ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಅವರ ಬಳಿ ಕ್ಷಮೆ ಕೋರುವಂತೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ನಿರ್ದೇಶಕ ರಾಕ್ಲೈನ್ ವೆಂಕಟೇಶ್ ಮನೆ ಬಳಿ ಪ್ರತಿಭಟನೆ ನಡೆಸಿದ್ದಾರೆ.
ಹೆಚ್.ಡಿ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವಿನ ಮಾತಿನ ಜಟಾಪಟಿ ನಡೆದಿದ್ದು, ಈ ಮಧ್ಯೆ ರಾಕ್ಲೈನ್ ವೆಂಕಟೇಶ್ ಸುಮಲತಾ ಪರ ಬ್ಯಾಟ್ ಬೀಸಿದ್ದರು. ಅಲ್ಲದೇ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇದನ್ನು ಖಂಡಿಸಿ ಯುವ ಜನತಾದಳದ ಕಾರ್ಯಕರ್ತರು ಮಹಾಲಕ್ಷ್ಮಿ ಲೇಔಟ್ನಲ್ಲಿರುವ ರಾಕ್ಲೈನ್ ವೆಂಕಟೇಶ್ ಮನೆ ಬಳಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ರಾಕ್ಲೈನ್ ಚಿತ್ರರಂಗ ಹಾಳು ಮಾಡಿ ಈಗ ರಾಜಕೀಯ ಹಾಳು ಮಾಡೋಕೆ ಹೊರಟಿದ್ದಾರೆ ಎಂದು ಆಕ್ರೋಶ್ ಹೊರಹಾಕಿದ್ದಾರೆ. ಕುಮಾರಸ್ವಾಮಿ ಅವರ ಬಳಿ ರಾಕ್ಲೈನ್ ಕ್ಷಮೆ ಕೇಳುವವರೆಗೂ ಪ್ರತಿಭಟನೆ ನಡೆಸೋದಾಗಿ ಎಚ್ಚರಿಕೆ ನೀಡಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ದೌಡಾಯಿಸಿದ್ದು, ಪರಿಸ್ಥಿತಿ ತಿಳಿಗೊಳಿಸಲು ಪ್ರತಿಭಟನಾ ನಿರತ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.