ಬೆಂಗಳೂರು: ಗೃಹ ಸಚಿವರ ಸ್ವಗ್ರಾಮದಲ್ಲಿಯೇ ದಲಿತ ಮಹಿಳೆಯನ್ನ ಪತಿ ಎದುರೇ ವಿವಸ್ತ್ರಗೊಳಿಸಿ, ಅತ್ಯಾಚಾರಕ್ಕೆ ಯತ್ನಿಸಿರುವ ವಿಕೃತ ಘಟನೆಯನ್ನ ತೀವ್ರವಾಗಿ ಖಂಡಿಸುತ್ತೇನೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಸ್ವಗ್ರಾಮದಲ್ಲಿ ನಡೆದ ಘಟನೆ 2ದಿನವಾದರೂ ಸಚಿವರ ಗಮನಕ್ಕೇ ಬಂದಿಲ್ಲವೇ? ಇಲ್ಲಿವರೆಗೆ ಪೊಲೀಸರು ದುಷ್ಕ್ರರ್ಮಿಗಳನ್ನ ಬಂಧಿಸಲು ಮೀನಾಮೇಷ ಯಾಕೆ. ಈ ಕೂಡಲೇ ಬಂಧಿಸಲು ಒತ್ತಾಯಿಸುತ್ತೇನೆ ಎಂದು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆರಗ ಗ್ರಾಮದಲ್ಲಿ ದಲಿತ ದಂಪತಿಯನ್ನು ಥಳಿಸಿ, ಪತ್ನಿಯನ್ನು ಬೆತ್ತಲೆಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿರುವ ನಡೆದಿತ್ತು. ಸೋಮವಾರ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ದಲಿತ ದಂಪತಿ ತೀರ್ಥಹಳ್ಳಿ ಆಸ್ಪತ್ರೆಯಿಂದ ಮನೆಗೆ ತೆರಳುವಾಗ ಅಡ್ಡಗಟ್ಟಿದ ನಾಲ್ಕು ಮಂದಿ ದುಷ್ಕರ್ಮಿಗಳು ಗಂಡನ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿ, ಬಳಿಕ ಮಹಿಳೆಯನ್ನು ಪಕ್ಕದ ರಬ್ಬರ್ ತೋಟಕ್ಕೆ ಎಳೆದೊಯ್ದು ವಿವಸ್ತ್ರಗೊಳಿಸಿ, ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ವೇಳೆ ಮಹಿಳೆ ಸಹಾಯಕ್ಕಾಗಿ ಕೂಗಾಡಿದ್ದು, ಕಿಡಿಗೇಡಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.