Tuesday, November 29, 2022

ನಾಗರಿಕ ಸಮಾಜವನ್ನು ಧಿಕ್ಕರಿಸಿ 17 ವರ್ಷಗಳಿಂದ ಕಾಡಿನಲ್ಲೇ ವಾಸ..!

Must read

ದಕ್ಷಿಣ ಕನ್ನಡ: ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಗ್ರಾಮದಂಚಿನ ಕಾಡು ಪ್ರದೇಶದಲ್ಲಿ 17 ವರ್ಷಗಳಿಂದ ಓರ್ವ ವ್ಯಕ್ತಿ ಕಾಡಿನಲ್ಲಿ ವಾಸ ಮಾಡುತ್ತಿದ್ದಾರೆ.  ಅಂಬಾಸಿಡರ್ ಕಾರಿನ ಮೇಲೆ ಗುಡಿಸಲೊಂದನ್ನು ನಿರ್ಮಿಸಿ ಕಾಡಿನಲ್ಲೇ ಜೀವನ ಸಾಗಿಸುತ್ತಿದ್ದಾರೆ.

ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಬೆದ್ರಪಣೆ ನಿವಾಸಿ ಚಂದ್ರಶೇಖರ್ 2003ರಿಂದ ಕಾಡಿನ ಮಧ್ಯೆ ವಾಸವಿದ್ದು, ಬುಟ್ಟಿ ಹೆಣೆದು ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ.

ಚಂದ್ರಶೇಖರ್ 17 ವರ್ಷಗಳ ಹಿಂದೆ ಎಲಿಮಲೆ ಸಹಕಾರಿ ಬ್ಯಾಂಕ್‌ನಲ್ಲಿ ₹30 ಸಾವಿರ ಸಾಲ ಮಾಡಿದ್ದರು. ಸಾಲ ಮರುಪಾವತಿ ಮಾಡದಿದ್ದಾಗ ಬ್ಯಾಂಕ್ ಸಿಬ್ಬಂದಿ ಚಂದ್ರಶೇಖರ್ ಅವರ ಜಮೀನು ಹರಾಜು ಮಾಡಿದ್ದರು. ಹರಾಜು ಪ್ರಕ್ರಿಯೆಯಲ್ಲಿ ಮೋಸ ಆಗಿರುವ ಬಗ್ಗೆ ಮನನೊಂದ ಚಂದ್ರಶೇಖರ್​, ನಾಗರಿಕ ಸಮಾಜವನ್ನು ಧಿಕ್ಕರಿಸಿ ಕಾಡಿನಲ್ಲಿ ವಾಸಿಸಲು ಆರಂಭಿಸಿದ್ದರು.

ಏಳು ವರ್ಷಗಳ ಹಿಂದೆಯೇ ಈ ವಿಚಾರ ತಿಳಿದ ಅಂದಿನ ಜಿಲ್ಲಾಧಿಕಾರಿ ಎಬಿ ಇಬ್ರಾಹಿಂ ಸ್ವತಃ ಚಂದ್ರಶೇಖರ್ ಇದ್ದ ಸ್ಥಳಕ್ಕೆ ಹೋಗಿ ನಾಡಿಗೆ ಬರುವಂತೆ ಮನವೊಲಿಸಿದ್ದರು. ಅಲ್ಲದೇ ಜಿಲ್ಲಾಡಳಿತದಿಂದ ಚಂದ್ರಶೇಖರ್​ಗಾಗಿ 50 ಸೆಂಟ್ಸ್ ಜಾಗವನ್ನು ಮೀಸಲಿರಿಸಿದ್ದರು. ಆದರೆ ಜಿಲ್ಲಾಡಳಿತ ಕೊಟ್ಟ ಜಾಗದಿಂದ ಸಮಾಧಾನಗೊಳ್ಳದ ಚಂದ್ರಶೇಖರ್ ವಾಪಸ್​ ಬಾರದೇ ಕಾಡಿನಲ್ಲೇ ಜೀವನ ಮುಂದುವರಿಸಿದ್ದರು.

ಇಂದಲ್ಲಾ‌ ನಾಳೆ ತಮ್ಮ ಭೂಮಿ ಮರಳಿ ತನಗೆ ಸಿಗುವ ನಂಬಿಕೆಯಲ್ಲಿರುವ ಚಂದ್ರಶೇಖರ್, ಜಮೀನಿನ ದಾಖಲೆ ಪತ್ರಗಳನ್ನು ಜೋಪಾನವಾಗಿ ಕಾಪಾಡಿಕೊಂಡಿದ್ದಾರೆ. ಮಾನಸಿಕವಾಗಿ ಘಾಸಿಯಾಗಿರುವ ಚಂದ್ರಶೇಖರ್ ಚಿಕಿತ್ಸೆ ಪಡೆದುಕೊಂಡರೆ ಮತ್ತೆ ನಾಗರಿಕ ಸಮಾಜಕ್ಕೆ ಬರುವ ಸಾಧ್ಯತೆಯಿದೆ. ಹೀಗಾಗಿ ಈ ಬಗ್ಗೆ ಜಿಲ್ಲಾಡಳಿತ ತುರ್ತಾಗಿ ಗಮನಹರಿಸುವ ಅಗತ್ಯವಿದೆ.

Latest article