Wednesday, June 29, 2022

ಹೊಲಕ್ಕೆ ಹೋಗಿ ಬರುವುದಾಗಿ ಹೇಳಿ ಹೋದ ವ್ಯಕ್ತಿ ನಿಗೂಢವಾಗಿ ನಾಪತ್ತೆ

Must read

ಮಂಡ್ಯ: ಹೊಲಕ್ಕೆ ಹೋಗಿ ಬರುವುದಾಗಿ ಹೇಳಿ ಹೋದ ವ್ಯಕ್ತಿ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನರುಗಲು ಗ್ರಾಮದಲ್ಲಿ ನಡೆದಿದೆ.

ಮೋಹನ್ ನಿಗೂಢವಾಗಿ ನಾಪತ್ತೆಯಾದ ವ್ಯಕ್ತಿ. ಮೋಹನ್ ಕಳೆದ ಭಾನುವಾರ ಹೊಲಕ್ಕೆ ಹೋಗಿ ಬರುತ್ತೇನೆಂದು ತನ್ನ ಪತ್ನಿಗೆ ತಿಳಿಸಿ ಹೋಗಿದ್ದರು. ಹೀಗೆ ಹೋದವರೂ 4 ದಿನ ಕಳೆದರೂ ಮನೆಗೆ ಮರಳಿಲ್ಲ. ಇದೀಗ ಮೋಹನ್ ಕುಟುಂಬಸ್ಥರು ಗ್ರಾಮ ಪಂಚಾಯಿತಿ ಚುನಾವಣೆ ಸೋಲಿನ ಫಲಿತಾಂಶವೇ ನಾಪತ್ತೆಯಾಗಲು ಕಾರಣ ಎಂದು ಆರೋಪಿಸಿದ್ದಾರೆ.

ಮೋಹನ್ ತನ್ನ ದೊಡ್ಡಪ್ಪನ ಮಗ ಕುಮಾರ್​ನನ್ನು ಚುನಾವಣೆಗೆ ನಿಲ್ಲಿಸಿದ್ದರಂತೆ. ಆದರೆ, ಕುಮಾರ್ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದರು. ಈ ಹಿನ್ನೆಲೆಯಲ್ಲಿ ಮೋಹನ್ ಮೇಲೆ ಕುಮಾರ್ ಹಗೆ ಸಾಗಿಸುತ್ತಿದ್ದರಂತೆ. ಇದೇ ಕಾರಣದಿಂದ ಮೋಹನನ್ನು ಕುಮಾರ್ ಅಪಹರಿಸಿದ್ದಾನೆ ಎಂದು ಆರೋಪಿಸಿದ್ದಾರೆ.

ಕಿಡ್ನ್ಯಾಪ್ ಹಿಂದಿದ್ಯಾ ಅಕ್ರಮ ಗಣಿಗಾರಿಕೆ ಮಾಲೀಕನ ಪಾತ್ರ? 

ಕುಮಾರನ ಜಮೀನಿನಲ್ಲಿ ತಮಿಳುನಾಡು ಮೂಲದ ರಾಜು ಎಂಬಾತನ ಮಾಲೀಕತ್ವದ ಕ್ರಷರ್ ನಡೆಸಲಾಗುತ್ತಿದೆ.ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕ್ರಷರ್ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖಾ ಸಿಬ್ಬಂದಿ ದಾಳಿ ನಡೆಸಿದ್ದರು. ಈ ದಾಳಿಗೆ ಮೋಹನ್ ಕಾರಣವೆಂದು ಕ್ರಷರ್ ಮಾಲೀಕ ಭಾವಿಸಿದ್ದರಂತೆ. ಈ ಹಿನ್ನೆಲೆಯಲ್ಲಿ ಮೋಹನ್​ನನ್ನು ಕ್ರಷರ್ ಮಾಲೀಕರೇ ಅಪಹರಿಸಿದ್ದಾರೆ ಎಂಬ ಗುಮಾನಿಯೂ ಕೇಳಿಬಂದಿದೆ.

ಮೋಹನ್ ನಾಪತ್ತೆಯಾದ ದಿನದ ಸಿಸಿ ಕ್ಯಾಮರಾದ ದೃಶ್ಯ ಇನ್ನೊಂದು ಕಥೆ ಹೇಳುತ್ತಿದೆ. ಅಪರಿಚಿತ ವ್ಯಕ್ತಿಯೋರ್ವ ಮೋಹನ್​ ಬೈಕನ್ನು ಕಿಲೋ ಮೀಟರ್ ತಳ್ಳಿಕೊಂಡು ಬಂದಿದ್ದಾನೆ. ನಂತರ ಸ್ವಿಫ್ಟ್ ಕಾರು ಬರುತ್ತಿದ್ದಂತೆ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬಿಂಡಿಗನವಿಲೆ ಠಾಣಾ ಪೊಲೀಸರು, ಎಲ್ಲಾ ಆಯಾಮಗಳಲ್ಲೂ ತನಿಖೆಗೆ ಮುಂದಾಗಿದ್ದಾರೆ.

 

 

Latest article