Friday, January 21, 2022

ಈ ರಾಜ್ಯ ಲೂಟಿಕೋರರ ಕೈಗೆ ಸೇರಿದೆ, ಇವನು ಶಿಕ್ಷಣ ಸಚಿವನಾ ನಾಚಿಕೆಯಾಗಬೇಕು: ಹೆಚ್.ಡಿ.ರೇವಣ್ಣ ವಾಗ್ದಾಳಿ

Must read

ಹಾಸನ: ಹೊಳೆನರಸೀಪುರದಲ್ಲಿಎಂ.ಎಸ್ಸಿ. ಫುಡ್ ಅಂಡ್ ನ್ಯೂಟ್ರಿಷಿಯನ್ ಕೋರ್ಸ್ ತೆರೆಯಲು ವಿಶ್ವವಿದ್ಯಾಲಯ ಅನುಮತಿ ಕೊಟ್ಟರೂ ಒಪ್ಪಿಗೆ ಕೊಡದ‌ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಶಿಕ್ಷಣ ಇಲಾಖೆಯಲ್ಲಿ ರಾಜಕೀಯ ಮಾಡುತ್ತಿದೆ. ಮಂಗಳವಾರದಿಂದ ಸಿಎಂ ಮನೆ ಮುಂದೆ ಧರಣಿ ಕೂರುತ್ತೇನೆ. ನನ್ನ ಜನರಿಗೆ ಅನ್ಯಾಯವಾದರೆ ಸುಮ್ಮನೆ ಕೂರಲ್ಲ. ಕರೆದರೆ ನಮ್ಮ ಶಾಸಕರು ಬರುತ್ತಾರೆ, ಆದರೆ ಕೊರೊನಾ ಇದೆ. ಒಬ್ಬನೇ ಮಂಗಳವಾರ 11 ಗಂಟೆಗೆ ಸಿಎಂ ಮನೆ ಎದುರು ಧರಣಿ ನಡೆಸುತ್ತೇನೆ. ನನ್ನ ಪ್ರಾಣ ಹೋಗುತ್ತೋ, ಹೋಗಲಿ. ನನ್ನನ್ನು ಪೊಲೀಸರು ಬಂಧಿಸುತ್ತಾರೋ ಬಂಧಿಸಲಿ.

ಈ ಸರ್ಕಾರದವರು ಖಾಸಗಿಯವರ ಗುಲಾಮರಾಗಿದ್ದಾರೆ. ಸರ್ಕಾರಕ್ಕೆ ನಾಚಿಕೆಯಾಗಬೇಕು, ಬಡವರ ಮಕ್ಕಳ‌ ವಿದ್ಯಾಭ್ಯಾಸದ‌ ಮೇಲೆ ಕಲ್ಲು ಹಾಕುತ್ತಿದೆ. ಇಂತಹ ಕೀಳುಮಟ್ಟದ ರಾಜಕೀಯ ಮಾಡಬಾರದು. ಇವರ ಹಗರಣಗಳನ್ನು ಎಳೆಎಳೆಯಾಗಿ ಬಿಚ್ಚಿಡುವ ಕಾಲ‌ ಬರುತ್ತೆ. ಈ‌ ಜಿಲ್ಲೆಗೆ ಅನ್ಯಾಯವಾದಾಗ ದೇವೇಗೌಡರು ಎದ್ದೇಳಬೇಕು. ನಾವೇನು ಇವರ ಗುಲಾಮರಾಗಿ ಕೆಲಸ ಮಾಡುತ್ತಿದ್ದೀವಾ. ಈ ರಾಜ್ಯ ಲೂಟಿಕೋರರ ಕೈಗೆ ಸೇರಿದೆ. ಇವನು ಶಿಕ್ಷಣ ಸಚಿವನಾ ನಾಚಿಕೆಯಾಗಬೇಕು ಇವನಿಗೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

2023ಕ್ಕೆ ಇವರ ಕಥೆ ಏನಾಗುತ್ತೆ ಅಂಥ ಹೇಳ್ತಿನಿ. ಈ ರಾಜ್ಯದಲ್ಲಿ ಶಿಕ್ಷಣ ಇಲಾಖೆ ಖಾಸಗಿಯವರ ಹಿಡಿತದಲ್ಲಿದೆ. ಮಾನ, ಮರ್ಯಾದೆ ಇದೆಯಾ ಇವರಿಗೆ. ಜನ ದೇವೇಗೌಡರನ್ನು ಶಾಸಕ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಮಾಡಿದ್ದಾರೆ. ಇಂತಹ ಸಂದರ್ಭ ಬಂದಾಗ ದೇವೇಗೌಡರು ಸಿಡಿದೇಳಬೇಕು. ಜೆಡಿಎಸ್ ಮುಗಿದೆ ಹೋಯಿತು ಎಂದು ಎರಡು ಪಕ್ಷದವರು ತಿಳಿದುಕೊಂಡಿದ್ದಾರೆ. ಇಬ್ಬರ ಮೇಲೂ ಹೋರಾಟ ಮಾಡುತ್ತೇವೆ.

ಇದನ್ನು ಸರ್ಕಾರ ಎನ್ನುತ್ತಾರಾ, ಇಂತಹ ಕೀಳುಮಟ್ಟದ ಮಂತ್ರಿಗಳನ್ನು ಇಟ್ಟುಕೊಂಡಿದ್ದಾರಾ. ಯಡಿಯೂರಪ್ಪ ಅವರ ಚರಿತ್ರೆ ಬಿಚ್ಚಿಡುತ್ತೇನೆ. ಅಲ್ಪಸಂಖ್ಯಾತರು, ಕ್ರಿಶ್ಚಿಯನ್ ಸಮುದಾಯದವರನ್ನು ಮಟ್ಟ ಹಾಕಬೇಕು. ಹಿಂದೂಗಳನ್ನು ಒಗ್ಗೂಡಿಸಿ ರಾಜ್ಯ ಆಳಲು ಮುಂದಾಗಿದ್ದಾರೆ. ಬೆಳಗ್ಗೆ ಎದ್ದರೆ ಇದೇ ಇವರ ಅಜೆಂಡಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Also read:  ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಕೊಲೆ ಯತ್ನ ಪ್ರಕರಣ: 12 ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ

 

Latest article