'ಫ್ಯಾಂಟಮ್' ಇನ್ಮುಂದೆ 'ವಿಕ್ರಾಂತ್ ರೋಣ'
ಬದಲಾಯ್ತು ‘ಫ್ಯಾಂಟಮ್’ ಚಿತ್ರದ ಟೈಟಲ್

ಕಿಚ್ಚ ಸುದೀಪ್ ಅಭಿನಯದ ಬಿಗ್ ಬಜೆಟ್ ಸಿನಿಮಾ ಫ್ಯಾಂಟಂ ಈಗ ವಿಕ್ರಾಂತ್ ರೋಣ ಆಗಿ ಬದಲಾಗಿದೆ. ಹಿಂದೆಂದೂ ಯಾವ ಕನ್ನಡ ಸಿನಿಮಾ ಕೂಡ ಮಾಡಿರದ ಹಾಗೇ ಟೈಟಲ್ ಲಾಂಚ್ ಮಾಡೋಕ್ಕೆ ಹೊರ್ಟಿದೆ ಚಿತ್ರತಂಡ.
ಫ್ಯಾಂಟಂ ಸ್ಯಾಂಡಲ್ವುಡ್ ಸಿನಿ ಇಂಡ್ರಸ್ಟ್ರಿಯ ಪೋಸ್ಟ್ ಎಕ್ಸ್ಪೆಕ್ಡೆಡ್ ಸಿನಿಮಾ. ಪಾತ್ರ ಪರಿಚಯದಿಂದಲೇ ಕುತೂಹಲ ಸೃಷ್ಟಿಸಿದ್ದ ಫ್ಯಾಂಟಂ ಚಿತ್ರತಂಡ, ಜ.21ರಂದು ಒಂದು ಮಹತ್ವದ ಘೋಷಣೆ ಮಾಡುವುದಾಗಿ ಹೇಳಿಕೊಂಡಿತ್ತು. ಇದೀಗ ಪ್ಯಾಟಂ ಚಿತ್ರತಂಡ ಬಿಗ್ ಅನೌನ್ಸ್ಮೆಂಟ್ ಮಾಡಿದೆ. ಚಿತ್ರದ ಟೈಟಲ್ ಅನ್ನೇ ಬದಲಾಯಿಸಿದೆ. ಫ್ಯಾಂಟಮ್ ಬದಲು ಚಿತ್ರದಲ್ಲಿ ಸುದೀಪ್ ಪಾತ್ರಕ್ಕಿರುವ ವಿಕ್ರಾಂತ್ ರೋಣ ಹೆಸರನ್ನೇ ಟೈಟಲ್ ಆಗಿ ಘೋಷಣೆ ಮಾಡಿದೆ.
ಇನ್ನು ಸ್ಯಾಂಡಲ್ವುಡ್ನಲ್ಲಿ ಕಿಚ್ಚ ಸುದೀಪ್ ಆರಡಿ ಕಟೌಟ್ ಅಂತಾನೇ ಫೇಮಸ್. ಇದೀಗ ಈ ಆರಡಿ ಕಟೌಟ್ ವಿಶ್ವದ ಅತಿ ಎತ್ತರದ ಕಟ್ಟಡದಲ್ಲಿ ರಾರಾಜಿಸಲಿದೆ. ಈ ಮೂಲಕ ಬುರ್ಜ್ ಕಲೀಫಾದಲ್ಲಿ ಕಟೌಟ್ ನಿಲ್ಲಿಸಿದ ಮೊದಲ ನಟ ಎಂಬ ಹೆಗ್ಗಳಿಕೆ ಕಿಚ್ಚನದಾಗುತ್ತದೆ ಹಾಗೂ ವಿಕ್ರಾಂತ್ ರೋಣ ಎಂದು ಬದಲಾಗಿರುವ ಶೀರ್ಷಿಕೆಯನ್ನು ದೊಡ್ಡಮಟ್ಟದಲ್ಲಿ ಅನಾವರಣ ಮಾಡುವುದಕ್ಕೆ ತಂಡ ಸಿದ್ಧತೆ ಮಾಡಿಕೊಂಡಿದೆ. ಜನವರಿ 31ರಂದು ದುಬೈನ ಬುರ್ಜ್ ಖಲೀಫಾದಲ್ಲಿ ವಿಕ್ರಾಂತ್ ರೋಣ ಟೈಟಲ್ ಅನಾವರಣ ಆಗಲಿದೆ.
ಬುರ್ಜ್ ಖಲೀಫಾ ವಿಶ್ವದ ಅತೀ ಎತ್ತರದ ಕಟ್ಟಡ. ಈ ಕಟ್ಟಡದಲ್ಲಿ ಟೈಟಲ್ ಲಾಂಚ್ ಮಾಡಿಕೊಳ್ಳುತ್ತಿರುವ ಕನ್ನಡದ ಮೊದಲ ಸಿನಿಮಾ ಅನ್ನೋ ಖ್ಯಾತಿಗೆ ವಿಕ್ರಾಂತ್ ರೋಣ ಪಾತ್ರವಾಗಿದೆ. ಇನ್ನು ಟೈಟಲ್ ಲಾಂಚ್ ಜೊತೆಗೆ ಚಿತ್ರದ 3 ನಿಮಿಷ ಒಂದು ಸ್ನೀಕ್ ಪೀಕ್ ವಿಡಿಯೋವನ್ನು ಸಹ ರಿಲೀಸ್ ಮಾಡುವುದಕ್ಕೆ ತಂಡ ಪ್ಲ್ಯಾನ್ ಮಾಡಿಕೊಂಡಿದೆ. ಇದು ಸಿನಿ ಪ್ರೇಮಿಗಳ ನಿರೀಕ್ಷೆ ಹೆಚ್ಚಿಸಿದೆ.
ಕನ್ನಡ ಚಿತ್ರವೊಂದು ಸ್ನೀಕ್ ಪೀಕ್ ರಿಲೀಸ್ ಮಾಡ್ತಾ ಇರೋದು ಇದೇ ಮೊದಲು. ಹೀಗಾಗಿ ಸಹಜವಾಗಿಯೇ ಇದರ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಸ್ನೀಕ್ಪೀಕ್ನಲ್ಲಿ ಏನೆಲ್ಲಾ ಇರಬಹುದು ಅನ್ನೋ ಲೆಕ್ಕಾಚಾರ ಶುರುವಾಗಿದೆ. ವಿಕ್ರಾಂತ್ ರೋಣ ಚಿತ್ರಕ್ಕಾಗಿ ಹೈದರಾಬಾದ್ನ ಅನ್ನಪೂರ್ಣ ಸ್ಟುಡಿಯೋಸ್ನಲ್ಲಿ ದೊಡ್ಡ ಸೆಟ್ಗಳನ್ನು ಹಾಕಲಾಗಿತ್ತು. ಬಹುಶಃ ಅದೆಲ್ಲ ಹೇಗಿರಲಿದೆ ಎಂಬ ಸಣ್ಣ ಹಿಂಟ್ ಅನ್ನು ಸ್ನೀಕ್ ಪೀಕ್ ವಿಡಿಯೋದಲ್ಲಿ ತೋರಿಸಬಹುದು ಎನ್ನಲಾಗುತ್ತಿದೆ.
ಇನ್ನು, ಈ ಹಿಂದೆ ಬುರ್ಜ್ ಖಲೀಫಾದಲ್ಲಿ ಹಾಲಿವುಡ್ನ ಸಿನಿಮಾಗಳಾದ 'ವಂಡರ್ ವುಮನ್- 1984', 'ಮಾರ್ವೆಲ್' ಸೇರಿದಂತೆ ಕೆಲ ಸಿನಿಮಾಗಳ ಟೀಸರ್ ಮತ್ತು ಟ್ರೇಲರ್ಗಳು ಪ್ರದರ್ಶನವಾಗಿದ್ದವು. ಇವುಗಳ ಸಾಲಿಗೆ ಈಗ ಕನ್ನಡದ ಸಿನಿಮಾ ಸಹ ಸೇರಿಕೊಳ್ಳಲಿದೆ.
ಕಿಚ್ಚ ಸುದೀಪ್ ಸಿನಿಯಾನಕ್ಕೆ 25 ವರ್ಷ ತುಂಬಿದೆ. ಸುದೀಪ್ ಸಿನಿಯಾನದ ಬೆಳ್ಳಿ ಹಬ್ಬದ ಸಂಭ್ರಮ ಕೂಡ ಬುರ್ಜ್ ಖಲೀಫಾದಲ್ಲೇ ನಡೆಯಲಿದೆ. ಇದಕ್ಕಾಗಿ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ.