Tuesday, May 17, 2022

ಶೀಘ್ರದಲ್ಲೇ ಮೈಸೂರು ಭಾಗದ ಐದಾರು ಘಟಾನುಘಟಿ ನಾಯಕರು ಬಿಜೆಪಿ ಸೇರ್ಪಡೆಯಾಗುವುದು ನಿಶ್ಚಿತ: ಎಸ್.ಟಿ.ಸೋಮಶೇಖರ್

Must read

ಮೈಸೂರು: ಹಳೇ ಮೈಸೂರು ಭಾಗದ ಎರಡನೇ ಹಂತದ ಆಪರೇಷನ್ ಕಮಲ ಫಿಕ್ಸ್. ಶೀಘ್ರದಲ್ಲೇ ಮೈಸೂರು ಭಾಗದ ಐದಾರು ಘಟಾನುಘಟಿ ನಾಯಕರು ಬಿಜೆಪಿ ಸೇರ್ಪಡೆಯಾಗುವುದು ನಿಶ್ಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕರುಗಳ ಜೊತೆಗೆ ಕೊನೆಯ ಹಂತದ ಮಾತುಕತೆಗಳು ನಡೆಯುತ್ತಿವೆ. ಬಿಜೆಪಿ ರಾಜ್ಯಾಧ್ಯಕ್ಷರ ಗ್ರೀನ್ ಸಿಗ್ನಲ್ ಬಾಕಿ‌ ಇದೆ. ಯಾವ ಕಂಡೀಷನ್​ಗಳಿಲ್ಲದೇ ಅನ್ಯಪಕ್ಷದ ನಾಯಕರು ಬಿಜೆಪಿ ಸೇರ್ಪಡೆಗೆ ಒಪ್ಪಿದ್ದಾರೆ. ಇದರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷದವರು ಇದ್ದಾರೆ. ಯಾರು ಆ ನಾಯಕರು ಎಂಬುದು ಈ ಹಂತದಲ್ಲಿ ಹೇಳಲು ಸಾಧ್ಯವಿಲ್ಲ. ಕೊನೆಯ ಹಂತದ ಮಾತುಕತೆ ಮುಗಿಯಲಿ. ನಾವೇ ಎಲ್ಲವನ್ನೂ ಸ್ಪಷ್ಟ ಪಡಿಸುತ್ತೇವೆ ಎಂದರು.

ಕಾಂಗ್ರೆಸ್ ಆಂತರಿಕ ಕಿತ್ತಾಟ ವಿಚಾರವಾಗಿ ಮಾತನಾಡಿ, ಎಐಸಿಸಿ ವೀಕ್ ಆಗಿರುವ ಪರಿಣಾಮ ಎಲ್ಲರೂ ನಾಯಕರಾಗಿದ್ದಾರೆ. ಇದು ಆರಂಭ ಅಷ್ಟೇ, ಮುಂದೆ ಮತ್ತಷ್ಟು ಹೆಚ್ಚುತ್ತೆ. ಇದು ವಿಕೋಪಕ್ಕೆ ತಿರುಗಿ ಪಕ್ಷವೇ ಮುಗಿಯುವ ಹಂತಕ್ಕೆ ಹೋಗುತ್ತೆ. ಕಾಂಗ್ರೆಸ್​ನಲ್ಲಿ ಈಗ ನಾಲ್ಕು ಗುಂಪಾಗಿದೆ. ಯಾರೂ ಕೂಡ ಆಂತರಿಕವಾಗಿ ಚೆನ್ನಾಗಿಲ್ಲ.ಮೇಲ್ನೋಟಕ್ಕೆ ಒಟ್ಟಿಗೆ ಕಾಣಿಸಿಕೊಂಡ್ರು ಒಳಗೆ ಅಸಮಾಧಾನ ಇದೆ. ನಟಿ ರಮ್ಯಾ ವಿಚಾರದಲ್ಲೂ ಅದು ಬಹಿರಂಗವಾಗಿದೆ.

ಸಿಎಂ ಬೊಮ್ಮಾಯಿ ವೀಕ್, ಇದು ಭ್ರಷ್ಟ ಸರ್ಕಾರ ಎಂಬ ಸಿದ್ದು ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ಮುಖ್ಯಮಂತ್ರಿಗಳು ವೀಕ್ ಅಲ್ಲ. ಅವರ‌ ಮೇಲೆ ಯಾವುದೇ ಕಪ್ಪುಚುಕ್ಕೆ ಇಲ್ಲ. ಉತ್ತಮ ನಿರ್ಣಯಗಳನ್ನು ತೆಗೆದುಕೊಂಡು ಒಳ್ಳೆಯ ಆಡಳಿತ ಮಾಡ್ತಿದ್ದಾರೆ. ಸಿದ್ದರಾಮಯ್ಯ ತಮ್ಮ ಅಸ್ತಿತ್ವಕ್ಕೆಕ್ಕಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ವರಿಷ್ಠರ ಒಲೈಕೆ ಮಾಡಲು ಹೀಗೆ ಹೇಳಿಕೆ ನೀಡ್ತಾರೆ. ಒಂದು ದಿನವೂ ವಿರೋಧ ಪಕ್ಷದ ನಾಯಕನ ಕೆಲಸ ಮಾಡಿಲ್ಲ ಎಂದು ತಿರುಗೇಟು ನೀಡಿದರು.

Latest article