ತುಮಕೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲವೇ ಇಲ್ಲ. ಸದ್ಯ ಯಾವುದೇ ಬದಲಾವಣೆ ಇಲ್ಲ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ರಾಜ್ಯದಲ್ಲಿ ಒಳ್ಳೆಯ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಸಚಿವ ಸಂಪುಟದ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರ. ಅವರು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ಇನ್ನು ಪಂಚಮಸಾಲಿ ೨ಎ ಮೀಸಲಾತಿ ವಿಚಾರವಾಗಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅದರ ಕುರಿತು ಅಧ್ಯಯನ ಮಾಡುತಿದ್ದಾರೆ. ಇನ್ನು ಎರಡು ತಿಂಗಳಲ್ಲಿ ವರದಿ ತಯಾರಾಗಬಹುದು. ಆಗ ಸೂಕ್ತ ನಿರ್ಧಾರಕ್ಕೆ ಬರುತ್ತೇವೆ ಎಂದು ಸಿಎಂ ಹೇಳಿಕೆ ನೀಡಿದ್ದಾರೆ. ಎರಡು ತಿಂಗಳು ಗಡುವು ಅಂತಲ್ಲಾ. ಎರಡು ತಿಂಗಳಲ್ಲಿ ಸೂಕ್ತ ನಿರ್ಧಾರಕ್ಕೆ ಬರುತ್ತಾರೆ ಎಂಬ ವಿಶ್ವಾಸ ಇದೆ ಎಂದಿದ್ದಾರೆ.
ಮಹಾರಾಷ್ಟ್ರ ಸರ್ಕಾರದ ಅಸ್ಥಿರತೆ ವಿಚಾರವಾಗಿ ಮಾತನಾಡಿದ ಅವರು, ಇದು ಆಪರೇಷನ್ ಕಮಲ ಅಲ್ಲ. ಕಾಂಗ್ರೆಸ್ನವರ ಜೊತೆ ಹೊಂದಾಣಿಕೆ ಆಗದೆ ಬೇಸತ್ತು ಶಿವಸೇನೆ, ಹಾಗೂ ಎನ್ಸಿಪಿ ಅವರು ಬಿಟ್ಟು ಬಂದಿದ್ದಾರೆ. ಸ್ಟೇರಿಂಗ್, ಬ್ರೇಕ್,ಎಕ್ಸಲೇಟರ್ ಇದು ಬೇರೆ ಬೇರೆ ವ್ಯಕ್ತಿಗಳ ಜೊತೆ ಇದೆ. ಹೀಗಾಗಿ ಮಹಾರಾಷ್ಟ್ರ ಸರ್ಕಾರದಲ್ಲಿ ಅಪಘಾತ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಅಸಮಾಧಾನಿತರು ಬಿಜೆಪಿಗೆ ಬೆಂಬಲಿಸುವ ನಿರೀಕ್ಷೆಯಿದ್ದು, ಮುಂದಿನ ದಿನದಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಬರುವ ಭರವಸೆ ಇದೆ ಎಂದಿದ್ದಾರೆ.