Top

ಅಭಿಮಾನಿಗಳಿಗೆ ಶಾಕ್​ ಕೊಟ್ಟ ಸ್ಯಾಂಡಲ್​ವುಡ್​ ಕ್ವೀನ್

ನಾನು ಆ ಸ್ಥಾನಕ್ಕೆ ರಾಜಿನಾಮೆ ನೀಡಿದೆ ಆದರೆ ನಮ್ಮ ಬಾಸ್ ರಾಹುಲ್​ ಗಾಂಧಿಯವರು ಅದನ್ನ ಅಂಗೀಕರಿಸಿಲ್ಲ.

ಅಭಿಮಾನಿಗಳಿಗೆ ಶಾಕ್​ ಕೊಟ್ಟ ಸ್ಯಾಂಡಲ್​ವುಡ್​ ಕ್ವೀನ್
X

ಲೋಕಸಭಾ ಚುನಾವಣೆ ನಂತ್ರ ಅಜ್ಞಾತಕ್ಕೆ ಸರಿದಿದ್ದ ಮಾಜಿ ಸಂಸದೆ ಮತ್ತು ನಟಿ ರಮ್ಯಾ ಇತ್ತೀಚೆಗೆ ಮತ್ತೆ ಸೋಷಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಅವರ ಪೋಸ್ಟ್​​ಗಳನ್ನ ನೋಡಿದ ಅಭಿಮಾನಿಗಳು ರಮ್ಯಾ ಚಿತ್ರರಂಗಕ್ಕೆ ವಾಪಸ್​​ ಬರ್ತಾರೆ, ರಾಜಕೀಯ ರಂಗದಲ್ಲೂ ಗುರ್ತಿಸಿಕೊಳ್ತಾರೆ ಅಂತ ಖುಷಿ ಪಟ್ಟಿದರು. ಆದರೆ, ಪದ್ಮಾವತಿಯ ಹೊಸ ನಡೆ, ಆಕೆಯ ಮಾತಿನ ಶೈಲಿ, ಅಚ್ಚರಿ ಮತ್ತು ನಿರಾಸೆ ಮೂಡಿಸುವಂತಿದೆ.

ರಮ್ಯಾ ಅಲಿಯಾಸ್ ದಿವ್ಯಸ್ಪಂದನ. ಕನ್ನಡ ಚಿತ್ರರಂಗದಲ್ಲಿ ರಾಣಿಯಾಗಿ ಮೆರೆದು ರಾಜಕೀಯರಂಗಕ್ಕೆ ಧುಮುಕಿ, ರಾಷ್ಟ್ರ ರಾಜಕಾರಣದಲ್ಲಿ ಗುರ್ತಿಸಿಕೊಂಡ ಗಟ್ಟಿಗತ್ತಿ. 7-8 ವರ್ಷಗಳ ಹಿಂದೆ ಬಣ್ಣದ ಲೋಕದಿಂದ ನಿಧಾನವಾಗಿ ದೂರಾಗಿದ್ದ ಪದ್ಮಾವತಿ ಮತ್ತೆ ಇತ್ತ ಮುಖ ಮಾಡಲಿಲ್ಲ. ಕಾಂಗ್ರೆಸ್​ ಸೋಷಿಯಲ್​ ಮೀಡಿಯಾ ಮುಖ್ಯಸ್ಥೆಯಾಗಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದರು. ಆದರೆ, ಕಳೆದೊಂದು ವರ್ಷದಿಂದ ರಮ್ಯಾ ಎಲ್ಲೋದ್ರು, ಏನ್ ಮಾಡುತ್ತಿದ್ದಾರೆ.​ ಮತ್ತೆ ಚಿತ್ರರಂಗಕ್ಕೆ ಬರ್ತಾರಾ(?)ಇಲ್ಲಾ(?) ಅನ್ನೋ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ.

ಕಳೆದ ವರ್ಷ ಜೂನ್​ನಲ್ಲಿ ರಮ್ಯಾ ಅವರ ಟ್ವಿಟರ್​ ಅಕೌಂಟ್​ ಡಿ ಆ್ಯಕ್ಟಿವೇಟ್​ ಆಗಿತ್ತು. ರಮ್ಯಾ ದೆಹಲಿಯಲ್ಲಿ ಇದ್ದಾರಂತೆ, ಫಾರಿನ್​​​​​​​ನಲ್ಲಿ ಸೆಟ್ಲ್​ ಆಗಿದ್ದಾರಂತೆ, ಮತ್ತೆ ಚಿತ್ರರಂಗಕ್ಕೆ ವಾಪಸ್​ ಬರ್ತಾರಂತೆ, ಶೀಘ್ರದಲ್ಲೆ ಮದ್ವೆ ಆಗ್ತಾರಂತೆ ಹೀಗೆ ಅಂತೆಕಂತೆ ಸುದ್ದಿ ಸದ್ದು ಮಾಡಿದ್ದು ಬಿಟ್ರೆ, ಅಫೀಷಿಯಲ್ಲಾಗಿ ಯಾವುದು ಕನ್ಫರ್ಮ್​​ ಆಗಿರಲಿಲ್ಲ. ಆದರೆ, ಕಳೆದೆರಡು ತಿಂಗಳಿನಿಂದ ಇನ್​ಸ್ಟಾ, ಫೇಸ್ಬುಕ್​, ಟ್ವಿಟ್ಟರ್​​​ನಲ್ಲಿ ರಮ್ಯಾ ಆ್ಯಕ್ಟೀವ್​ ಆಗಿದ್ದಾರೆ. ಇತ್ತೀಚೆಗೆ ಟ್ವಿಟ್ಟರ್​​ನಲ್ಲಿ ಕೇಂದ್ರ ಸರ್ಕಾರವನ್ನ ಕುಟುಕುವ ಕೆಲಸ ಮಾಡುತ್ತಿದ್ದಾರೆ.

ರಮ್ಯಾ ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದು ನೋಡಿ, ಅಭಿಮಾನಿಗಳು ಹಿರಿಹಿರಿ ಹಿಗ್ಗಿದ್ದರು. ನೆಚ್ಚಿನ ನಟಿ ಮತ್ತೆ ಸಿನಿಮಾ ಅಥವಾ ರಾಜಕೀಯರಂಗಕ್ಕೆ ಬಂದು ಕಮಾಲ್​ ಮಾಡ್ತಾರೆ ಅಂದುಕೊಂಡಿದ್ದರು. ಆದರೆ, ಇತ್ತೀಚೆಗೆ ಪದ್ಮಾವತಿ ಆಂಗ್ಲ ಪತ್ರಿಕೆಗೆ ನೀಡಿರುವ ಸಂದರ್ಶನ ಅಭಿಮಾನಿಗಳಿಗೆ ಶಾಕ್​ ಕೊಟ್ಟಿದೆ. ತಮ್ಮ ಮುಂದಿನ ನಡೆ ಬಗ್ಗೆ ಸಂದರ್ಶನದಲ್ಲಿ ರಮ್ಯಾ ಮನಬಿಚ್ಚಿ ಮಾತನಾಡಿದ್ದಾರೆ. ಆ ಮಾತುಗಳನ್ನ ಕೇಳಿದ್ರೆ, ದಿವ್ಯ ಸ್ಪಂದನ ಮತ್ತೆ ಸಿನಿಮಾ ಮತ್ತು ಪಾಲಿಟಿಕ್ಸ್ ಕಡೆ ಮುಖ ಮಾಡೋದಿಲ್ಲ ಅನ್ನೋದು ಸ್ಪಷ್ಟವಾಗುತ್ತಿದೆ.

37 ವರ್ಷಕ್ಕೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದವರು, ಅಪಾರ ಅಭಿಮಾನಿ ಬಳಗವನ್ನ ಸೃಷ್ಟಿಸಿಕೊಂಡವರು, ಪೊಲಿಟಿಕಲ್​ ಪವರ್​​ ಗಳಿಸಿದವರು ರಮ್ಯಾ. ಸಿನಿಮಾರಂಗಕ್ಕೆ ಬಂದ್ರೆ, ಇವತ್ತಿನ ಹೊಸ ನಟಿಯರನ್ನು ಹಿಂದಿಕ್ಕಿ, ಮತ್ತೆ ರಾಣಿಯಾಗಿ ಮೆರೆಯುವ ತಾಕತ್ತು ಪದ್ಮಾವತಿಗಿದೆ. ಅತ್ತ ಪಾಲಿಟಿಕ್ಸ್​​ನಲ್ಲೂ ಒಳ್ಳೆ ಅವಕಾಶ, ಸ್ಥಾನಮಾನ ಸಿಗೋದ್ರಲ್ಲಿ ಎರಡು ಮಾತಿಲ್ಲ. ಆದರೆ, ಇದೆಲ್ಲವನ್ನ ಬಿಟ್ಟು ಬೇರೆ ಕಡೆ ಮುಖ ಮಾಡಿದ್ದಾರಂತೆ ರಮ್ಯಾ.

ಸಂದರ್ಶನದಲ್ಲಿ ಮಾಜಿ ಸಂಸದೆ ಮತ್ತು ನಟಿ ರಮ್ಯಾ ಒಂದಷ್ಟು ಸಂಗತಿಗಳನ್ನ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಸಿನಿಮಾ ಮತ್ತು ರಾಜಕಾರಣ ನನಗೆ ಸಾಕಾಗಿದೆ. ಮೂರು ವರ್ಷಗಳ ವೇದಾಂತ ಕೋರ್ಸ್​​ಗೆ ಸೇರಿಕೊಂಡಿದ್ದೇನೆ. ಸದ್ಯ ಮೊದಲ ವರ್ಷದಲ್ಲಿದೇನೆ. ಶೀಘ್ರದಲ್ಲೇ ಮುಂದಿನ ಹಂತಕ್ಕೆ ಹೋಗಲಿದ್ದೇನೆ. ಕರ್ನಾಟಿಕ್, ಹಿಂದೂಸ್ತಾನಿ, ವೆಸ್ಟರ್ಸ್​​ ಮ್ಯೂಸಿಕ್​ ಕೇಳ್ತಿದ್ದೇನೆ. ಪೇಂಟಿಂಗ್​ ಮಾಡಲು ಶುರು ಮಾಡಿದ್ದೇನೆ ಅಂತ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ರಮ್ಯಾ ಮಾಡಿದ ಪೋಸ್ಟ್​ಗಳು ಅವರು ಆಧ್ಯಾತ್ಮದತ್ತ ಮುಖ ಮಾಡಿರುವುದರ ಬಗ್ಗೆ ಸುಳಿವು ಕೊಟ್ಟಿತ್ತು. ಇದೇ ಹಾದಿಯಲ್ಲಿ ಪದ್ಮಾವತಿ ಹೆಜ್ಜೆ ಇಟ್ಟಿದ್ದಾರೆ. 'ಕೆಲ ದಿನಗಳಿಂದ ಏಕಾಂತದಲ್ಲಿದ್ದೆ. ಅದರಿಂದ ನನ್ನನ್ನ ನಾನು ಕಂಡುಕೊಳ್ಳಲು ಸಾಧ್ಯವಾಗಿದೆ. ನಾನು ನಟಿ ಅಥವಾ ರಾಜಕಾರಣಿ ಆಗಲು ಬಯಸಿರಲಿಲ್ಲ. ನಾನು ಅಂತರ್ಮುಖಿ. ನನ್ನ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಇಷ್ಟಪಡಲ್ಲ. ಆದರೆ, ಸಿನಿಮಾ ಮತ್ತು ರಾಜಕೀಯ ಎರಡೂ ಇದಕ್ಕೆ ವಿರುದ್ಧ. ಸದ್ಯ ನನ್ನ ಹೊಸ ಅಧ್ಯಾಯದ ಬಗ್ಗೆ ಎಕ್ಸೈಟ್​ ಆಗಿದ್ದೇನೆ. ಮುಂದೇನು ಅಂತ ಗೊತ್ತಿಲ್ಲ' ಅಂದಿದ್ದಾರೆ.

ಇನ್ನು ಲೋಕಸಭಾ ಚುನಾವಣೆ ನಂತ್ರ ರಮ್ಯಾ ಅವರನ್ನ ಕಾಂಗ್ರೆಸ್​ ಸೋಷಿಯಲ್​ ಮೀಡಿಯಾ ಮುಖ್ಯಸ್ಥೆ ಸ್ಥಾನದಿಂದ ತೆಗೆದು ಹಾಕಲಾಗಿದೆ ಅನ್ನೋ ಸುದ್ದಿ ಹರಿದಾಡಿತ್ತು. ಅದೇ ಕಾರಣಕ್ಕೆ ಅವರು ಸೋಷಿಯಲ್​ ಮೀಡಿಯಾದಲ್ಲಿ ತಟಸ್ಥರಾದರು. ಅಂತಲೂ ಹೇಳಲಾಗಿತ್ತು. ಈ ಬಗ್ಗೆಯೂ ಮಾತನಾಡಿರುವ ರಮ್ಯಾ.

'ನಾನು ಆ ಸ್ಥಾನಕ್ಕೆ ರಾಜಿನಾಮೆ ನೀಡಿದೆ, ಆದರೆ ನಮ್ಮ ಬಾಸ್ ರಾಹುಲ್​ ಗಾಂಧಿಯವರು ಅದನ್ನ ಅಂಗೀಕರಿಸಿಲ್ಲ. ಅದು ಈಗಲೂ ಅವರ ಬಳಿ ಇದೆ. ಅವರು ನನಗೆ ಸಾಕಷ್ಟು ಪ್ರೋತ್ಸಾಹ, ಬೆಂಬಲ ನೀಡಿದ್ದಾರೆ ಅದನ್ನ ಮರೆಯೋದಿಲ್ಲ'.

'ಸದ್ಯಕ್ಕೆ ನಾನು ಕಾಂಗ್ರೆಸ್​ ಸೋಷಿಯಲ್​ ಮೀಡಿಯಾ ಮುಖ್ಯಸ್ಥೆ ಅಲ್ಲದೇ ಇರಬಹುದು. ಆದರೆ, ದೇಶದ ಜವಾಬ್ದಾರಿಯುತ ಪ್ರಜೆ. ಅನ್ಯಾಯ ಮತ್ತು ವಾಕ್ ಸ್ವಾತಂತ್ರವನ್ನ ಕಸಿದುಕೊಳ್ಳುವುದರ ವಿರುದ್ಧ ಧ್ವನಿ ಎತ್ತುತ್ತಲೇ ಇರುತ್ತೇನೆ. ರಾಷ್ಟ್ರ ಧ್ವಜ ಹಿಡಿದುಕೊಳ್ಳುವುದು ಅಥವಾ ದೇಶದ ಗಡಿಯಲ್ಲಿ ನಿಂತುಕೊಳ್ಳುವುದು ಮಾತ್ರ ದೇಶಪ್ರೇಮ ತೋರಿಸುವ ದಾರಿಯಲ್ಲ. ಉತ್ತಮ ಪ್ರಜೆಯಾಗಿರುವುದು, ಅನ್ಯಾಯವನ್ನ ತಟ್ಟಿ ಕೇಳುವುದು ದೇಶ ಪ್ರೇಮವೇ' ಅಂತ ರಮ್ಯಾ ಹೇಳಿದ್ದಾರೆ.

ಒಟ್ಟರೆಯಾಗಿ ರಮ್ಯಾ, ಅವರ ನಡೆ ಅಭಿಮಾನಿಗಳಿಗೆ ಅಚ್ಚರಿ ಉಂಟು ಮಾಡಿದೆ. ರಮ್ಯಾ ಏಕಾಏಕಿ ಇಂತಹ ನಿರ್ಧಾರ ಯಾಕೆ ತೆಗೆದುಕೊಂಡರು, ಅನ್ನುವ ಗೊಂದಲವೂ ಮೂಡಿದೆ. ಸಿನಿಮಾ ಮತ್ತು ರಾಜಕೀಯರಂಗದಲ್ಲಿ ಬೆಳೆಯುವ ಅವಕಾಶ ಇದ್ರು, ಎಲ್ಲವನ್ನು ಬಿಟ್ಟು, ಆಧ್ಯಾತ್ಮದತ್ತ ಮುಖ ಮಾಡಿರೋದು ಬೇಸರಕ್ಕೆ ಕಾರಣವಾಗಿದೆ. ದಿವ್ಯ ಸ್ಪಂದನ ತಮ್ಮ ನಿರ್ಧಾರದಿಂದ ಹಿಂದೆ ಸರಿತ್ತಾರಾ(?) ಮುಂದೆ ಏನ್​ ಮಾಡ್ತಾರೆ ಕಾದು ನೋಡಬೇಕು.

Next Story

RELATED STORIES