ್ವೇ ಪೊಲೀಸ್ ಸಿಬ್ಬಂದಿ ಕರೆಸಿ ಅದನ್ನು ತೆರೆದು ನೋಡಿದರೆ. ಎಲ್ಲರಿಗೂ ಆಘಾತ ಕಾದಿತ್ತು ಅದರಲ್ಲಿ ಒಬ್ಬ ವ್ಯಕ್ತಿಯ ಶವವಿತ್ತು. ಬೆಚ್ಚಿ ಬೀಳಿಸುವ ಸಂಗತಿಯೆಂದರೆ ಆದರೆ ಶವದ ತಲೆಯೇ ಮಾಯವಾಗಿತ್ತು. ನಂತರ ರೈಲ್ವೇ ಪೊಲೀಸರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಶವವನ್ನು ಪೋಸ್ಟ್​ಮಾರ್ಟಮ್​ಗಾಗಿ ಮದ್ರಾಸ್​ನ ವಿಧಿವಿಜ್ಞಾನ ಪ್ರಯೋಗಾಲಕ್ಕೆ ಕಳುಹಿಸಿ ಕೊಟ್ಟರು. ಮದ್ರಾಸ್ ಪ್ರಯೋಗಾಲಯದಲ್ಲಿ ಅಂದು ಭಾರತದ ಸರ್ ಬರ್ನಾಡ್ ಎಂದೇ ಪ್ರಸಿದ್ಧಿಯಾಗಿದ್ದ ಡಾ.ಸಿ.ವಿ ಗೋಪಾಲ ಕೃಷ್ಣ ಮುಖ್ಯ ಅಧಿಕಾರಿಯಾಗಿದ್ದರು. ಈ ತಲೆ ಇಲ್ಲದ ಶವ ಅವರ ಕೈ ಸೇರಿತು, ಶವದ ಗುರುತು ಪತ್ತೆ ಪ್ರಾರಂಭವಾದಾಗ ಅನೇಕ ರಹಸ್ಯಗಳ ಕಥನಗಳು ಶುರುವಾಗುತ್ತವೆ.

ಶವದ ಕುರುಹು ಪತ್ತೆ ಪ್ರಾರಂಭವಾದಾಗ ಅನೇಕ ಪ್ರಶ್ನೆಗಳು ಒಟ್ಟೊಟ್ಟಿಗೆ ಉದ್ಭವಿಸಲು ಪ್ರಾರಂಭವಾಗುತ್ತವೆ. ಮೊದಲಿಗೆ ಸಾವನ್ನಪ್ಪಿರುವ ವ್ಯಕ್ತಿ 25 ವರ್ಷ ಆಸುಪಾಸಿನವನಾಗಿರಬಹುದು ಎಂಬುದಾಗಿ ಒಂದು ಅಂದಾಜು ಮಾಡಲಾಯಿತು. ಒಂದು ವೈದ್ಯರ ತಂಡ ಶವ ಒಬ್ಬ ಮುಸ್ಲಿಂ ವ್ಯಕ್ತಿಯದ್ದಾಗಿರಬಹುದು ಎಂದು ಹೇಳಿತು. ಏಕೆಂದರೆ ಮುಸ್ಲಿಮರು ಮಾಡಿಸಿಕೊಳ್ಳುವ ಖತನಾ ಎನ್ನುವ ಪಾರಂಪರಿಕ ಕುರುಹು ಶವದಲ್ಲಿತ್ತು. ಆದರೆ ತನಿಖಾಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು ಶವದ ಸೊಂಟದಲ್ಲಿ ಕಟ್ಟಿದ್ದ ದಾರ. ಸೊಂಟದಲ್ಲಿ ಒಂದು ದಾರವನ್ನು ಕಟ್ಟಲಾಗಿತ್ತು ಆದ್ದರಿಂದ ಅದು ಹಿಂದೂವಿನ ಶವವೂ ಆಗಿರಬಹುದು ಎನ್ನುವ ಅನುಮಾನ ಮೂಡತೊಡಗಿತು. ಆದರೂ ಅದನ್ನೊಂದು ಮುಸ್ಲಿಂ ವ್ಯಕ್ತಿಯ ಶವ ಎಂದೇ ನಿರ್ಧರಿಸಲಾಯಿತು. ಅಲ್ಲದೆ ಹೊಟ್ಟೆಯಲ್ಲಿ ಅಫೀಮು ಕೂಡ ಸಿಕ್ಕಿದ್ದರಿಂದ ಆತ ನಶೆಯಲ್ಲಿದ್ದನೇ..? ಡ್ರಗ್ಸ್ ವ್ಯಸನಿಯಾಗದ್ದನೇ..? ಎನ್ನುವ ಪ್ರಶ್ನೆಗಳೂ ಮೂಡಿದ್ದವು ಆದರೆ ಶವದ ತಲೆಯೇ ಇಲ್ಲದಿದ್ದರಿಂದ ಶವದ ಗುರುತು ಪತ್ತೆಯೇ ಮಾಡಲು ಸಾಧ್ಯವಿರಲಿಲ್ಲ. ಅತ್ತ ಪೊಲೀಸರ ತನಿಖೆಯೂ ಮುಂದುವರೆದಿತ್ತು.

ಇತ್ತ ಅದೇ ದಿನ ಅಲಾವಂದರ್ ಪತ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರಿಂದ ಪೊಲೀಸರು ಅಲಾವಂದರ್ ಹುಡುಕಾಟ ನಡೆಸಲು ಪ್ರಾರಂಭಿಸಿದರು. ಆತನನ್ನು ಕೊನೆಯಬಾರಿಗೆ ನೋಡಿದವರು ಯಾರು ಎಂಬ ಪ್ರಶ್ನೆಗೆ ಉತ್ತರವಿತ್ತು, ಹಾಗಾಗಿ ಪೊಲೀಸರು ದೇವಕಿಗಾಗಿ ಹುಡುಕಾಟ ನಡೆಸಿ ದೇವಕಿಯ ಮನೆಗೆ ಬಂದರು. ದೇವಕಿ ತನ್ನ ಗಂಡನಾದ ಮೆನನ್ ಜೊತೆಗೆ ವಾಸಮಾಡುತ್ತಿದ್ದಳು, ಇಬ್ಬರ ಮದುವೆಗೆ ಬಹಳ ಸಮಯವೂ ಆಗಿರಲಿಲ್ಲ ಒಂದು ವರ್ಷವೂ ಪೂರ್ಣವಾಗಿರಲಿಲ್ಲ. ಪೊಲೀಸರು ಆಕೆಯನ್ನು ಅಲಾವಂದರ್ ಬಗ್ಗೆ ಪ್ರಶ್ನಿಸಿದರು ಅಲಾವಂದರ್​ನನ್ನು ನೀವು ನೋಡಿದ್ದು ಯಾವಾಗ ಎಲ್ಲಿ ನಂತರ ಆತ ಎಲ್ಲಿ ಹೋದ..? ದೇವಕಿ ತಾನು ಅಲಾವಂದರ್​ನನ್ನು ಮಧ್ಯಾಹ್ನ ನೋಡಿದ್ದು ನಿಜ ಆದರೆ ನಂತರ ಆತನಿಗೂ ನನಗೂ ಭೇಟಿ ಇಲ್ಲ ಎಂದು ಹೇಳುತ್ತಾಳೆ ಪೊಲೀಸರಿಗೆ ಯಾವುದೇ ಸಂಶಯ ಬಾರದಿದ್ದಾಗ ಅಲ್ಲಿಂದ ಹೊರಟರು.

ಸಮುದ್ರ ಕಿನಾರೆಯಲ್ಲಿ ಅನಾಮಧೇಯ ತಲೆ.
ದೇವಕಿಯನ್ನು ಪ್ರಶ್ನಿಸಲು ಹೋಗಿದ್ದ ಪೊಲೀಸರು ಸೈಕಲ್ ಮೇಲೆ ಬಂದಿದ್ದರು. ಸುಮಾರು ನಾಲ್ಕು ಪೊಲೀಸರು ದೇವಕಿ ಮನೆಯಿಂದ ಹೊರಬಂದ ನಂತರ ತಮ್ಮ ಸೈಕಲ್ ತುಳಿಯುತ್ತ ಠಾಣೆಯತ್ತ ಹೊರಟರು. ಠಾಣೆಯತ್ತ ಹೊರಡುವಾಗ ದೇವಕಿಯ ಮನೆಯಿಂದ ಠಾಣೆಯ ದಾರಿಯಲ್ಲಿ ಒಂದು ತಿರುವು ಇತ್ತು ಅದೇ ತಿರುವಿಗೆ ಸಮುದ್ರ ಕಿನಾರೆಯೂ ಇತ್ತು. ಈ ಕಿನಾರೆಯಿಂದ ಪೊಲೀಸರು ಸಾಗುತ್ತಿರಬೇಕಾದರೆ ಸಮುದ್ರ ಕಿನಾರೆಯಲ್ಲಿ ಅಪಾರ ಜನ ಜಮಾಯಿಸಿ ನಿಂತಿದ್ದನ್ನು ಕಂಡರು. ಪೊಲೀಸರು ತಮ್ಮ ಸೈಕಲನ್ನು ಬಳಿಯಲ್ಲಿಯೇ ನಿಲ್ಲಿಸಿ ಗುಂಪಿನತ್ತ ಬಂದು ಅದೇನೆಂದು ನೋಡಲು, ಅಲ್ಲಿ ಒಂದು ಟೀ-ಶರ್ಟ್​ನಲ್ಲಿ ಅದೇನೋ ಅನಾಮಧೇಯ ವಸ್ತುವನ್ನು ಸುತ್ತಿ ಇಡಲಾಗಿತ್ತು.

ಇದು ಎಲ್ಲಿಂದ ಬಂತು ಎಂದು ಪೊಲೀಸರು ಅಲ್ಲಿ ಸುತ್ತುವರೆದವರನ್ನು ಪ್ರಶ್ನಿಸಿದರು. ಇದು ಸಮುದ್ರ ನೀರಿನಿಂದಾಗಿ ಮರಳು ಸರಿದು ಮೇಲೆ ಬಂದಿರುವುದಾಗಿ ಹೇಳಿದರು. ಪೊಲೀಸರು ಟೀ-ಶರ್ಟನ್ನು ತೆಗೆದು ನೋಡಿದರೆ ಒಂದು ಕ್ಷಣ ಭಯ ಭೀತರಾಗಿ ಜನರ ಚಿತ್ಕಾರ ಹೊರಡಿತು ಏಕೆಂದರೆ ಅದರಲ್ಲಿ ಒಬ್ಬ ವ್ಯಕ್ತಿಯನ್ನು ಕೊಂದು ತಲೆಯನ್ನು ಸುತ್ತಿ ಹೂತಿಡಲಾಗಿತ್ತು. ಪೊಲೀಸರು ಠಾಣೆಗೆ ಸುದ್ದಿ ಮುಟ್ಟಿಸಿ ಆ ತಲೆಯನ್ನು ತಮ್ಮ ಸುಪರ್ದಿಗೆ ಪಡೆಯುತ್ತಾರೆ. ಈ ತಲೆಯೂ ಒಂದು ದಿನ ಮುಂಚೆ ತಲೆ ಇಲ್ಲದ ಶವ ತಲುಪಿದ ಆಸ್ಪತ್ರೆಯನ್ನೇ ತಲುಪಿತು. ಅದಾಗಲೇ ಆ ತಲೆ ಕೊಳೆಯಲು ಪ್ರಾರಂಭಿಸಿತ್ತು ಆದರೆ ಇನ್ನೂ ಬಹುಭಾಗ ಸುರಕ್ಷಿತವಾಗಿತ್ತು. ತಲೆ ಆಸ್ಪತ್ರೆಗೆ ತಲುಪುತ್ತಲೇ ಪೊಲೀಸರಿಗೆ ಒಂದು ಶಂಕೆ ಪ್ರಾರಂಭವಾಯಿತು, ಒಂದು ದಿನ ಮುಂಚೆ ತಲೆ ಇಲ್ಲದ ಶರೀರ ಇಂದು ಒಂದು ತಲೆ ಸಿಕ್ಕಿದೆ ಇವೆರಡೂ ಒಂದೇ ವ್ಯಕ್ತಿಯದ್ದಾಗಿರಲು ಸಾಧ್ಯವೇ? ಈ ನಿಟ್ಟಿನಲ್ಲಿ ಪರೀಕ್ಷೆ ಮಾಡುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಯಿತು. ವೈದ್ಯರು ತಲೆ ಮತ್ತು ತಲೆ ಇಲ್ಲದ ಶರೀರವನ್ನು ಹೊಂದಿಸಿ ನೋಡಲಾಗಿ ಎರಡರಲ್ಲೂ ಹೊಂದಾಣಿಕೆಯಾಯಿತು. ನಂತರ ವೈದ್ಯರು ಒಂದು ಸರಿಯಾದ ಲೆಕ್ಕಾಚಾರಕ್ಕೆ ಬರುತ್ತಾರೆ. ಶವ 42 ರಿಂದ 45 ವರ್ಷ ಆಸು ಪಾಸಿನ ವ್ಯಕ್ತಿಯದ್ದಾಗಿರಬಹುದು, ಹತ್ಯೆ ಸುಮಾರು 48 ಗಂಟೆಗಳ ಹಿಂದೆ ನಡೆದಿರಬಹುದು ಎಂದು ಲೆಕ್ಕಾಚಾರ ಹಾಕಿತು.

ಈ ಮಾಹಿತಿಯ ನಂತರ ಪೊಲೀಸರಿಗೆ ಇದು ಅಲಾವಂದರ್ ಶವವಾಗಿರಬಹುದೇ ಎಂಬ ಸಂಶಯ ವ್ಯಕ್ತಪಡಿಸಿದರು. ಹೆಂಡತಿಯನ್ನು ಕರೆಸಿ ಗುರುತು ಪತ್ತೆ ಹಚ್ಚಿಸುವ ಯೋಚನೆ ಮಾಡಿದರಾದಡೂ ಹತ್ಯೆ ಬಹಳಷ್ಟು ಬರ್ಬರವಾಗಿರುವುದರಿಂದ ಶವ ಆತನದ್ದೇ ಆಗಿರದಿದ್ದರೆ ಸರಿಯಲ್ಲ ಮೊದಲು ದೃಢಿಕರಿಸಿಕೊಳ್ಳುವುದು ಒಳಿತು ಎನ್ನುವ ನಿರ್ಧಾರಕ್ಕೆ ಬಂದರು. ಅಲಾವಂದರ್ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದರಿಂದ ಅಲ್ಲಿ ಆತನ ಅನೇಕ ದಾಖಲೆಗಳು ಇರುವುದು ಗೊತ್ತಾಯಿತು ಅದರಲ್ಲಿ ಆತನ ಬೆರಳಚ್ಚು ಅಂದರೆ ಫಿಂಗರ್ ಪ್ರಿಂಟ್ ಮಾದರಿಯೂ ಸಿಕ್ಕಿತು. ಈ ಬೆರಳಚ್ಚು ಮಾದರಿಯನ್ನು ತರಿಸಿ ಶವದೊಂದಿಗೆ ಹೊಂದಿಸಿ ನೋಡಲಾಗಿ ಎರಡರಲ್ಲೂ ಹೊಂದಾಣಿಕೆಯಾಯಿತು. ಈಗ ಪೋಲಿಸರಿಗೆ ಈ ಶವ ಅಲಾವಂದರ್​ನದ್ದೇ ಎನ್ನುವುದು ಕೂಡಾ ಖಾತರಿಯಾಗಿತ್ತು. ಅಲಾವಂದರ್​ನ ಪತ್ನಿಯನ್ನು ಕರೆಯಿಸಿ ಶವವನ್ನು ತೋರಿಸಲಾಯಿತು ಆಕೆ ಅದು ಅಲಾವಂದರ್​ನದ್ದೇ ಶವ ಎಂದು ದೃಢೀಕರಿಸಿದಳು. ಈಗ ಆ ಶವ ಉದ್ಯಮಿ ಅಲಾವಂದರ್​ನದ್ದೇ ಎನ್ನುವುದು ಖಾತರಿಯಾಯಿತು. ಆದರೆ ಈಗ ಕೊಲೆ ಮಾಡಿದವರು ಯಾರು..? ಏಕೆ ಕೊಲೆ ಮಾಡಿದರು..? ಎಂಬೆಲ್ಲಾ ಪ್ರಶ್ನೆಗಳು ಕಾಡತೊಡಗಿದವು.

ಕೊಲೆಗಾರರ ಪತ್ತೆಗಿಳಿದ ಪೊಲೀಸರಿಗೆ ಆಘಾತ ಕಾದಿತ್ತು..!
ಕೊನೆಯ ಬಾರಿ ಅಲಾವಂದರ್​ನನ್ನು ನೋಡಿದವರು ದೇವಕಿಯಾಗಿದ್ದರಿಂದ ಪೊಲೀಸರು ಏನಾದರೂ ಕರುಹು ಸಿಗಬಹುದೆಂಬ ನಿರೀಕ್ಷೆಯಲ್ಲಿ ದೇವಕಿಯ ಮನೆಗೆ ಬಂದರು. ಆದರೆ ದೇವಕಿಯ ಮನೆಗೆ ಬಂದ ಪೊಲೀಸರಿಗೆ ಆಘಾತ ಕಾದಿತ್ತು ಏಕೆಂದರೆ ದೇವಕಿಯ ಮನೆಗೆ ಬೀಗ ಜಡಿದಿತ್ತು. ಅಕ್ಕಪಕ್ಕ ಮನೆಯವರನ್ನು ಪ್ರಶ್ನಿಸಿ ನೋಡಿದಾಗ ಬಾಂಬೆಗೆ ಹೋಗುವುದಾಗಿ ತಿಳಿಸಿ ಹೋಗಿರುವುದಾಗಿ ಹೇಳಿದರು. ಪೊಲೀಸರು ಹೈರಾಣಾಗಿ ಹೋಗುತ್ತಾರೆ ಇದೇ ಮಾರ್ಗದಲ್ಲಿ ತಲೆಯೂ ಸಿಗುತ್ತದೆ ನಂತರ ಇಬ್ಬರೂ ದಂಪತಿಗಳೂ ಮಾಯವಾಗಿ ಬಿಡುತ್ತಾರೆ. ಅಲ್ಲದೆ ಇದು ಇಬ್ಬರೂ ದಂಪತಿಯ ಮೇಲೆ ಶಂಕೆಗೆ ಕಾರಣವಾಗುತ್ತದೆ. ಈಗ ಹೈದ್ರಾಬಾದ್ ಪೊಲೀಸರ ತಂಡ ಬಾಂಬೆ ತಲುಪಿತು ಬಾಂಬೆ ಪೊಲೀಸರಿಗೆ ವಿಷಯ ತಿಳಿಸಿ ಅವರ ಸಹಯೋಗದಲ್ಲಿ ಹುಡುಕಾಟ ಪ್ರಾರಂಭವಾಗುತ್ತದೆ. ಕೆಲವು ದಿನಗಳಲ್ಲಿ ದೇವಕಿಯ ಗುರುತು ಪತ್ತೆ ಮಾಡಲಾಗುತ್ತದೆ ನಂತರ ಆಕೆಯ ಗಂಡನನ್ನೂ ವಶಕ್ಕೆ ಪಡೆದಾಗ ಆತ ತನ್ನ ಸಂಪೂರ್ಣ ವೇಶ ಭೂಷಣವನ್ನೇ ಬದಲಾಯಿಸಿಕೊಂಡು ಗುರುತು ಮರೆಮಾಚುತ್ತಿರುವುದು ಗೊತ್ತಾಗಿ ಹೋಗುತ್ತದೆ. ನಂತರ ಅವರಿಬ್ಬರನ್ನೂ ಮದ್ರಾಸ್​ಗೆ ಕರೆತರಲಾಗುತ್ತದೆ.

ಹತ್ಯೆಗೆ ಕಾರಣವಾಗಿತ್ತು ಪೂರ್ವ ಅಕ್ರಮ ಸಂಬಂಧ.

ಅಲಾವಂದರ್ ಒಬ್ಬ ಹೆಣ್ಣು ಬಾಕನಾಗಿದ್ದ ಸೈನ್ಯದಲ್ಲಿದ್ದ ಕಾರಣ ಆತ ದೈಹಿಕ ಆರೋಗ್ಯದೊಂದಿಗೆ ಸೌಂದರ್ಯದ ಬಗ್ಗೆಯೂ ಹೆಚ್ಚು ಆಸಕ್ತಿ ಹೊಂದಿದ್ದ. ಇದರಿಂದಾಗಿಯೇ ಆತ ಸೀರೆ ಹಾಗೂ ಪೆನ್ನುಗಳ ಉದ್ಯಮವನ್ನು ಆರಂಭಿಸಿದ್ದ. ಹೆಣ್ಣು ಮಕ್ಕಳನ್ನು ಸುಲಭವಾಗಿ ತನ್ನತ್ತ ಸೆಳೆಯುತ್ತಿದ್ದ. ಈ ಮಧ್ಯೆ ಸೀರೆ ಕೊಳ್ಳಲು ಬಂದ ದೇವಕಿಯೊಂದಿಗೆ ಸ್ನೇಹವಾಗಿತ್ತು, ಈ ಸ್ನೇಹ ಮುಂದೆ ಸಂಬಂಧಕ್ಕೆ ತಿರುಗಿತ್ತು. ಹೀಗಾಗಿ ದೇವಕಿ ಮದುವೆಗೂ ಮುಂಚೆಯೇ ಆತನೊಂದಿಗೆ ಸಂಬಂಧವನ್ನು ಹೊಂದಿದ್ದಳು. ಈ ಮಧ್ಯೆಯೇ ದೇವಕಿ ಮದ್ರಾಸ್ ತೊರೆದು ತನ್ನ ಹುಟ್ಟೂರು ಕೇರಳಕ್ಕೆ ಹೊರಟು ಹೋಗಿದ್ದಳು ಅಲ್ಲಿ ಆಕೆಯ ಹೆತ್ತವರು ಆಕೆಯನ್ನು ಮೆನನ್​ನೊಂದಿಗೆ ಮದುವೆ ಮಾಡಿದರು. ಮದುವೆಯ ನಂತರ ದೇವಕಿ ತನ್ನ ಗಂಡನೊಂದಿಗೆ ಮರಳಿ ಮದ್ರಾಸ್​ಗೆ ಬಂದು ವಾಸಮಾಡತೊಡಗಿದಳು. ಮದ್ರಾಸ್​ಗೆ ಬಂದನಂತರ ಮತ್ತೇ ಆಕೆಗೆ ಅಲಾವಂದರ್​ನೊಂದಿಗೆ ಭೇಟಿಯಾಯಿತು. ಅಲಾವಂದರ್ ಮತ್ತೆ ಸಂಬಂಧ ಮುಂದುವರೆಸುವಂತೆ ಕೇಳುದಾಗ ದೇವಕಿ ಮದುವೆಯಾಗಿರುವುದರಿಂದ ನಿರಾಕರಿಸಿದ್ದಳು. ಅಲಾವಂದರ್ ಆಕೆಯ ಗಂಡನಿಗೆ ಇಬ್ಬರ ಸಂಬಂಧವನ್ನು ತಿಳಿಸುವುದಾಗಿ ಬೆದರಿಸಿದನು. ದೇವಕಿ ತಾನೇ ಗಂಡನಿಗೆ ವಿಷಯ ತಿಳಿಸಿದಳು. ನಂತರ ಗಂಡ ಹೆಂಡತಿ ಇಬ್ಬರೂ ಅಲಾವಂದರ್​ನನ್ನು ತಮ್ಮ ದಾರಿಯಿಂದ ಸರಿಸಲು ಆತನನ್ನು ಕೊಲ್ಲಲು ನಿರ್ಧರಿಸಿದರು.

ದೇವಕಿ ಅಲಾವಂದರ್​ನ ಸೀರೆಯ ಅಂಗಡಿಗೆ ಹೋಗಿ ಅವನನ್ನು ತನ್ನ ಮನೆಗೆ ಕರೆ ತರುತ್ತಾಳೆ ಇಬ್ಬರೂ ಸೇರಿ ಅವನನ್ನು ಕತ್ತು ಕುಯ್ದು ಕೊಲ್ಲುತ್ತಾರೆ. ಅವನ ತಲೆಯನ್ನು ಅವನದ್ದೇ ಟೀ ಷರ್ಟ್​​ ಬಿಚ್ಚಿ ಅದರಲ್ಲಿ ಸುತ್ತಿ ಸಾಯಂಕಾಲ ಸಮುದ್ರ ಕಿನಾರೆಯಲ್ಲಿ ಮುಚ್ಚಿ ಬರುತ್ತಾರೆ. ನಂತರ ಇಬ್ಬರೂ ಗಂಡ ಹೆಂಡತಿ ತಲೆ ಇಲ್ಲದ ಶವವನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ತುಂಬಿಸಿ ರೈಲಿನಲ್ಲಿ ಇಬ್ಬರೂ ಪ್ರಯಾಣ ಮಾಡುತ್ತಾರೆ ಎರಡು ನಿಲ್ದಾಣಗಳ ನಂತರ ಪೆಟ್ಟಿಗೆಯನ್ನು ಅಲ್ಲಿಯೇ ಬಿಟ್ಟು ಮೂರನೆ ಸ್ಟೇಷನ್​ನಲ್ಲಿ ಇಬ್ಬರೂ ಇಳಿದು ಮದ್ರಾಸ್​ನ ತಮ್ಮ ಮನೆಗೆ ಮರಳುತ್ತಾರೆ. ಮರುದಿನ ರೈಲ್ವೆಯಲ್ಲಿ ಕೆಲವು ಪ್ರಯಾಣಿಕರಿಂದಾಗಿ ತಲೆ ಇಲ್ಲದ ಶವ ಸಿಗುತ್ತದೆ. ಮರುದಿನ ಸಮುದ್ರ ಕಿನಾರೆಯಲ್ಲಿ ಶರಿರವಿಲ್ಲದ ತಲೆ ಸಿಗುತ್ತದೆ ಈಗ ತಪಿತಸ್ಥರೂ ಸಿಕ್ಕು ತಪ್ಪೊಪ್ಪಿಕೊಳ್ಳುತ್ತಾರೆ. ಈ ಸುದ್ದಿ ದೇಶಾದ್ಯಂತ ಚರ್ಚಿತವಾಗುತ್ತದೆ.

ನ್ಯಾಯಾಂಗ ಬಂಧನ, ನ್ಯಾಯಾಲಯದ ತೀರ್ಪು.
ಈಗ ಪೊಲೀಸರ ಮುಂದೆ ಮತ್ತೊಂದು ಸವಾಲಿತ್ತು ಅಪರಾಧಿಗಳು ಸಿಕ್ಕಾಗಿತ್ತು ತಪ್ಪೊಪ್ಪಿಗೆಯೂ ಆಗಿತ್ತು ಆದರೆ ಇವರು ನ್ಯಾಯಾಲಯದಲ್ಲಿ ತಿರುಗಿ ಬೀಳುವ ಸಾಧ್ಯತೆಗಳಿದ್ದವು. ಹೀಗಾಗಿದ್ದೇ ಆದರೆ ಪೊಲೀಸರಿಗೆ ಕೊಲೆಯನ್ನು ಸಾಬೀತು ಪಡಿಸುವ ಅನ್ಯ ಮಾರ್ಗಗಳು ಇರಲಿಲ್ಲ. ಏಕೆಂದರೆ ಈ ಕೊಲೆಯನ್ನು ನೋಡಿದ ಸಾಕ್ಷಿಗಳಿರಲಿಲ್ಲ, ಅಲಾವಂದರ್​ನೊಂದಿಗಿನ ದೇವಕಿಯ ಸಂಬಂಧದ ಪುರಾವೆಗಳೂ ಇರಲಿಲ್ಲ ಇದು ಪೊಲೀಸರಿಗೆ ಕಂಟಕವಾಗಿತ್ತು. ಪೊಲೀಸರು ಈಗ ಒಂದು ದಾಳ ಉರುಳಿಸಿ ನೋಡಿದರು ದೇವಕಿಗೆ ಪ್ರತ್ಯೇಕವಾಗಿ ಒಂದು ಅವಕಾಶ ನೀಡಿದರು. ನೀನು ಗಂಡನ ವಿರುದ್ಧ ಸಾಕ್ಷಿಯಾಗುವುದಾದರೆ ನಿನ್ನ ಶಿಕ್ಷೆಯ ಪ್ರಮಾಣ ಕಡಿಮೆಯಾಗುತ್ತದೆ ಅಲ್ಲದೆ ಬೇಗ ಹೊರಗೆ ಬರಬಹುದು ಎಂದು ಪುಸಲಾಯಿಸಿದರು.

ಆದರೆ ದೇವಕಿ ಇದನ್ನು ನಿರಾಕರಿಸಿದಳು ತಾನೇ ತಪ್ಪು ಮಾಡಿದ್ದರಿಂದ ತನ್ನ ಗಂಡ ನನ್ನ ರಕ್ಷಣೆಗಾಗಿ ಈ ಕೊಲೆ ಮಾಡಬೇಕಾಗಿ ಬಂತು, ಹಾಗಾಗಿ ತಾನು ಪತ್ನಿಯ ಧರ್ಮವನ್ನು ನಿಭಾಯಿಸುವುದಾಗಿ ಹೇಳಿದಳು. ತಾನು ತನ್ನ ಸಂಬಂಧದ ಬಗ್ಗೆ ಹೇಳಿದ ನಂತರವೂ ಹೆಜ್ಜೆ ಹೆಜ್ಜೆಗೂ ಜೊತೆಗಿದ್ದ ಗಂಡನಿಗೆ ದ್ರೋಹ ಬಗೆಯುವುದಿಲ್ಲ, ಇದಕ್ಕಾಗಿ ಬೇಕಾದರೆ ನನಗೆ ಎಷ್ಟು ಬೇಕಾದರೂ ಶಿಕ್ಷೆಯಾಗಲಿ ಪರವಾಗಿಲ್ಲ ಎಂದು ಪೋಲಿಸರಿಗೆ ಕಡ್ಡಿ ಮುರಿದಂತೆ ಹೇಳಿದಳು. ಪ್ರಕರಣ ಕೋರ್ಟಿನ ಮೆಟ್ಟಿಲೇರಿತು, ಪ್ರಕರಣದ ಮೇಲೆ ಮಾಧ್ಯಮಗಳ ಕಣ್ಣು ನಿರಂತರವಾಗಿತ್ತು. ನ್ಯಾಯಾಲಯ ಎಲ್ಲವನ್ನೂ ಪರಿಶೀಲನೆ ನಡೆಸಿ ಎಲ್ಲವನ್ನೂ ಆಲಿಸಿದ ನಂತರ ತನ್ನ ನಿರ್ಧಾರವನ್ನು ಪ್ರಕಟಿಸಿತು. ಈ ಕೊಲೆ ಒಬ್ಬ ಪತಿ ಪತ್ನಿ ತಮ್ಮ ರಕ್ಷಣೆಯಲ್ಲಿ ನಡೆಸಿದ್ದಾಗಿ ನ್ಯಾಯಾಲಯ ನಿರ್ಧರಿಸಿತು ಅಲ್ಲದೆ ಕೊಲೆಯಾದ ವ್ಯಕ್ತಿ ಒಬ್ಬ ಹೆಣ್ಣಿನ ಘನತೆ, ಗೌರವಕ್ಕೆ, ಸಮ್ಮಾನಕ್ಕೆ ಧಕ್ಕೆಯಾಗುತ್ತಿದ್ದ. ಹಾಗಾಗಿ (culpable homicide not amounting to death) ಇರಾದೆಯಲ್ಲದ ಕೊಲೆಯ ಅಡಿಯಲ್ಲಿ ಈ ಪ್ರಕರಣವನ್ನು ಮುಂದುವರೆಸಿ ಆದೇಶವನ್ನು ನೀಡಲಾಯಿತು ಇದು ಎಲ್ಲರನ್ನೂ ಅಚ್ಚರಿ ಪಡಿಸಿತ್ತುಕೂಡ. ಅಪಾರ ದಿನಗಳ ಮುಂದುವರಿಕೆಯ ನಂತರ ನ್ಯಾಯಾಲಯ ಗಂಡ ಮೆನನ್​ನಿಗೆ 5 ವರ್ಷ ಮತ್ತು ಹೆಂಡತಿ ದೇವಕಿಗೆ 3 ವರ್ಷ ಶಿಕ್ಷೆಗೆ ಒಳಪಡಿಸಲಾಯಿತು. ನ್ಯಾಯಾಲಯದ ಈ ತೀರ್ಪು ಎಲ್ಲರನ್ನೂ ಅಚ್ಚರಿಗೊಳಿಸಿತ್ತು ಕೇವಲ 5 ವರ್ಷ ಮತ್ತು 3 ವರ್ಷ ಶಿಕ್ಷೆ ಅದೂ ಕೂಡ ಜೀವಾವಧಿ ಶಿಕ್ಷೆಯಾಗುವ ಪ್ರಕರಣಕ್ಕೆ ಎನ್ನುವ ಚರ್ಚೆಗಳು ಪ್ರಾರಂಭವಾದವು. ದೇವಕಿ ಹಾಗೂ ಮೆನನ್ ಇದನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸುವುದಾಗಿ ತಮ್ಮ ವಕೀಲರಿಗೆ ತಿಳಿಸಿದರು. ಆದರೆ ಪ್ರಸ್ತುತ ಪ್ರಕರಣ ಹಾಗೂ ಸೆಕ್ಷನ್ ಅಡಿಯಲ್ಲಿ ನೀಡಿರುವ ಶಿಕ್ಷೆ ಅಪಾರ ಕಡಿಮೆ ಪ್ರಮಾಣದ್ದು ಹೈಕೋರ್ಟ್​ನಲ್ಲಿ ಇನ್ನೂ ಹೆಚ್ಚಿನ ಶಿಕ್ಷೆಯಾಗಬಹುದು ಎಂದಾಗ ಅವರು ಸುಮ್ಮನಾದರು. ನಂತರ ಅವರಿಗೆ ನ್ಯಾಯಮೂರ್ತಿಗಳು ತಮಗೆ ಕಡಿಮೆ ಶಿಕ್ಷೆ ನೀಡಿದ್ದಾರೆನ್ನುವುದು ಗೊತ್ತಾಯಿತು.

ಶಿಕ್ಷೆಯ ನಂತರ ದೇವಕಿ, ಮೆನನ್ ಮನೆಯಲ್ಲಿ ದೇವರ ಚಿತ್ರಗಳೊಂದಿಗೆ ನ್ಯಾಯ ಮೂರ್ತಿಯ ಭಾವಚಿತ್ರ.
ಶಿಕ್ಷೆಯ ಪ್ರಮಾಣ ಜಾರಿಯಾದನಂತರ ಇಬ್ಬರೂ ಪೂರ್ಣ ಅವಧಿಯವರೆಗೆ ಶಿಕ್ಷೆ ಅನುಭವಿಸಿರಲಿಲ್ಲ. ಜೈಲಿನಲ್ಲಿ ಇಬ್ಬರ ಉತ್ತಮ ನಡುವಳಿಕೆಯಿಂದಾಗಿ ಮೆನನ್ 4 ವರ್ಷಗಳಲ್ಲಿಯೇ ಹೊರ ಬಂದನು. ದೇವಕಿ ಎರಡುವರೆ ವರ್ಷದಲ್ಲಿಯೇ ಬಿಡುಗಡೆಯಾದಳು. ನಂತರ ಇಬ್ಬರೂ ಕೇರಳಕ್ಕೆ ಹೋಗಿ ಒಂದು ಹೋಟೆಲನ್ನು ನಡೆಸುತ್ತ ಜೀವನ ನಡೆಸತೊಡಗಿದರು. ಇವರ ಸುದ್ದಿ ಮತ್ತೊಮ್ಮೆ ಸುದ್ದಿಯಾಗಿದ್ದು, ಒಬ್ಬ ವ್ಯಕ್ತಿ ಮೆನನ್ ಹಾಗೂ ದೇವಕಿ ಮನೆಗೆ ಹೋದಾಗ ಅವರ ಮನೆಯಲ್ಲಿ ಅನೇಕ ದೇವರ ಚಿತ್ರಗಳ ನಡುವೆ ಒಬ್ಬ ನ್ಯಾಯಮೂರ್ತಿಯ ಫೋಟೋ ಕೂಡ ಇರುವುದು ಕಂಡು ಬಂದಿತು. ಆ ಫೋಟೋ ಅವರ ಪ್ರಕರಣದಲ್ಲಿ ಶಿಕ್ಷೆ ನೀಡಿದ್ದ ನ್ಯಾಯಮೂರ್ತಿಯದ್ದಾಗಿತ್ತು. ಬಹುಷಃ ಇಬ್ಬರೂ ದಂಪತಿಗಳು ಆ ನ್ಯಾಯ ಮೂರ್ತಿಗೆ ಧನ್ಯವಾದ ಸಮರ್ಪಿಸಲು ಹಾಕಿದ್ದಿರ ಬಹುದು. ಆದರೆ ಈ ದಂಪತಿಗಳು ಹಾಗೂ ಅಲಾವಂದರ್ ಹತ್ಯೆಯ ಪ್ರಕರಣ ಇಂದಿಗೂ ಚರ್ಚೆಗೆ ಒಳಪಡುತ್ತದೆ ಮತ್ತು ಇಂದಿಗೂ ಅಷ್ಟೇ ಕುತೂಹಲವನ್ನು ಮೂಡಿಸುತ್ತದೆ ಎಂದರೆ ತಪ್ಪಾಗಲಾರದು.

ಇಂದಿಗೂ ಚೆನ್ನೈನ ಜನರು ಈ ಹತ್ಯೆಯ ಕಥೆಯನ್ನು ಮೆಲುಕು ಹಾಕುತ್ತಾರೆ. ಈ ಹತ್ಯೆಯ ರಹಸ್ಯಗಳ ಮೇಲೆ ದೂರದರ್ಶನದಲ್ಲಿ ಸೀರಿಯಲ್ ಕೂಡ ಮಾಡಲಾಗಿತ್ತು ಇದನ್ನು ತಮಿಳಿನಲ್ಲಿ ಮಾಡಲಾಗಿತ್ತು ಹಿಂದಿ ಅಥವಾ ಬೇರೆ ಭಾಷೆಗಳಲ್ಲಿ ಮಾಡಲಾಗಲಿಲ್ಲ. ಆದರೆ ತಮಿಳಿಗರು ಇಂದಿಗೂ ಇಷ್ಟಪಡುವ ಸೀರಿಯಲ್ ಇದಾಗಿದೆ.

-ಸಂತೋಷ್ ರಾಥೋಡ್, ಟಿವಿ5

Related Stories

No stories found.
TV 5 Kannada
tv5kannada.com