Tuesday, November 29, 2022

ಮಣ್ಣಿನ ಮಕ್ಕಳ ಹೋರಾಟಕ್ಕೆ ಮಂಡಿಯೂರಿದ ಮೋದಿ:ಮರಣ ಶಾಸನವಾಗಿದ್ದ ರೈತ ವಿರೋಧಿ ಕಾಯ್ದೆಗಳು ವಾಪಸ್

Must read

ರಾಜ್ಯಗಳುದಿಸಲಿ.. ರಾಜ್ಯಗಳಳಿಯಲಿ.. ಹಾರಲಿ ಗದ್ದುಗೆ ಮುಕುಟುಗಳು.. ಮುತ್ತಿಗೆ ಹಾಕಲಿ ಸೈನಿಕರೆಲ್ಲಾ.. ಮುತ್ತಿಗೆ ಹಾಕಲಿ ಸೈನಿಕರೆಲ್ಲಾ.. ಬಿತ್ತುಳುವುದನವ ಬಿಡುವುದೇ ಇಲ್ಲ.

ರಾಷ್ಟ್ರಕವಿ ಕುವೆಂಪು ಅವರು ಬರೆದಂತಾ ರೈತಗೀತೆಯ ಅದ್ಭುತವಾದ ಹಾಗೂ ಅತ್ಯಂತ ಶಕ್ತಿಶಾಲಿ ಸಾಲುಗಳಿವು.. ರಾಜ್ಯಗಳು ಬಿದ್ದರೂ, ಸರ್ಕಾರಗಳು ಉರುಳಿದರೂ, ಸೈನಿಕರು ಬಂದು ನಿಂತರೂ, ಅನ್ನದಾತ ಯಾವತ್ತೂ ಕಿವಿಗೊಡೋದಿಲ್ಲ.. ಉತ್ತುವುದು, ಬಿತ್ತುವುದು, ಬೆಳೆಯನ್ನ ತೆಗೆಯುವುದು.. ಇದಿಷ್ಟೇ ಅವನ ಕಾರ್ಯ.. ಯಾಕಂದ್ರೆ, ಈ ದೇಶದಲ್ಲಿ ರೈತ ಅಜಾತಶತ್ರು. ಯಾವ ಸರ್ಕಾರ ಬಂದ್ರೂ ಆತ ತಲೆ ಕೆಡಿಸಿಕೊಳ್ಳೋದಿಲ್ಲ.. ಆದ್ರೆ, ಈ ರೈತ ಎನ್ನುವ ಜೇನುಗೂಡಿಗೆ ಯಾರೇ ಕಲ್ಲೆಸದರೂ ಅವರು ಉಳಿಯೋಕೆ ಚಾನ್ಸೇ ಇಲ್ಲ.. ರೈತರ ತಂಟೆಗೆ ಹೋಗಿ ಉಳಿದ ಸರ್ಕಾರದ ಉದಾಹರಣೆ ಈ ದೇಶದಲ್ಲಿ ಹಿಂದೆಂದೂ ಇಲ್ಲ.. ಮುಂದೆಯೂ ಇರೋದಿಲ್ಲ.. ಅದಕ್ಕೆ ಸಾಕ್ಷಿಯಾಗಿದೆ ಇವತ್ತಿನ ದಿನ.

ನಿಮಗೆಲ್ಲಾ ಗೊತ್ತಿರೋ ಹಾಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನ ಜಾರಿಗೆ ತಂದಿತ್ತು. ಆ ಮೂರೂ ಕಾಯ್ದೆಗಳನ್ನ ದೇಶಾದ್ಯಂತ ರೈತ ಸಮೂಹ ವಿರೋಧಿಸುತ್ತೆ. ರೈತರ ಜೊತೆಯಲ್ಲಿ ಚರ್ಚೆಯಾಗದೇ ಜಾರಿಗೆ ಬಂದ ಈ ಕಾಯ್ದೆಗಳನ್ನ, ಅನ್ನದಾತನ ಪಾಲಿನ ಮರಣಶಾಸನಗಳು ಎಂದೇ ಹೇಳಲಾಯ್ತು. ಈ ರೈತವಿರೋಧಿ ಕಾಯ್ದೆಗಳನ್ನ ವಾಪಸ್​ ಪಡೆಯುವಂತೆ ರೈತ ಮುಖಂಡರು ಆಗ್ರಹಿಸುತ್ತಾರೆ. ಆದ್ರೆ, ಸರ್ಕಾರ್​ ಕೇರ್​ ಮಾಡೋದಿಲ್ಲ. ಆಗಲೇ ನೋಡಿ ದೇಶದ ಮೂಲೆ ಮೂಲೆಯಲ್ಲೂ ರೈತಕ್ರಾಂತಿ ಆರಂಭವಾಗಿದ್ದು. ಒಂದಾ ಎರಡಾ, 30 ರಾಜ್ಯಗಳು ಹೊತ್ತಿ ಉರಿದವು. ಹಳ್ಳಿಯಿಂದ ದಿಲ್ಲಿವರೆಗೆ ರೈತ ಕಹಳೆ ಮೊಳಗಿತು. ಲಾರಿ, ಟ್ರ್ಯಾಕ್ಟರ್​, ರೈಲು, ಬಸ್ಸುಗಳಲ್ಲಿ ಹಸಿರು ಶಾಲು ಹೊತ್ತ ರೈತರು ಬಂದು ಕುಳಿತರು. ಅದೊಂದು ರೈತ ಸುನಾಮಿ.

ಆಳುವ ವರ್ಗದ ಮೈಬಿಸಿಯಾಗೋಕೆ ಅಷ್ಟು ಸಾಕಾಗಿತ್ತು. ಆದ್ರೆ, ದಪ್ಪ ಚರ್ಮದ ಜನ ರೈತರ ವಿರೋಧವನ್ನ ಲೆಕ್ಕಿಸೋದಿಲ್ಲ. ಪೊಲೀಸ್​ ಶಕ್ತಿ ಪ್ರದರ್ಶನವಾಗುತ್ತೆ.. ಗಡಿ ಕಾಯಬೇಕಾದ ಸಿಆರ್​ಪಿಎಫ್​ ಬಂದು ನಿಲ್ಲುತ್ತೆ.. ಲಾಠಿ ಚಾರ್ಜ್​ ನಡೆಯುತ್ತೆ. ಅಶ್ರುವಾಯು ಸಿಡಿಯುತ್ತೆ.. ಜೆಸಿಬಿಗಳು ಬಂದು ರಸ್ತೆಗಳೇನ್ನೇ ಅಗೆಯುತ್ತವೆ.. ಎಲ್ಲೆಂದರಲ್ಲಿ ರೈತರ ಬಂಧನವಾಗುತ್ತೆ.. ಏನೆಲ್ಲಾ ಶಕ್ತಿಯನ್ನ ಪ್ರದರ್ಶನ ಮಾಡಬೇಕೋ ಆ ಎಲ್ಲಾ ಶಕ್ತಿಯನ್ನೂ ಪ್ರದರ್ಶನ ಮಾಡಲಾಗುತ್ತೆ.. ರೈತರ ಶಕ್ತಿಯನ್ನ ಅಡಗಿಸಲು ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಮಾಡಲಾಗುತ್ತೆ.

ಹೋರಾಟಕ್ಕೆ ನಿಂತ ರೈತರನ್ನ ಖಲಿಸ್ತಾನ್​ ಉಗ್ರರಿಗೆ ಹೋಲಿಕೆ ಮಾಡಲಾಗುತ್ತೆ.. ವಿದೇಶಿ ಫಂಡ್​ ಪಡೆದು ಹೋರಾಟ ಮಾಡುತ್ತಿದ್ದಾರೆ ಎನ್ನುವ ಹಣೆಪಟ್ಟಿ ಕಟ್ಟಲಾಗುತ್ತೆ.. ಎರಡು ದಿನದ ಪ್ರೊಟೆಸ್ಟ್​ ಎಂದು ಅಣಕಿಸಲಾಗುತ್ತೆ.. ವಿರೋಧ ಪಕ್ಷಗಳ ಕುಮ್ಮಕ್ಕು ಎಂದು ಜರಿಯಲಾಗುತ್ತೆ.. ಕೊನೆಗೆ ದೇಶಕ್ಕೆ ಅನ್ನ ನೀಡುವ ಅನ್ನದಾತನಿಗೆ ದೇಶದ್ರೋಹಿ ಎನ್ನುವ ಪಟ್ಟವನ್ನೂ ಕಟ್ಟಲಾಗುತ್ತೆ. ಇದಕ್ಕಿಂತ ಮತ್ತೊಂದು ದುರಂತ ಈ ಶತಮಾನ ಕಂಡಿಲ್ಲ. ಯಾಕಂದ್ರೆ, ಯಾರು ನಮ್ಮ ರೈತನಿಗೆ ದೇಶದ್ರೋಹಿ ಎನ್ನುವ ಪಟ್ಟ ಕಟ್ಟಿದ್ರೋ, ಅವರು ಕೂಡ ಇದೇ ರೈತ ಬೆಳೆದ ಅನ್ನ ತಿನ್ನುತ್ತಿದ್ದಾರೆ. ಇಷ್ಟೆಲ್ಲಾ ಮಾಡಿದ್ರೂ ರೈತನ ಶಕ್ತಿಯನ್ನ ಕುಂದಿಸಲಾಗಲಿಲ್ಲ.. ಕೊನೆಗೆ ಉಳಿದದ್ದು ಒಂದೇ ಮಾರ್ಗ.. ಇಡೀ ರೈತಕುಲವನ್ನೇ ಇಬ್ಭಾಗ ಮಾಡುವುದು.. ರೈತರಲ್ಲೇ ವಿಷಬೀಜ ಬಿತ್ತುವುದು.. ಆ ಪ್ರಯತ್ನವೂ ನಡೆದು ಹೋಯ್ತು.

ದೆಹಲಿ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದವರನ್ನ ಡಿವೈಡ್​ ಮಾಡಲಾಗುತ್ತೆ.. ಆ ಷಡ್ಯಂತ್ರಕ್ಕೆ ಬಲಿಯದಾದ ರೈತ ಬಾಂಧವರು ತಮ್ಮ ಊರುಗಳತ್ತ ಮರಳುತ್ತಾರೆ.. ನೂರಾರು ಟ್ರ್ಯಾಕ್ಟರ್​ಗಳು ವಾಪಸ್​ ಹೊರಡುತ್ತವೆ.. ಆಗ ಇಡೀ ರೈತಕ್ರಾಂತಿಯ ನೇತೃತ್ವ ವಹಿಸಿದ್ದ ರೈತ ಮುಖಂಡ ರಾಕೇಶ್​ ಟಿಕಾಯತ್​ ಅವರು ಅತ್ಯಂತ ನೋವಿನಿಂದ ಒಂದು ಮಾತನ್ನ ಹೇಳುತ್ತಾರೆ.. ಅಕಸ್ಮಾತ್​.. ಅಕಸ್ಮಾತ್​ ಈ ದೇಶದಲ್ಲಿ ರೈತವಿರೋಧಿ ಕಾನೂನುಗಳು ಜಾರಿಗೆ ಬಂದಿದ್ದೇ ಆದ್ರೆ, ನಾನು ಆ ಕ್ಷಣವೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅತ್ಯಂತ ನೋವಿನಿಂದ ಕಣ್ಣೀರು ಹಾಕುತ್ತಾರೆ.. ಆ ಒಂದು ಮಾತು, ಆ ಒಂದೇ ಒಂದು ಮಾತು ಸಾಕಾಗಿತ್ತು.. ಇಡೀ ದೇಶಾದ್ಯಂತ ಕಿಡಿ ಹೊತ್ತಿಕೊಳ್ಳಲು.

ಊರಿಗೆ ಮರಳಿದ್ದ ಟ್ರ್ಯಾಕ್ಟರ್​ಗಳೆಲ್ಲಾ ಪುನಃ ಬಂದವು.. ಒಬ್ಬರು ಇಬ್ಬರಾದರು.. ಲಕ್ಷ ಕೋಟಿಯಾಯ್ತು.. ಸದ್ದಿಲ್ಲದೇ ರೈತಪರ ನಿಲುವೊಂದು ದೇಶಾದ್ಯಂತ ಹರಡುತ್ತಾ ಹೋಯ್ತು.. ಮಣ್ಣಿನ ಮಕ್ಕಳು ಕೆಂಪುಕೋಟೆಗೂ ಮುತ್ತಿಗೆ ಹಾಕಿದರು. ಲಾಠೀ ಏಟಿಗೂ ಬೆದರದೇ ನಿಲ್ಲುತ್ತಾರೆ.

ಕೆಂಪುಕೋಟೆಯ ಮೇಲೆ ರೈತ ಭಾವುಟ ಹಾರಿದ ದಿನ ಇಡೀ ವೀಶ್ವವೇ ಒಮ್ಮೆ ಭಾರತದತ್ತ ತಿರುಗಿ ನೋಡುತ್ತೆ.. ಭಾರತದಲ್ಲಿ ಏನಾಗ್ತಿದೆ ಎನ್ನುವ ಪ್ರಶ್ನೆಗಳು ಏಳುತ್ತವೆ.. ದಿಗಿಲಿಗೆ ಬಿದ್ದ ಸರ್ಕಾರ, ಕೆಂಪುಕೋಟೆಗೆ ಮುತ್ತಿಗೆ ಹಾಕಿದವರ ಮೇಲೆ ಕೇಸ್​ಗಳನ್ನ ಜಡಿಯುತ್ತೆ.. ಆದ್ರೆ, ಮಳೆ, ಗಾಳಿ, ಬಿಸಲಿಗೆ ಜಗ್ಗದ ಅನ್ನದಾತರು ಆ ಕೇಸ್​ಗಳಿಗೆ ಹೆದರುತ್ತಾರಾ.. ಹೋರಾಟ ನಿಲ್ಲೋದಿಲ್ಲ.. ಈ ನಡುವೆ ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಕಾರು ಹತ್ತಿಸಿ ಅನ್ನದಾತರ ಹತ್ಯೆ ಮಾಡಲಾಗುತ್ತೆ.

15 ತಿಂಗಳ ಹೋರಾಟದಲ್ಲಿ 700ಕ್ಕೂ ಹೆಚ್ಚು ಅನ್ನದಾತರು ಪ್ರಾಣತ್ಯಾಗ ಮಾಡುತ್ತಾರೆ.. ಆದ್ರೆ ಹೋರಾಟ ಮಾತ್ರ ನಿಲ್ಲೋದಿಲ್ಲ.. ಕೊನೆಗೆ ಸರ್ಕಾರದ ಮುಂದೆ ಮಂಡಿಯೂರೋದನ್ನ ಬಿಟ್ಟು ಬೇರೆ ಮಾರ್ಗಗಳು ಕಾಣೋದಿಲ್ಲ.. ಇತಿಹಾಸ ಮರುಕಳಿಸೋಕೆ 15 ತಿಂಗಳು ಬೇಕಾಗುತ್ತೆ. ಭರತ ಭೂಮಿಯಲ್ಲಿ ಮಣ್ಣಿನ ಮಕ್ಕಳನ್ನ ಕೆಣಕಿದ ಯಾರೂ ಉಳಿಯೋದಿಲ್ಲ ಎನ್ನುವ ಇತಿಹಾಸ 2021 ನವಂಬರ್ 19ನೇ ತಾರೀಕು ಮರುಕಳಿಸುತ್ತೆ. 56 ಇಂಚು ಎದೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಣ್ಣಿನ ಮಕ್ಕಳ ಹೋರಾಟದ ಮುಂದೆ ಮಂಡಿಯೂರುತ್ತಾರೆ. ಹಠಕ್ಕೆ ಬಿದ್ದು ಜಾರಿಗೆ ತಂದ ರೈತ ವಿರೋಧಿ ಕಾನೂನುಗಳನ್ನ ವಾಪಸ್​ ಪಡೆಯುತ್ತಾರೆ.

Latest article