ಬಿಜೆಪಿಯದ್ದು ನಕಲಿ ಹಿಂದುತ್ವ.. ಇವರು ಡೋಂಗಿ ರಾಮಭಕ್ತರು..!

ಬಿಜೆಪಿಯದ್ದು ನಕಲಿ ಹಿಂದುತ್ವ.. ಇವರು ಡೋಂಗಿ ರಾಮಭಕ್ತರು..!

ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಗಣೇಶ ಚತುರ್ಥಿ ದಿನದಂದೇ ಹಿಂದೂ ದೇವಾಲಯವನ್ನ ನೆಲಸಮ ಮಾಡಿದ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ವಿಧಾನಸೌಧದ ಅಧಿವೇಶನದಲ್ಲಿ ಮಾತನಾಡಿದ ಅವರು, ದೇವಾಲಯವನ್ನ ನೆಲಸಮ ಮಾಡುವ ಸಂಗತಿ ಸರ್ಕಾರದ ಗಮನದಲ್ಲಿತ್ತು. 15 ದಿನಗಳ ಹಿಂದೆಯೇ ದೇಗುಲ ನೆಲಸಮ ಮಾಡಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಪತ್ರವನ್ನೂ ಬರೆದಿದ್ದರು. ಇದೆಲ್ಲವೂ ತಿಳಿದಿದ್ದರೂ ಹಿಂದೂಗಳ ಪವಿತ್ರ ಹಬ್ಬದ ದಿನವೇ ದೇಗುಲವನ್ನ ನೆಲಸಮ ಮಾಡಿದ್ದಾರೆ. ಮುಖ್ಯ ಕಾರ್ಯದರ್ಶಿಗಳು ಪತ್ರ ಬರೆದ ಬಳಿಕವೇ ಈ ಘಟನೆ ನಡೆದಿದೆ. ಅದರ ಅರ್ಥ ಏನಂದ್ರೆ, ಸರ್ಕಾರಕ್ಕೆ ಇದರ ಸಂಪೂರ್ಣ ಮಾಹಿತಿ ಇತ್ತು. ಆದರೂ ಯಾರೊಬ್ಬರೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಸ್ಥಳೀಯರ ವಿರೋಧವನ್ನೂ ಲೆಕ್ಕಿಸದೇ ಏಕಾಏಕಿ ದೇಗುಲವನ್ನ ಕೆಡವಿದ್ದಾರೆ.

ಯಾರು ನಿತ್ಯ ಹಿಂದುತ್ವದ ಜಪ ಮಾಡುತ್ತಾರೋ, ಯಾರು ರಾಮನ ಜಪ ಮಾಡುತ್ತಾರೋ ಅವರೇ ನಂಜನಗೂಡಿನಲ್ಲಿ ಹಿಂದೂ ದೇವಾಲಯವನ್ನ ನೆಲಸಮ ಮಾಡಿದ್ದಾರೆ. ಅಲ್ಲಿ ರಾಮನ ಜಪ ಮಾಡೋದು, ಇಲ್ಲಿ ದೇಗುಲ ಕೆಡವೋದು. ಅಲ್ಲಿ ಡೋಂಗಿ ಹಿಂದುತ್ವ ಹೇಳೋದು, ಇಲ್ಲಿ ದೇಗುಲ ಧ್ವಂಸ ಮಾಡೋದು. ಬಿಜೆಪಿಯವರಿಗೆ ಹಿಂದುತ್ವದ ಬಗ್ಗೆ ನಿಜವಾದ ಕಾಳಜಿ ಇಲ್ಲ. ರಾಜಕೀಯ ಲಾಭಕ್ಕಾಗಿ ಮಾತ್ರ ಹಿಂದುತ್ವದ ಜಪ ಮಾಡುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ದೇವಾಲಯ ನೆಲಸಮ ಮಾಡಿದ ಬಳಿಕ ಸಂಪುಟ ಸಭೆ ನಡೆಸುವ ನಾಟಕ ಮಾಡುತ್ತಿದ್ದಾರೆ. ಇವರ ಹುಸಿಹಿಂದುತ್ವ ಈಗ ಜನರ ಮುಂದೆ ಬೆತ್ತಲಾಗಿದೆ ಎಂದು ಸಿದ್ದರಾಮಯ್ಯ ತರಾಟೆ ತೆಗೆದುಕೊಂಡಿದ್ದಾರೆ.

Related Stories

No stories found.
TV 5 Kannada
tv5kannada.com