ಅಂದು ಹಾರ ತುರಾಯಿ ಸನ್ಮಾನ.. ಇಂದು ಹೊರಗೆ ನಿಲ್ಲಿಸಿ ಅಪಮಾನ..! ಇದೆಂಥಾ ಮರ್ಯಾದೆ ಸ್ವಾಮಿ..!

ಅಂದು ಹಾರ ತುರಾಯಿ ಸನ್ಮಾನ.. ಇಂದು ಹೊರಗೆ ನಿಲ್ಲಿಸಿ ಅಪಮಾನ..! ಇದೆಂಥಾ ಮರ್ಯಾದೆ ಸ್ವಾಮಿ..!

ಇದನ್ನೇ ಅವಕಾಶವಾದ ಎಂದು ಕರೆಯೋದು. ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಕೊರೊನಾ ವಾರಿಯರ್​ಗಳು ಜೀವವನ್ನೇ ಪಣಕ್ಕಿಟ್ಟು ಕೆಲಸ ಮಾಡಿದ್ದಾರೆ. ಎಷ್ಟೋ ಜನ ಕೊರೊನಾ ಅಂಟಿಸಿಕೊಂಡು ಮೃತರಾಗಿದ್ದಾರೆ. ಇದೇ ಕಾರಣಕ್ಕೆ ಸರ್ಕಾರ ಕೊರೊನಾ ವಾರಿಯರ್​ಗಳಿಗೆ ಹಾರ ತುರಾಯಿ ಹಾಕಿ ಸನ್ಮಾನ ಮಾಡಿತ್ತು. ಆದ್ರೆ, ಸರ್ಕಾರದ ನಿಜ ಬಣ್ಣ ಇಂದು ಬಯಲಾಗಿದೆ. ಯಾಕಂದ್ರೆ, ಜೀವವನ್ನೇ ಪಣಕ್ಕಿಟ್ಟು ಕೆಲಸ ಮಾಡಿದ ಅದೇ ಕೊರೊನಾ ವಾರಿಯರ್​ಗಳನ್ನ ಇಂದು ವಿಧಾನಸೌಧದ ಹೊರಗೆ ನಿಲ್ಲಿಸಿ ಅಪಮಾನ ಮಾಡಿದೆ. ಅಷ್ಟೇ ಅಲ್ಲ, ಪ್ರತಿಭಟನೆಗೆ ಅವಕಾಶವನ್ನೂ ಕೊಡದೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಲ್ಲಾಗಿದ್ದಿಷ್ಟೇ.. ಕೊರೊನಾ ಅಟ್ಟಹಾಸಗೈಯುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಾವಿರಾರು ನರ್ಸಿಂಗ್​, ಟೆಕ್ನಿಷಿಯನ್ಸ್​ ಹಾಗೂ ಡಿ ಗ್ರೂಪ್​ ನೌಕರರನ್ನ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿತ್ತು. ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ದಯವಿಟ್ಟು ಕೊರೊನಾ ಕೆಲಸಕ್ಕೆ ಬನ್ನಿ ಎಂದು ಮನವಿ ಮಾಡಿತ್ತು. ಅಷ್ಟೇ ಅಲ್ಲದೇ, ನಿಮ್ಮೆಲ್ಲರನ್ನೂ ಖಾಯಂಗೊಳಿಸಿವುದಾಗಿ ಭರವಸೆಯನ್ನೂ ಕೊಟ್ಟಿತ್ತು. ಆದರೆ ಈಗ ರಾಜ್ಯದಲ್ಲಿ ಕೊರೊನಾ ಕಡಿಮೆಯಾಗುತ್ತಲೇ ಆ ಎಲ್ಲಾ ಗುತ್ತಿಗ ನೌಕರರನ್ನ ಕರ್ತವ್ಯದಿಂದ ಮುಕ್ತಗೊಳಿಸಲು ಹೊರಟಿದೆ.

ಈಗಾಗಲೇ ಅದಕ್ಕೆ ಸಂಬಂಧಿಸಿದಂತೆ ರಾಜ್ಯ ಆರೋಗ್ಯ ಇಲಾಖೆ ಸುತ್ತೋಲೆಯನ್ನೂ ಹೊರಡಿಸಿದೆ. ಪ್ರಾಣವನ್ನೇ ಪಣಕ್ಕಿಟ್ಟು ಎರಡು ವರ್ಷ ಸೇವೆ ಸಲ್ಲಿಸಿದ ನೌಕರರನ್ನ ಈಗ ದಿಢೀರ್​ ಎಂದು ಕೈಬಿಡುತ್ತಿರುವುದು ಸಾವಿರಾರು ನೌಕರರು ಹಾಗೂ ಅವರ ಕುಟುಂಬದವರನ್ನ ಕೆರಳಿಸಿದೆ.

ಹೊರಗೆ ನಿಲ್ಲಿಸಿ ಅಪಮಾನ:

ತಮಗಾಗಿರುವ ಅನ್ಯಾಯವನ್ನ ಪ್ರಶ್ನಿಸಿ ಇಂದು ಮುಖ್ಯಮಂತ್ರಿಗಳ ಭೇಟಿಗೆ ಸಾವಿರಾರು ನೌಕರರು ವಿಧಾನಸೌಧಕ್ಕೆ ಆಗಮಿಸಿದ್ದರು. ಈ ವೇಳೆ ಮುಖ್ಯಮಂತ್ರಿಗಳಾಗಲಿ, ಆರೋಗ್ಯ ಸಚಿವರಾಗಲಿ ಅವರನ್ನ ಭೇಟಿ ಮಾಡುವ ಸೌಜನ್ಯವನ್ನೂ ತೊರಲಿಲ್ಲ. ಬದಲಿಗೆ ಅವರನ್ನೆಲ್ಲಾ ವಿಧಾನಸೌಧದ ಹೊರಗೆ ನಿಲ್ಲಿಸಿದರು. ಪ್ರತಿಭಟನೆಗೂ ಅವಕಾಶ ನೀಡದೇ ಪೊಲೀಸರು ವಶಕ್ಕೆ ಪಡೆದರು.

ಅಂದು ಹಾರ ತುರಾಯಿ ಹಾಕಿ ಸನ್ಮಾನಿಸಿದ್ದರು. ಮನೆಗಳಿಗೆ ಬಂದು ಕೆಲಸಕ್ಕೆ ಕರೆದುಕೊಂಡು ಹೋಗಿದ್ದರು. ಹಗಲು ರಾತ್ರಿ ಎನ್ನದೇ 24 ಗಂಟೆ ಅಪಾಯದ ಮಡಿಲಿನಲ್ಲಿ ದುಡಿಸಿಕೊಂಡರು. ಈಗಅವರಿಗೆ ಬೇಡವೆಂದು ಕರ್ತವ್ಯದಿಂದಲೇ ಮುಕ್ತಗೊಳಿಸುತ್ತಿದ್ದಾರೆ ಎಂದು ಆ ಎಲ್ಲಾ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ವಶಕ್ಕೆ ಪೊಲೀಸರ ಜೊತೆಯಲ್ಲಿ ಕೆಲಹೊತ್ತು ವಾಗ್ವಾದವನ್ನೂ ನಡೆಸಿದರು.

ಕರುಣೆ ಇಲ್ಲದ ಸರ್ಕಾರ: ಬೇಕಾದಾಗ ಬಳಸಿಕೊಂಡು, ಬೇಡ ಎಂದಾಗ ಹೊರ ದೂಕುವ ಸರ್ಕಾರದ ಬಗ್ಗೆ ಕೊರೊನಾ ವಾರಿಯರ್​ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಷ್ಟೋ ವಾರಿಯರ್​ಗಳು ತಮ್ಮ ಹಿಂದಿನ ಕೆಲಸವನ್ನ ಬಿಟ್ಟು ಜೀವ ಒತ್ತೆಯಿಟ್ಟು ಕೆಲಸ ಮಾಡಿದ್ದರು. ಅಂತವರನ್ನ ಕೆಲಸದಿಂದ ತೆಗೆದು ಹಾಕಿದರೆ ಅವರ ಕುಟುಂಬಗಳು ಬೀದಿಗೆ ಬೀಳಲಿವೆ. ಆದ್ರೆ ಜನರ ಈ ಸಂಕಷ್ಟ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ ಎನ್ನುವುದೇ ದುರಂತ.

Related Stories

No stories found.
TV 5 Kannada
tv5kannada.com