ಬಳ್ಳಾರಿ: ಅಕಾಲಿಕ ಮಳೆಯಿಂದಾದ ಬೆಳೆ ನಾಶದಿಂದ ಮನನೊಂದ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುರುಗೋಡು ತಾಲೂಕು ಬಾದನಹಟ್ಟಿ ಗ್ರಾಮದಲ್ಲಿ ನಡೆದಿದೆ. ಗಾದಿಲಿಂಗ ದರೂರು( 28) ಮೃತ ದುರ್ದೈವಿ.
ಗಾದಿಲಿಂಗ ದರೂರು ಅವರು 5 ಎಕರೆ ಹೊಲವನ್ನು ಗುತ್ತಿಗೆ ಪಡೆದು ಮೆಣಸಿನಕಾಯಿ ಬೆಳೆ ಬೆಳೆದಿದ್ದರು. ಪ್ರತಿ ಎಕರೆಗೆ ₹1.10 ಲಕ್ಷ ಖರ್ಚು ಮಾಡಿದ್ದು, ಇದಕ್ಕಾಗಿ ₹6 ಲಕ್ಷ ಸಾಲ ಮಾಡಿಕೊಂಡಿದ್ದರು. ಕಳೆದ ವಾರ ಸತತ ಸುರಿದ ಮಳೆಗೆ ಜಿಲ್ಲಾದ್ಯಂತ ಸಾವಿರಾರು ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಗಿಡಗಳು ನಾಶವಾಗಿದೆ.
ಹೆಂಡತಿ- ಮಕ್ಕಳ ಜತೆ ಹೊಲಕ್ಕೆ ಹೋಗಿದ್ದ ಗಾದಿಲಿಂಗ, ಅವರನ್ನು ಅಲ್ಲಿಯೇ ಬಿಟ್ಟು, ಏಕಾಂಗಿಯಾಗಿ ಮನೆಗೆ ಬಂದು ಕ್ರಿಮಿನಾಶಕ ಸೇವಿಸಿದ್ದರು. ಆತನ ಹಿಂದೆಯೇ ಬಂದ ಪತ್ನಿಗೆ ಕ್ರಿಮಿನಾಶಕ ಸೇವಿಸಿರುವುದಾಗಿ ತಿಳಿಸಿದ್ದರು. ಕೂಡಲೇ ಆತನನ್ನು ಕುರುಗೋಡು ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಗೆ ಕರೆತರಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಂಜೆ ಮೃತಪಟ್ಟಿದ್ದಾರೆ.
ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.