9 ವರ್ಷಗಳಾದ್ರೂ ಮುಗಿಯದ ಎತ್ತಿನಹೊಳೆ ಯೋಜನೆ..! ₹12,900 ಕೋಟಿಯಿಂದ ₹26 ಸಾವಿರ ಕೋಟಿಗೆ ವೆಚ್ಚ ಹೆಚ್ಚಳ..!

9 ವರ್ಷಗಳಾದ್ರೂ ಮುಗಿಯದ ಎತ್ತಿನಹೊಳೆ ಯೋಜನೆ..! ₹12,900 ಕೋಟಿಯಿಂದ ₹26 ಸಾವಿರ ಕೋಟಿಗೆ ವೆಚ್ಚ ಹೆಚ್ಚಳ..!
Are We Stupid

ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಬರಪೀಡಿತ ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಇದು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅಂದ್ರೆ 2013-14ರಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ, ಅಂದಿನಿಂದ ಇಂದಿನವರೆಗೂ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ. ಕಳೆದ 9 ವರ್ಷಗಳಿಂದಲೂ ಯೋಜನೆಗೆ ನೂರೆಂಟು ವಿಘ್ನ..

ಆರಂಭಿಕ ಅಂದಾಜು ವೆಚ್ಚ 12,900 ಕೋಟಿ ರೂಪಾಯಿ. ಆದ್ರೆ, ವಿಳಂಬ ಕಾಮಗಾರಿಯಿಂದಾಗಿ ಈಗ 26 ಸಾವಿರ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಅಂದ್ರೆ, ದುಪ್ಪಟ್ಟು. ಆದ್ರೆ, ಇನ್ನೂ ಕಾಮಗಾರಿ ಮುಗಿದಿಲ್ಲ. ಯಾವಾಗ ಮುಗಿಯುತ್ತೋ ಗೊತ್ತಿಲ್ಲ. ಅಧಿಕಾರಿಗಳಿಗೂ ಅಂದಾಜಿಲ್ಲ.. ಜನಪ್ರತಿನಿಧಿಗಳಿಗೂ ತಿಳಿದಿಲ್ಲ.

ಕೊರಟಗೆರೆ ತಾಲೂಕಿನಲ್ಲಿರುವ ಭೂ ವಿವಾದವೇ ಯೋಜನೆಗೆ ಪ್ರಮುಖ ಅಡ್ಡಗಾಲು. ಬೈರಗುಂಡ್ಲು ಗ್ರಾಮದ ಬಳಿ ಜಲಾಶಯ ನಿರ್ಮಿಸಲು ಸುಮಾರು 8ಕ್ಕೂ ಹೆಚ್ಚು ಹಳ್ಳಿ ಸ್ಥಳಾಂತರಿಸಬೇಕು. ಈಗಾಗಲೇ ಸರ್ವೇ ಕಾರ್ಯ ಕೂಡ ಮುಗಿದು ಹೋಗಿದೆ. ಆದ್ರೆ, ಮುಳುಗಡೆಯಾಗಲಿರುವ ಭೂಮಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿಗೂ ಸೇರಿದೆ. ಹಾಗೆಯೇ, ಪಕ್ಕದ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿಗೂ ಸೇರಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಭೂಮಿಯ ಮೌಲ್ಯ ಅಧಿಕ. ಆದ್ರೆ, ತುಮಕೂರು ಜಿಲ್ಲೆಯಲ್ಲಿ ಅಷ್ಟಿಲ್ಲ. ಎಲ್ಲಾ ಸ್ವಾಧೀನ ಭೂಮಿಗೂ ಒಂದೇ ರೇಟ್ ಫಿಕ್ಸ್ ಮಾಡಿ. ಬೆಂಗಳೂರು ಗ್ರಾಮಾಂತರಕ್ಕೊಂದು ರೇಟ್... ತುಮಕೂರು ಜಿಲ್ಲೆಗೊಂದು ರೇಟ್ ಬೇಡ ಅನ್ನೋದು ಅನ್ನದಾತರ ಡಿಮ್ಯಾಂಡ್. ಆದ್ರೆ, ಸರ್ಕಾರ ಇದಕ್ಕೆ ತಯಾರಿಲ್ಲ.

ಇಂದು ಈ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ ಕೊರಟಗೆರೆ ಕಾಂಗ್ರೆಸ್ ಶಾಸಕ ಡಾ.ಜಿ.ಪರಮೇಶ್ವರ್, ಸ್ವಾಧೀನದ ಹೆಸರೇಳಿ ಯೋಜನೆಯ ದಾರಿ ತಪ್ಪಿಸುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಟೆಂಡರ್ ಆಗಿದೆ, ವರ್ಕ್ ಆರ್ಡರ್ ಆಗಿದೆ. ಹೀಗಿರುವಾಗ ಯೋಜನೆ ಬದಲಾವಣೆ ಏಕೆ..? ಹತ್ತಿರಕ್ಕೆ ಬಂದಾಗ ಯೋಜನೆ ನಿಂತಿದೆ. ಕೇವಲ ೪೦೦ ಕೋಟಿ ನೀಡಲು ಸಬೂಬು ಯಾಕೆ? ರೈತರ ಭೂ ಸ್ವಾಧೀನಕ್ಕೆ ಹಣ ನೀಡೋಕೆ ಯಾಕೆ ತಡೆ? ಎಂದು ಸರ್ಕಾರಕ್ಕೆ ತರಾಟೆ ತೆಗೆದುಕೊಂಡ್ರು. ಪರಂಗೆ ರಮೇಶ್ ಕುಮಾರ್‌ ದನಿಗೂಡಿಸಿದ್ರು.

ಕಾಂಗ್ರೆಸ್ ಪ್ರಶ್ನೆಗೆ ಉತ್ತರ ನೀಡಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಯೋಜನೆಯ ವೆಚ್ಟ ೧೨,೯೦೦ ಕೋಟಿಯಿಂದ ೨೬ ಸಾವಿರ ಕೋಟಿಗೆ ಹೋಗಿದೆ. ಇದಕ್ಕೆ ನಾವೂ ಕಾರಣ.. ನೀವೂ ಕಾರಣ. ಆದಷ್ಟು ಬೇಗ ಯೋಜನೆ ಮುಗಿಸಲು ಪ್ರಯತ್ನ ಮಾಡ್ತೇವೆ ಅಂತ ಹೇಳಿದ್ರು.

ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ ಬೊಮ್ಮಾಯಿ, ಈ ಬಗ್ಗೆ ನಾನೇ ಸಭೆ ನಡೆಸಿ, ಸಮಸ್ಯೆ ಸರಿಪಡಿಸುತ್ತೇನೆ ಎಂದು ಸದನಕ್ಕೆ ತಿಳಿಸಿದ್ರು.

ಆದ್ರೆ, ಇಲ್ಲಿ ಪ್ರಶ್ನೆ ಇರೋದು ಅದಲ್ಲ. ಕಾಮಗಾರಿ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಲೂಟಿ ಆಗ್ತಿರೋ ಆರೋಪ ಇದೆ. 9 ವರ್ಷವಾದ್ರೂ ಕಾಮಗಾರಿ ಮುಗಿದಿಲ್ಲ. ಸುಮಾರು 13 ಸಾವಿರ ಕೋಟಿ ರೂಪಾಯಿ ಅಂದ್ರೆ ದುಪ್ಪಟ್ಟು ವೆಚ್ಚ ಹೆಚ್ಚಾಗಿದೆ. ಆದ್ರೂ ಕಾಮಗಾರಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಸರ್ಕಾರ ನಿರೀಕ್ಷಿಸಿದಷ್ಟು ನೀರು ಎತ್ತಿನಹೊಳೆಯಲ್ಲಿ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಆದ್ರೆ, ಎತ್ತಿನಹೊಳೆ ಹೆಸರಿನಲ್ಲಿ ಸರ್ಕಾರ ಮಾತ್ರ ಜನರನ್ನ ಮೂರ್ಖರನ್ನಾಗಿಸುತ್ತಿರೋದು ಸುಳ್ಳಲ್ಲ.

Related Stories

No stories found.
TV 5 Kannada
tv5kannada.com