ಮೈಸೂರು: ಗ್ಯಾಸ್ ಪೈಪ್ಲೈನ್ ಯೋಜನೆಗೆ ವಿರೋಧ ವ್ಯಕ್ತಪಡಿಸಿದ ಮೈಸೂರು ಕಾರ್ಪೋರೇಟರ್ಗಳ ವಿರುದ್ಧ ಸಂಸದ ಪ್ರತಾಪ್ಸಿಂಹ ಸಮರ ಸಾರಿದ್ದು, ಮೈಸೂರು ಜನತೆಗೆ ಹೊಸ ಕರೆ ಕೊಟ್ಟಿದ್ದಾರೆ.
ಇಂದು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪ್ರತಾಪ್ ಸಿಂಹ, ಮಳೆಯಿಂದ ಸಂಕಷ್ಟಕ್ಕೀಡಾಗಿರುವವರ ಸಮಸ್ಯೆ ಕೇಳದ ಕಾರ್ಪೊರೇಟರ್ಗಳ ವಿರುದ್ಧ ಕಿಡಿಕಾರಿದ್ದಾರೆ.
ನಿಮ್ಮ ಏರಿಯಾಗಳಲ್ಲಿ ಒಳಚರಂಡಿ ಸರಿ ಇಲ್ವಾ..? ನಿಮ್ಮ ಏರಿಯಾದಲ್ಲಿ ಕಸ ವಿಲೇವಾರಿಯಾಗುತ್ತಿದೆಯೇ..? ನಿಮ್ಮ ಏರಿಯಾದಲ್ಲಿ ಒಳಚರಂಡಿ ತುಂಬಿ ಹರಿಯುತ್ತಿದೆಯೇ..? ನಿಮ್ಮ ಏರಿಯಾದಲ್ಲಿ ಯಾವುದೇ ಸಮಸ್ಯೆ ಇದೆ ಅಂದ್ರೆ ಆಯಾ ನಗರಪಾಲಿಕೆ ಸದಸ್ಯರ ಮನೆ ಮುಂದೆ ಧರಣಿ ಕುಳಿತುಕೊಳ್ಳಿ. ನಗರ ಪಾಲಿಕೆ ಸದಸ್ಯರ ಕುತ್ತಿಗೆ ಪಟ್ಟಿ ಹಿಡಿದು ಕೆಲಸ ಮಾಡಿ ಅಂತಾ ಕೇಳಿ. ಯಾವಾಗ ನಿಮ್ಮ ಕಾರ್ಪೊರೇಟರ್ಗಳ ಕುತ್ತಿಗೆ ಪಟ್ಟಿ ಹಿಡಿಯುತ್ತೀರಾ ಆಗಷ್ಟೇ ನಿಮ್ಮ ಕೆಲಸ ಆಗುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ನಾನು ಕಾರ್ಪೋರೇಟರ್ ಕೆಲಸ ಮಾಡಬೇಕೆಂದರೂ ತೊಂದರೆಯಿಲ್ಲ. ನಾನು ಅದನ್ನು ಮಾಡುತ್ತೇನೆ. ಆದರೆ, ನಗರದಲ್ಲಿ 65 ಮಂದಿ ಪಾಲಿಕೆ ಸದಸ್ಯರಿದ್ದಾರೆ ಅವರು ಏನು ಮಾಡುತ್ತಿದ್ದಾರೆ…? ಏರ್ಟೆಲ್ನವರಿಗೆ ಕೇಬಲ್ ಹಾಕಲು ರಸ್ತೆ ಅಗೆಯಲು ಕೊಡುತ್ತಾರೆ. ಅದೇ ಗ್ಯಾಸ್ ಪೈಪ್ಲೈನ್ಗೆ ವಿರೋಧಿಸುತ್ತಾರೆ. ಈ ಮನಸ್ಥಿತಿಯವರನ್ನು ಜನ ಅರ್ಥ ಮಾಡಿಕೊಳ್ಳಬೇಕು. ಜನಕ್ಕೆ ನಾನು ಈಗ ಒಂದು ಕರೆ ಕೊಡುತ್ತೇನೆ. ಪ್ರತಿಯೊಂದಕ್ಕೂ ನಾನು ಬರಲು ಆಗಲ್ಲ. ಪ್ರತಿನಿತ್ಯದ ಸಮಸ್ಯೆಗೆ ನಿಮ್ಮ ನಿಮ್ಮ ನಗರಪಾಲಿಕೆ ಸದಸ್ಯರ ಮನೆ ಮುಂದೆ ಹೋಗಿ ಧರಣಿ ಕೂರುವುದನ್ನು ಕಲಿತುಕೊಳ್ಳಿ. ಆಗ ತಾನಾಗಿಯೇ ಎಲ್ಲಾ ಕೆಲಸಗಳು ಸರಿಯಾಗುತ್ತದೆ. ಈ ಮೂಲಕ ಗ್ಯಾಸ್ಪೈಪ್ ಲೈನ್ ಯೋಜನೆ ಅನುಮೋದನೆ ನೀಡಲು ವಿಳಂಭಿಸಿದ್ದ ಕಾರ್ಪೋರೇಟರ್ಗಳಿಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.