ಬೆಂಗಳೂರು: ನಗರದ ಸೋಲದೇವನಹಳ್ಳಿಯಲ್ಲಿ ನಾಪತ್ತೆಯಾಗಿರುವ ಮಕ್ಕಳು ಮಂಗಳೂರಿನ ಪಾಂಡೇಶ್ವರದಲ್ಲಿ ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಮೃತವರ್ಷಿಣಿ , ರಾಯನ್ ಸಿದ್ದಾಂತ್, ಭೂಮಿ, ಚಿಂತನ್ ಸದ್ಯ ಪೊಲೀಸರ ವಶದಲ್ಲಿದ್ದು, ಪೋಷಕರಿಗೆ ಮಾಹಿತಿ ನೀಡಲಾಗಿದೆ.
ಅಕ್ಟೋಬರ್ 9ರಂದು ಓರ್ವ ಯುವತಿ ಸೇರಿದಂತೆ ನಾಲ್ವರು ಮಕ್ಕಳು ಒಂದೇ ರೀತಿಯ ಲೆಟರ್ ಬರೆದಿಟ್ಟು ಸೋಲದೇವನಹಳ್ಳಿಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಹಾಗೂ ಪೋಷಕರು ತೀವ್ರ ಹುಡುಕಾಟ ನಡೆಸಿದ್ದರು.
ಬೆಂಗಳೂರಿನಿಂದ ಮಂಗಳೂರಿಗೆ ತೆರಳಿದ ನಾಲ್ವರು ಇಂದು ಪಾಂಡೇಶ್ವರದಲ್ಲಿ ಆಟೋ ಹತ್ತಿದ್ದಾರೆ. ಸರಿಯಾದ ವಿಳಾಸ ಹೇಳದ ಮಕ್ಕಳ ಚಲನವಲನ ಗಮನಿಸಿ ಅನುಮಾನಗೊಂಡ ಆಟೋ ಚಾಲಕ ನೇರವಾಗಿ ನಾಲ್ವರನ್ನು ಠಾಣೆಗೆ ಕರೆದು ತಂದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸದ್ಯ ನಾಲ್ವರು ಪಾಂಡೇಶ್ವರ ಪೊಲೀಸರ ವಶದಲ್ಲಿದ್ದು, ಪೊಲೀಸರು ಪೋಷಕರಿಗೆ ಮಾಹಿತಿ ನೀಡಿದ್ದಾರೆ.