Monday, November 29, 2021

ಹೆರಿಗೆ ನೋವಲ್ಲೂ 1 ಕಿ.ಮೀ. ನಡೆದುಬಂದ ತುಂಬು ಗರ್ಭಿಣಿ..! ಪ್ರತಾಪ ತೋರುವ ಜನಪ್ರತಿನಿಧಿಗಳು ಈಗ ಎಲ್ಲಿದ್ದಾರೆ..?

Must read

ಮೈಸೂರನ್ನ ಸಾಂಸ್ಕೃತಿಕ ನಗರ, ದೇಶದ ಹೆಮ್ಮೆ ಅಂತೆಲ್ಲಾ ಮಾತನಾಡುವ ಸಂಸದ ಪ್ರತಾಪ್​ ಸಿಂಹ ಅವರೇ.. ದಸರಾ ಹಬ್ಬವನ್ನ ಸಂಭ್ರಮಿಸಿ ಸಾಧನೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಟಿ. ಸೋಮಶೇಖರ್​ ಅವರೇ.. ಮಾನವೀಯತೆ ಅನ್ನೋದಿದ್ರೆ, ಜನಪರ ಕಾಳಜಿ ನಿಮ್ಮಲ್ಲಿ ಜೀವಂತವಾಗಿದ್ರೆ ದಯವಿಟ್ಟು ನಿಮ್ಮಲ್ಲಿ ಮನವಿ ಮಾಡ್ಕೊಳ್ತೀವಿ.. ಈ ಸ್ಟೋರಿಯನ್ನ ತಪ್ಪದೇ, ದಯವಿಟ್ಟು ತಪ್ಪದೇ ನೋಡಿ.. ಯಾಕಂದ್ರೆ, ಯಾವ ಪ್ರಧಾನಿಗಳಿಂದ ದೇಶದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ ಅಂತಾ ಬೊಂಬಾಯಿ ಕೊಚ್ಚಿಕೊಳ್ತಾ ಇದ್ದೀರೋ, ಅದೇ ಪ್ರಧಾನಿಗಳ ಆಳ್ವಿಕೆಯಲ್ಲಿ ನಡೆದ  ಕರುಣಾಜನಕ ಕಥೆ ಇದು..

ಇವರು ಒಂಭತ್ತು ತಿಂಗಳ ತುಂಬು ಗರ್ಭಿಣಿ.. ಹೆಸರು ರಂಜಿತಾ.. ಹೆರಿಗೆ ನೋವು ಶುರುವಾಗಿ ಗಂಟೆ ಕಳೆದಿದೆ.. ಆದ್ರೆ, ಆಸ್ಪತ್ರೆಗೆ ಸೇರಿಸೋಕೆ ಸಾಧ್ಯವಾಗಿಲ್ಲ.. ಯಾಕ್​ ಗೊತ್ತಾ ಈ ತುಂಬು ಗರ್ಭಿಣಿ ವಾಸ ಮಾಡೋ ಹಳ್ಳಿಗೆ ಯಾವುದೇ ವಾಹನ ಬರೋದಿಲ್ಲ.. ಯಾಕಂದ್ರೆ, ನಿಮ್ಮದೇ ಆಳ್ವಿಕೆಯ ಅಭಿವೃದ್ಧಿಯ ಪರ್ವದಲ್ಲಿ ಇಲ್ಲಿ ರಸ್ತೆ ಕಾಣಿಸ್ತಾ ಇಲ್ಲ.. ಹೀಗಾಗಿ ಈ ಹೆಣ್ಣು, ತನ್ನೊಡಲಿನಲ್ಲಿ ಭವ್ಯ ಭಾರತದ ಕಂದಮ್ಮನನ್ನ ಹೊತ್ತುಕೊಂಡು ಒಂದು ಕಿಲೋ ಮೀಟರ್​ ನಡೆದುಕೊಂಡು ಬರುತ್ತಿದ್ದಾಳೆ..

 

ಆಸ್ಪತ್ರೆ ಎಲ್ಲಿದೆ.. ಇನ್ನೂ ಎಷ್ಟು ದೂರ ನಡೀಬೇಕು.. ಇನ್ನೂ ಎಷ್ಟು ಹೆಜ್ಜೆ ಇಡಬೇಕು.. ದೇಹ ಧಣಿದಿದೆ.. ಕೈಕಾಲು ಸೋತು ಹೋಗಿವೆ.. ಮಾತನಾಡೋದಿರಲಿ, ಏದುಸಿರು ತೆಗೆದುಕೊಳ್ಳೋಕೂ ಹಿಂಸೆಪಡುತ್ತಿದ್ದಾಳೆ.. ಹೊಟ್ಟೆ ನೋಯುತ್ತಿದೆ, ಪ್ರಸವ ವೇದನೆ ಕಾಡುತ್ತಿದೆ.. ಒಡಲಿನಲ್ಲಿರುವ ಪುಟ್ಟ ಕಂದಮ್ಮ ಆಚೆ ಬರಲು ತವಕಿಸುತ್ತಿದೆ.. ಆದ್ರೆ, ದಟ್ಟ ಕಾಡು.. ಕೂಗಿದರೂ ಕೇಳಿಸದು.. ಆದರೂ ತನ್ನ ಕಂದಮ್ಮನನ್ನ ಉಳಿಸೋಕೆ ಈ ಹೆಣ್ಣು ಮಗಳು ನಡೆಯುತ್ತಲೇ ಇದ್ದಾಳೆ.. ಹೆಜ್ಜೆಗಳನ್ನ ಎಣಿಸುತ್ತಾ, ಮನದಲ್ಲಿ ಚಾಮುಂಡಿ ತಾಯಿಯನ್ನ ನೆನೆಯುತ್ತಾ ಹೆಜ್ಜೆ ಹಾಕುತ್ತಲೇ ಇದ್ದಾಳೆ…

ಇದ್ಯಾವುದೋ ಹಿಂದುಳಿದ ರಾಜ್ಯದ ದಟ್ಟ ಅರಣ್ಯದಲ್ಲಿ ನಡೆದ ಕಥೆಯಲ್ಲ.. ನಮ್ಮದೇ ರಾಜ್ಯದ ಅಭಿವೃದ್ಧಿಯ ಹರಿಕಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಆಳ್ವಿಕೆಯಲ್ಲಿ ನಡೆದ ಘಟನೆ ಇದು.. ಸದಾಕಾಲಕ್ಕೂ ಪ್ರತಾಪ ತೋರಿಸುವ ಸಂಸದ ಪ್ರತಾಪ್​ ಸಿಂಹ ಅವರ ಕ್ಷೇತ್ರದ ಹೆಣ್ಣು ಮಗಳ ಕಥೆ ಇದು.. ದಸರಾ ಹಬ್ಬದ ವೇಳೆ ಕೋಟಿ ಕೋಟಿ ಸುರಿದು, ರಾತ್ರಿ ಹೊತ್ತಲ್ಲೂ  ಇಡೀ ಮೈಸೂರು ಬೆಳಗುವಂತೆ ಮಾಡಿದ ಉಸ್ತುವಾರಿ ಸಚಿವ ಎಸ್​ಟಿ ಸೋಮಶೇಖರ್​ ಅವರ ಮೈಸೂರು ಜಿಲ್ಲೆಯ ಬಡ ಹೆಣ್ಣುಮಗಳ ಕರುಣಾಜನಕ ಕಥೆ ಇದು..

Also read:  ಮಕ್ಕಳಿಗೆ ಕ್ಷೀರಭಾಗ್ಯವೂ ಇಲ್ಲ.. ರೈತರಿಗೆ ಬೆಂಬಲ ಬೆಲೆಯೂ ಇಲ್ಲ.. ಸರ್ಕಾರ ಏನ್ ಮಾಡುತ್ತಿದೆ..? - ARE WE STUPID..?

 

ಮೈಸೂರು ಜಿಲ್ಲೆ ಹೆಚ್​.ಡಿ.ಕೋಟೆ ತಾಲೂಕಿನ ಬೊಮ್ಮಲಪುರ ಹಾಡಿಯ ತುಂಬು ಗರ್ಭಿಣಿಯೊಬ್ಬರ ಕಥೆ ಇದು.. ಆ ಹಾಡಿಗೆ ಇಂದಿಗೂ ರಸ್ತೆ ಸಂಪರ್ಕ ಕಲ್ಪಿಸಿಲ್ಲ.. ಅರಣ್ಯ ಇಲಾಖೆ ಹಾಗೂ ಸರ್ಕಾರದ ನಡುವಿನ ಹಗ್ಗ ಜಗ್ಗಾಟದಲ್ಲಿ ಇಂದಿಗೂ ಹಾಡಿಗೆ ರಸ್ತೆ ಭಾಗ್ಯ ಸಿಕ್ಕಿಲ್ಲ… ಒಂದು ದೇಗುಲವೋ, ಒಂದು ಮಸೀದಿಯೋ ವಿವಾದಕ್ಕೆ ಸಿಲುಕಿದ್ರೆ, ದೇಶವೇ ಮುಳುಗುತ್ತಿದೆ ಎನ್ನುವಷ್ಟು ಮಾತನಾಡುವ ದೊರೆಗಳೆಲ್ಲಾ ಈ ಹಾಡಿ ಜನರ ಸಮಸ್ಯೆಯ ಬಗ್ಗೆ ಇದುವರೆಗೆ ತುಟಿಬಿಚ್ಚಿಲ್ಲ ಏಕೆ..? ಒಂದು ಊರಿಗೆ ಇಂದಿಗೂ ರಸ್ತೆ ಇಲ್ಲ ಅಂದ್ರೆ ನೀವು ಆ ಕ್ಷೇತ್ರದ ಸಂಸದ ಎಂದು ಹೇಗೆ ಹೆಮ್ಮಯಿಂದ ಹೇಳಿಕೊಳ್ತೀರಿ.. ನಿಮಗೆ ಆ ಜಿಲ್ಲೆಯ ಉಸ್ತುವಾರಿ ಸಚಿವರಾಗಲು ಯೋಗ್ಯತೆ ಇದೆಯಾ..? ನೀವ್ಯಾರೂ ಮಾಧ್ಯಮಗಳಿಗೆ ಉತ್ತರ ಕೊಡಬೇಕಾದ ಅಗತ್ಯವಿಲ್ಲ.. ಅಟ್​ ಲಿಸ್ಟ್​, ನಿಮ್ಮ ಆತ್ಮಗಳನ್ನ ಒಮ್ಮೆ ನೀವೆ ಪ್ರಶ್ನೆ ಮಾಡಿಕೊಳ್ಳಿ.. ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರೇ, ಬಡವರ ಪರ, ಬಡವರ ಪರ ಅಂತಾ ಬೊಬ್ಬೆ ಹೊಡೆದುಕೊಳ್ತೀರಲ್ಲ.. ಅದೇ ಬಡ ಕುಟುಂಬದ ಗರ್ಭಿಣಿ ಮಹಿಳೆಯ ಈ ಸ್ಥಿತಿ ನಿಮ್ಮ ಕಣ್ಣಿಗೆ ಬೀಳೋದಿಲ್ವಾ.. ನಿಮ್ಮ ಹಿಂದೆ ಮುಂದೆ ಓಡಾಡೋ ಕಾರ್ಯದರ್ಶಿಗಳು, ಶಾಸಕರು ಇಂಥದ್ದನ್ನೆಲ್ಲಾ ಗಮನಕ್ಕೆ ತರೋದೇ ಇಲ್ವಾ..? ತಂದೆಯ ಸ್ಥಾನದಲ್ಲಿರೋ ನೀವು ದಯವಿಟ್ಟು ಈ ಬಡ ಮಹಿಳೆಯ ಕಷ್ಟವನ್ನ ಒಮ್ಮೆ ಕಣ್ಣಾರೆ ನೋಡಿ.. ಮತ್ತೆ ಯಾವ ಹೆಣ್ಣು ಮಗಳೂ ಕೂಡ ಇಂಥಾ ಶಿಕ್ಷೆ ಅನುಭವಿಸೋದು ಬೇಡ.. ನಾನು ಹೆಣ್ಣಾಗಿದ್ದೇ ತಪ್ಪಾ ಎನ್ನುವ ಭಾವನೆ ಆಕೆಯನ್ನ ಕಾಡುವುದು ಬೇಡ.. ಇದು TV5 ಕನ್ನಡ ವಾಹಿನಿ ನಿಮ್ಮಲ್ಲಿ ಮಾಡಿಕೊಳ್ತಾ ಇರುವ ಕಳಕಳಿಯ ಮನವಿ…

Also read:  ಮಕ್ಕಳಿಗೆ ಕ್ಷೀರಭಾಗ್ಯವೂ ಇಲ್ಲ.. ರೈತರಿಗೆ ಬೆಂಬಲ ಬೆಲೆಯೂ ಇಲ್ಲ.. ಸರ್ಕಾರ ಏನ್ ಮಾಡುತ್ತಿದೆ..? - ARE WE STUPID..?

 

ನಾಗರಹೊಳೆ ಅಭಯಾರಣ್ಯದಲ್ಲಿರುವ ಬೊಮ್ಮಲಪುರ ಹಾಡಿಯ ಜನರ ನಿತ್ಯದ ಸಂಕಷ್ಟವಿದು.. ರಸ್ತೆಯೇ ಇಲ್ಲ ಅಂದ್ರೆ, ನೀವು ಮಾಡಿರೋ ಅಭಿವೃದ್ಧಿ ಏನು.. ಸ್ಥಳೀಯ ಶಾಸಕರು ಎಲ್ಲಿದ್ದಾರೆ.. ಎರಡನೇ ಬಾರಿ ಗೆದ್ದು ಬೀಗುವ, ಪ್ರತಾಪ ತೋರುವ ಸಂಸದರು ಎಲ್ಲಿ ಹೋಗಿದ್ದಾರೆ.. ಮೈಕ್​ ಕಂಡಾಗೆಲ್ಲಾ ಅಬ್ಬರಿಸಿ ಬೊಬ್ಬಿರಿಯುವ ಉಸ್ತುವಾರಿ ಸಚಿವರು ಏನ್​ ಮಾಡ್ತಾ ಇದ್ದಾರೆ.. ತುಂಬು ಗರ್ಭಿಣಿಯೊಬ್ಬರು ಒಂದು ಕಿಲೋ ಮೀಟರ್​ ನಡೆಯಬೇಕು ಅಂದ್ರೆ, ಈ ರಾಜ್ಯದಲ್ಲಿ ಹೆಣ್ಣಿನ ಸ್ಥಿತಿ ಯಾವ ಹಂತದಲ್ಲಿದೆ.. ಅಕಸ್ಮಾತ್​ ಅಲ್ಲಿ ಆಶಾ ಕಾರ್ಯಕರ್ತೆಯರು ಇಲ್ಲದೇ ಹೋಗಿದ್ದಿದ್ರೆ, ಆ ಹೆಣ್ಣಿನ ಗತಿ ಏನಾಗುತ್ತಿತ್ತು.. ಆಕೆಯ ಒಡಲಿನಲ್ಲಿರುವ ಪುಟ್ಟ ಕಂದಮ್ಮನ ಕಥೆ ಏನಾಗುತ್ತಿತ್ತು..? ಯಾರಾದ್ರು ಯೋಚನೆ ಮಾಡಿದ್ದೀರಾ..? ನಿಮ್ಮ ಕೆಲಸ ಬರೀ ರಾಜಕೀಯ ಮಾಡೋದಾ.. ಈಗಲಾದ್ರೂ ಸ್ವಲ್ಪ ಮಾನವೀಯ ಮುಖವನ್ನ ತೋರಿ.. ರಾಜಕೀಯ ನಾಟಕವನ್ನ ಬದಿಗಿಟ್ಟು ಜನಪರ ಕಾಳಜಿಯನ್ನ ತೋರಿ.. ಈ ಹೆಣ್ಣಿಗೆ ಬಂದಂತಾ ಸ್ಥಿತಿ ಮತ್ಯಾವ ಹೆಣ್ಣಿಗೂ ಬಾರದೇ ಇರಲಿ..+

Also read:  ವೀಕೆಂಡ್ ಕರ್ಫ್ಯೂನಲ್ಲಿ ಹುಟ್ಟುಹಬ್ಬದ ಮೆರವಣಿಗೆ.. ನಡುರಸ್ತೆಯಲ್ಲಿ ಡಿಜೆ ಪಾರ್ಟಿ.. ಇವನೆಂತಾ ಜನನಾಯಕ..?

-ಸುರೇಶ್​, TV5, ಮೈಸೂರು

Latest article