ಬೆಳಗಾವಿ: ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗುವುದರಲ್ಲಿ ಸಂಶಯವೇ ಇಲ್ಲ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು, ಇದು ಪಕ್ಷದ ನಿಲುವಲ್ಲ ನನ್ನ ವೈಯಕ್ತಿಕ ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2024ರ ಚುನಾವಣೆ ಆದ ಮೇಲೆ ಪ್ರಧಾನಿ ಮೋದಿಯವರೇ ರಾಜ್ಯಗಳ ನಿರ್ಮಾಣ ಮಾಡುತ್ತಾರೆ. ಮಹಾರಾಷ್ಟ್ರದಲ್ಲಿ ಮೂರು ರಾಜ್ಯ, ಕರ್ನಾಟಕದಲ್ಲಿ ಎರಡು, ಉತ್ತರ ಪ್ರದೇಶದಲ್ಲಿ ನಾಲ್ಕು ರಾಜ್ಯ ಮಾಡುತ್ತಾರೆ. ಒಟ್ಟು 50 ರಾಜ್ಯಗಳನ್ನು ಮಾಡಬೇಕು ಅಂತ ಚರ್ಚೆ ನಡೆದಿದೆ. ಮುಂದಿನ ದಿನಗಳಲ್ಲಿ ನಾವು ನೀವು ಸೇರಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡೋಣ ಎಂದಿದ್ದಾರೆ.
ಇನ್ನು ಬೆಂಗಳೂರ ಕಥೆ ಮಗಿದಿದೆ, ನನ್ನ ಮನೆಯಿಂದ ವಿಧಾನಸೌಧಕ್ಕೆ ಹೋಗಬೇಕಾದರೆ 10 ಕಿಮೀ ಇದೆ. ಒಂದೂವರೆ ಗಂಟೆ ಬೇಕಾಗುತ್ತದೆ, ನಡೆದುಕೊಂಡು ಹೋದರೆ ಬೇಗ ಮುಟ್ಟಬಹುದು. ಇದು ಬೆಂಗಳೂರಿನ ಪರಿಸ್ಥಿತಿ. ಇಂಡಸ್ಟ್ರೀ, ಐಟಿ, ಬಿಟಿ ಹೆಚ್ಚಾಗಿ ಮತ್ತೊಂದು ಕಡೆ ಕುಡಿಯಲು ನೀರಿನ ಸಮಸ್ಯೆಯಿದೆ ಎಂದು ಬೆಂಗಳೂರಿನ ಸ್ಥಿತಿಗತಿಯ ಬಗ್ಗೆ ವಿವರಿಸಿದ್ದಾರೆ.