ಬಳ್ಳಾರಿ: ಅಕ್ರಮ ಮರಳು ಸಾಗಾಣಿಕೆ ತಡೆಯಲು ಮುಂದಾದ ಅಧಿಕಾರಿ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿ ತಾಲೂಕಿನ ರೆವಿನ್ಯೂ ಇನ್ಸ್ಪೆಕ್ಟರ್ ವೆಂಕಟ ಸ್ವಾಮಿ ಮಂಗಳವಾರ ರಾತ್ರಿ ತಲಮಾಮಿಡಿ ಬಳಿ ಅಕ್ರಮವಾಗಿ ಮರಳು ತುಂಬುತ್ತಿರುವ ಟ್ರ್ಯಾಕ್ಟರ್ ಅನ್ನು ತಡೆದು ವಶಕ್ಕೆ ಪಡೆದಿದ್ದರು. ಈ ವೇಳೆ ಒಂದಿಷ್ಟು ವಾಗ್ವಾದ ನಡೆದಿತ್ತಾದರೂ ಯಾವುದಕ್ಕೂ ಜಗ್ಗದೇ ಪ್ರಕರಣ ದಾಖಲು ಮಾಡಲಾಗಿತ್ತು. ಇದನ್ನು ನೆಪವಾಗಿರಿಸಿಕೊಂಡು ನಿನ್ನೆ ತಡರಾತ್ರಿ ವೆಂಕಟ ಸ್ವಾಮಿ ಅವರ ಮನೆಗೆ ನುಗ್ಗಿದ ಮಕ್ಬುಲ್, ಇಲಿಯಾಸ್, ತೌಸಫ್ ರಫಿಕ್ ಸೇಯಾಸ್ ಎನ್ನುವ ಆರೋಪಿಗಳು ವೆಂಕಟ ಸ್ವಾಮಿ ಮತ್ತು ಅವರ ಪತ್ನಿ ಹಾಗೂ ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಸ್ವಾಮಿ ಮತ್ತವರ ಪತ್ನಿಯ ಕೈ ಮುರಿದು ಹೋಗಿದ್ದು, ಮಗನಿಗೂ ಗಂಭೀರ ಗಾಯಗಳಾಗಿವೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲೆಯಲ್ಲಿ ಮರಳು ಮಾಫಿಯಾ ಮಿತಿಮೀರುತ್ತಿದ್ದು, ತಡೆಯಲು ಯತ್ನಿಸಿದ ಅಧಿಕಾರಿಗಳ ಮೇಲೆ ಈ ರೀತಿ ಹಲ್ಲೆ ನಡೆದಿರುವುದು ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.