ತುಮಕೂರು: ರಾಜ್ಯದಲ್ಲಿ ಇದುವರೆಗೆ 15 ಸಾವಿರ ಮನೆಗಳಿಗೆ ಹಾನಿಯಾಗಿದೆ. ಮನೆ ಹಾಗೂ ಪ್ರಾಣ ಹಾನಿಯಾದ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ಕೊಡಲಾಗ್ತಿದೆ. ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಒಟ್ಟು 800 ಕೋಟಿ ಹಣವಿದೆ. ಇದಲ್ಲದೇ ಹೆಚ್ಚುವರಿಯಾಗಿ ನಾಳೆ ಮತ್ತೆ 500 ಕೋಟಿ ಹಣವನ್ನ ಜಿಲ್ಲಾಧಿಕಾರಿಗಳ ಖಾತೆಗೆ ಬಿಡುಗಡೆ ಮಾಡಲಾಗುತ್ತೆ ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಸುದ್ದಿಗಾರರೊಂಧಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರ ಬಡವರ, ದಿನದಲಿತರ ಪರವಾಗಿ ಕೆಲಸ ಮಾಡ್ತಿದೆ. ಈಗಾಗಲೇ ಬೆಳೆ ಪರಿಹಾರಕ್ಕೆ ಎರಡು ಪಟ್ಟು ಹಣವನ್ನ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. ಈ ಹಿಂದೆಯು ಸಹ ಯಡಿಯೂರಪ್ಪ ಸಿಎಂ ಆಗಿದ್ದಾಗ ಎರಡು ಪಟ್ಟು ಹಣವನ್ನ ಘೋಷಣೆ ಮಾಡಿದ್ರು. ನಮ್ಮ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಮಳೆ ಹೆಚ್ಚಾಗಿದೆ. ಅಂತರ್ಜಲ ಮಟ್ಟ ವೃದ್ದಿಯಾಗಿದೆ.
ಸ್ವಲ್ಪ ತೊಂದರೆಯು ಆಗಿದೆ. ಬಡವರಿಗೆ ತೊಂದರೆಯಾಗದಂತೆ ನಮ್ಮ ಸರ್ಕಾರ ಪರಿಹಾರವನ್ನ ಕೊಡ್ತಿದೆ. ಪರಿಪೂರ್ಣ ಮನೆ ಕಳೆದುಕೊಂಡವರಿಗೆ 5 ಲಕ್ಷ ಹಣ ಕೊಡಲಾಗ್ತಿದೆ.ಜಿಲ್ಲೆಯಲ್ಲಿ ಎಲ್ಲೇ ಅನಾಹುತ ಆದ್ರು ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಲು ಸೂಚಿಸಿದ್ದೇನೆ. ಯಾರು ಸಹ ರಜೆ ತೆಗೆದುಕೊಳ್ಳಬಾರದು. ಬಡವರ ಪರವಾಗಿ ಕಷ್ಟದಲ್ಲಿರುವ ಜನರೊಂದಿಗೆ ಸಂಕಷ್ಟದ ಸಮಯದಲ್ಲಿ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು.
ಹುಟ್ಟುಹಬ್ಬ ಆಚರಣೆಯಲ್ಲಿ ವಿಪಕ್ಷ ನಾಯಕರು ಇದ್ದಾರೆ. ವಿರೋಧ ಪಕ್ಷಗಳು ನಮ್ಮ ಬಗ್ಗೆ ಎಷ್ಟೇ ಟೀಕೆ-ಟಿಪ್ಪಣಿಗಳನ್ನ ಮಾಡಲಿ. ಅದನ್ನ ನಾವು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅವರೆಲ್ಲ ಹುಟ್ಟುಹಬ್ಬದ ಆಚರಣೆಯಲ್ಲಿದ್ದಾರೆ. ನಾವು ಅನಾಹುತ ಆದ ಕಡೆಗಳಲ್ಲಿ ಸುತ್ತುತ್ತಿದ್ದೇವೆ ಎಂದು ಸಿದ್ದರಾಮೋತ್ಸವ ಕಾರ್ಯಕ್ರಮದ ಬಗ್ಗೆ ಪರೋಕ್ಷವಾಗಿ ಟೀಕೆ ಮಾಡಿದರು.