Wednesday, June 29, 2022

ಸುಖವಾದದಲ್ಲಿ ತೇಲಿ ತೆವಳುವ ಬಿಜೆಪಿಯ ಸುಖ ಸಿದ್ಧಾಂತಕ್ಕೆ ರಣರೋಚಕ ಇತಿಹಾಸವಿದೆ-ಕುಮಾರಸ್ವಾಮಿ

Must read

ಬೆಂಗಳೂರು: ಒಂದು ರಾತ್ರಿ ಸುರಿದ ಕುಂಭದ್ರೋಣ ಮಳೆಗೆ ಬೆಂಗಳೂರು ತತ್ತರಿಸಿದೆ. ಬಿಜೆಪಿ ಎಂಬ ಬುರುಡೆ ಪಾರ್ಟಿ ಮಳೆ ಬಗ್ಗೆ, ಜನರ ಕಷ್ಟದ ಬಗ್ಗೆ ಕೇಳುವುದು ಬಿಟ್ಟು, ಜೆಡಿಎಸ್ ಮತ್ತು ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುತ್ತಿದೆ ಎಂದು ಬಿಜೆಪಿ ವಿರುದ್ಧ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ಸ್ಮಾರ್ಟ್ ಸಿಟಿ ಮಾಡುತ್ತೇವೆ ಎಂದು ಹೊರಟವರು ಕೆಂಪೇಗೌಡರು ಕಟ್ಟಿದ ಭವ್ಯ ಬೆಂಗಳೂರು ನಗರವನ್ನು ಸ್ವಿಮ್ಮಿಂಗ್ ಪೂಲ್ ಮಾಡುತ್ತಿದ್ದಾರೆ. ರಸ್ತೆಗಳು ರಾಜ ಕಾಲುವೆಗಳಾಗಿ, ಮನೆಗಳು ಕೆರೆಗಳಾಗಿವೆ. ಈ ತಿಂಗಳ 13ನೇ ತಾರೀಖು ಮುಗಿದ ಜಲಧಾರೆ ಸಮಾರೋಪ ಸಮಾವೇಶದ ಬಗ್ಗೆ ಆರು ದಿನ ಅಧ್ಯಯನ ಮಾಡಿ ಟ್ವೀಟ್ ಮಾಡಿದೆ ಬಿಜೆಪಿ. ಇನ್ನು ಆರಂಭವಾಗದ ಪಂಚರತ್ನ ಯಾತ್ರೆ ಬಗ್ಗೆ ಆಗಲೇ ಏರಿದೆ ಬೀಪಿ. ಮಿಷನ್ 123 ನಮ್ಮ ಗುರಿ. ನಿಮಗೆ ಯಾಕೆ ಉರಿ? ಜೆಡಿಎಸ್​ನಲ್ಲಿ 1+2+3 ಸಂಖ್ಯಾಬಲ ಇದೆ, ಸರಿ. ಆದರೆ, ಭಾರೀ ಕುಳಗಳ ಬಿಜೆಪಿಯಲ್ಲಿ 1+2 / 1+2+3 ಲೆಕ್ಕವೇ ಇಲ್ಲ. ಬೆಂಗಳೂರು, ಬೆಳಗಾವಿ, ಶಿವಮೊಗ್ಗ, ತುಮಕೂರು ಸೇರಿದಂತೆ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಅದರ ಗರ್ಭಗುಡಿಯಲ್ಲಿ 1+2 / 1+2+3ಗಳ ಕುಟುಂಬ ಶಿಶುಗಳೇ ತುಂಬಿವೆ ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು ಯಡಿಯೂರಪ್ಪ, ಶೆಟ್ಟರ್, ನಿರಾಣಿ, ಜಾರಕಿಹೊಳಿ, ಜೊಲ್ಲೆ, ಒಂದಾ.. ಎರಡಾ? ಪಟ್ಟಿ ಮಾಡುತ್ತಾ ಹೋದರೆ ಅದೇ ಹನುಮನ ಬಾಲ. ಈಗ ಬಿಜೆಪಿಗರು ಹೇಳಬೇಕು, 1+2 / 1+2+3 ಇರುವುದು ಎಲ್ಲಿ..? ಈ ವಿಷಯದಲ್ಲಿ ಬಿಜೆಪಿಯದ್ದು ರಾಷ್ಟೀಯ ದಾಖಲೆ. ಕುಟುಂಬವಾದ, ಹೋದ ಕಡೆಯೆಲ್ಲ ಸುಖವಾದದಲ್ಲಿ ತೇಲಿ ತೆವಳುವ ಬಿಜೆಪಿಯ ಸುಖ ಸಿದ್ಧಾಂತಕ್ಕೆ ರಣರೋಚಕ ಇತಿಹಾಸವೇ ಇದೆ. ಬ್ರಿಟಿಷರ ಬಚ್ಚಲು ಬಾಚಿದ ಅವರಿಗೆ ತಮ್ಮ ಕಪಟ ನೀತಿಗೆ ವಿರುದ್ಧವಾಗಿದ್ದ ರಾಷ್ಟ್ರೀಯವಾದ ಎಂಬ ಏಣಿ ಹತ್ತಿ ತಾನು ರಕ್ಕಸರೂಪ ತಾಳಿದ್ದು ಮರೆತಿದೆಯಾ..? ಜೆಡಿಎಸ್​ನಲ್ಲಿ ಪಂಚರತ್ನಗಳಿವೆ, ನಿಜ. ಬಿಜೆಪಿಯಲ್ಲಿ ಸೀಡಿರತ್ನಗಳು, 40% ಕಮಿಷನ್ ರತ್ನಗಳು, ಜನರ ಹಣದ ಲೂಟಿ ರತ್ನಗಳು, ಕಾಸಿಗಾಗಿ ಕೆಲಸ ಮಾರಿಕೊಳ್ಳುವ ರತ್ನಗಳು, ಪಿಎಸ್ ಐ ಕಿಂಗ್ ಪಿನ್ ರತ್ನಗಳು, ಮಾಧ್ಯಮಗಳ ವಿರುದ್ಧ ಕೋರ್ಟ್ ಸ್ಟೇ ತಂದ ರತ್ನಗಳು, ಸದನದಲ್ಲೇ ನೀಲಿಚಿತ್ರ ನೋಡಿದ ರತ್ನಗಳು ಕೂಡ ಇವೆ. ಅಲ್ಲವೇ ಎಂದು ಲೇವಡಿ ಮಾಡಿದ್ದಾರೆ.

Latest article