ಬೆಂಗಳೂರು: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಹಾಗೂ ಸಚಿವ ಅಶ್ವತ್ಥ್ ನಾರಾಯಣ ಭೇಟಿ ವಿಚಾರವಾಗಿ ಡಿ.ಕೆ.ಶಿವಕುಮಾರ್ ಮತ್ತು ನಟಿ ರಮ್ಯಾ ನಡುವಿನ ಪೈಟ್ ಹಿನ್ನೆಲೆಯಲ್ಲಿ ಟ್ವಿಟರ್ ಮೂಲಕ ಬಿಜೆಪಿ ಲೇವಡಿ ಮಾಡಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಒಂದು ಒಡೆದ ಮನೆ. ಇಲ್ಲಿ ಯಾರ ಅಭಿಪ್ರಾಯವನ್ನು ಯಾರು ಸಮರ್ಥಿಸುತ್ತಾರೆ, ಯಾರು ವಿರೋಧಿಸುತ್ತಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಎಂ.ಬಿ.ಪಾಟೀಲ್ ಹಾಗೂ ಅಶ್ವತ್ಥ್ ನಾರಾಯಣ ಅವರ ಭೇಟಿಯ ಬಗ್ಗೆ ಮಾತನಾಡಿದ #ಅಸಹಾಯಕಡಿಕೆಶಿ ಅವರೀಗ ತಮ್ಮ ಸ್ವಂತ ಮನೆಯಲ್ಲೇ ಉಪವಾಸ ಮಾಡುವ ಸ್ಥಿತಿಯಲ್ಲಿದ್ದಾರೆ. ಹೀಗೇಕಾಯಿತು ಡಿ.ಕೆ.ಶಿವಕುಮಾರ್ ಅವರೇ? ಎಂದು ಪ್ರಶ್ನಿಸಿದೆ.
ಅಕ್ರಮ ಸಂಪಾದನೆಯ ಹಣದ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಏನೋ ಸಾಧನೆ ಮಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಡಿ.ಕೆ.ಶಿವಕುಮಾರ್ ಅವರೀಗ #ಅಸಹಾಯಕ ಡಿಕೆಶಿ ಆಗಿದ್ದಾರೆ. ಕೆಪಿಸಿಸಿ ಮನೆಯಲ್ಲಿ ಈಗ #ಮೀರ್ಸಾದಿಕ್ ಹಾವಳಿ ಜಾಸ್ತಿಯಾಗಿದ್ದು ನಿಜವೇ? ಗುಂಪುಗಾರಿಕೆ, ಬಣ, ಉಪಬಣ, ಆ ಬಣ ಈ ಬಣಗಳ ನಡುವೆಯೂ ಒಗ್ಗಟ್ಟಿನ ಮಂತ್ರವೇಕೆ? “ನೀನೇ ಸಾಕಿದ ಗಿಣಿ, ನಿನ್ನ ಮುದ್ದಿನ ಗಿಣಿ, ಹದ್ದಾಗಿ ಕುಕ್ಕಿತ್ತಲ್ಲೋ”, ಇದು ಅಸಹಾಯಕ ಡಿಕೆಶಿ ಅವರ ಸದ್ಯದ ಸ್ಥಿತಿ. ಡಿಕೆಶಿ ಅವರೇ ಬೆಳೆಸಿದ ರಮ್ಯಾ ಈಗ ಡಿಕೆಶಿಗೆ ಸಾಮಾಜಿಕ ಮಾಧ್ಯಮದಲ್ಲಿ ಬುದ್ಧಿಮಾತು ಹೇಳುತ್ತಿದ್ದಾರೆ.
ರಮ್ಯಾ ಅವರನ್ನು #ಭ್ರಷ್ಟಾಧ್ಯಕ್ಷರ ವಿರುದ್ಧ ಛೂಬಿಟ್ಟಿದ್ದು #ಮೀರ್ಸಾದಿಕ್ ಅವರಿರಬಹುದೇ? ಎಂದು ವ್ಯಂಗ್ಯವಾಡಿದೆ.
ತನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ ಉಗ್ರಪ್ಪ ಅವರನ್ನು ಪಕ್ಕದಲ್ಲಿ ಕೂರಿಸಿಕೊಳ್ಳುವಷ್ಟು ಡಿ.ಕೆ.ಶಿವಕುಮಾರ್ ಅಸಹಾಯಕರೇ? ಅಲ್ಪಸಂಖ್ಯಾತ ಸಲೀಂ ಅವರನ್ನು ಕಿತ್ತೊಗೆದು ಉಗ್ರಪ್ಪ ಜೊತೆ ಪತ್ರಿಕಾಗೋಷ್ಠಿ ಮಾಡುವ ಮೂಲಕ ಯಾವ ಸಂದೇಶ ನೀಡುತ್ತಿದ್ದೀರಿ?ನೀವೆಂತಹ ಬಂಡೆ, ಕಲ್ಲುಬಂಡೆಯೋ ಅಥವಾ ಟೊಳ್ಳು ಬಂಡೆಯೋ? ಭ್ರಷ್ಟಾಧ್ಯಕ್ಷ ಡಿಕೆಶಿ ಅವರೇ, ನೀವು ನಿಜಕ್ಕೂ ಕೆಪಿಸಿಸಿ ಅಧ್ಯಕ್ಷರೇ?ಸಾರ್ವಜನಿಕ ಬದುಕಿನಿಂದ ಕಳೆದು ಹೋದವರೆಲ್ಲಈಗ ಬಂದು ಕೆಪಿಸಿಸಿ ಅಧ್ಯಕ್ಷರಿಗೆ ಪಾಠ ಹೇಳುತ್ತಿರುವುದನ್ನು ನೋಡಿದರೆ, ಕನಕಪುರದ ಬಂಡೆ ಎಷ್ಟು ಗಟ್ಟಿ ಎಂದು ಯೋಚಿಸಬೇಕಲ್ಲವೇ? ಡಿಕೆಶಿ ಅವರನ್ನು ಅಧೀರರನ್ನಾಗಿಸುವ ಹಿಂದೆ #ಮೀರ್ಸಾದಿಕ್ ತಂತ್ರವಿದೆಯೇ?
ಮಾನ್ಯ ಡಿಕೆಶಿ ಅವರೇ, ನಿಮ್ಮ ಹೇಳಿಕೆಯನ್ನು ಪಕ್ಷದ ವೇದಿಕೆಯಲ್ಲಿ ಪ್ರಶ್ನಿಸುತ್ತೇನೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ. ದೆಹಲಿ ವರಿಷ್ಠರ ಮುಂದೆಯೇ ನಿಮ್ಮ ನಾಯಕತ್ವದ ಪ್ರಶ್ನೆಗೆ ವೇದಿಕೆ ಸಿದ್ದವಾಗುತ್ತಿದೆಯೇ #ಅಸಹಾಯಕ ಡಿಕೆಶಿ? ಎಂದು ಲೇವಡಿ ಮಾಡಿದೆ.