Top

ಹಣದ ಹೊಳೆ ಹರಿಸಿದ 'ಮುಂಗಾರು ಮಳೆ'ಗೆ 14 ವರ್ಷ

ಆ ದಾಖಲೆ ಮಳೆಯನ್ನ ಇಂದಿಗೂ ಮರೆತ್ತಿಲ್ಲ ಚಿತ್ರರಂಗ

ಹಣದ ಹೊಳೆ ಹರಿಸಿದ ಮುಂಗಾರು ಮಳೆಗೆ 14 ವರ್ಷ
X

ಸರಿಯಾಗಿ 14 ವರ್ಷಗಳ ಹಿಂದೆ ಕುಂತ್ರೂನಿಂತ್ರೂ ಆ ಮಳೆಯದ್ದೇ ಮಾತು. 2006 ಡಿಸೆಂಬರ್ 29ರಂದು ಚಿತ್ರಮಂದಿರಗಳಲ್ಲಿ ಮುಂಗಾರು ಮಳೆ ಸುರಿಯೋಕೆ ಪ್ರಾರಂಭವಾಯ್ತು. ನೋಡ ನೋಡುತ್ತಲೇ ಮಳೆಯ ಅಬ್ಬರ ಹೆಚ್ಚಾಗಿ ಕನ್ನಡ ಚಿತ್ರರಂಗದ ಎಲ್ಲಾ ದಾಖಲೆಗಳು ಕೊಚ್ಚಿ ಹೋಗಿತ್ತು. ಆ ಒಂದು ಮಳೆ ಹಲವರ ಬದುಕನ್ನ ಹಸನಾಗಿಸಿತ್ತು.

ಮುಂಗಾರು ಮಳೆ. ಈ ಹೆಸರು ಕಿವಿಮೇಲೆ ಬಿದ್ರೆ ಸಾಕು ಕನ್ನಡ ಚಿತ್ರರಸಿಕರು ಅಲರ್ಟ್ ಆಗ್ತಾರೆ. ಪ್ರೀತಂ, ನಂದಿನಿ, ರಾಸ್ಕೆಲ್ ದೇವದಾಸ್​​​, ಜೋಗ್ ಜಲಪಾತ, ಒಂದೇ ಸಮನೆ ಸುರಿಯೋ ಮಳೆ ಎಲ್ಲ ಕಣ್ಮುಂದೆ ಬರುತ್ತೆ. ಅಬ್ಬಬ್ಬಾ ಆ ಹಾಡುಗಳನ್ನಂತೂ ಇಂದಿಗೂ ಯಾರು ಮರೆತ್ತಿಲ್ಲ.

ಮುಂಗಾರು ಮಳೆ, ಕನ್ನಡ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಸಿನಿಮಾ. ಇವತ್ತಿಗೆ ಸರಿಯಾಗಿ 14 ವರ್ಷಗಳ ಹಿಂದೆ ಯಾವುದೇ ನಿರೀಕ್ಷೆ ಇಲ್ಲದೇ ತೆರೆಗೆ ಬಂದ ಸಿನಿಮಾ. ಮೊದಲ ವಾರ ಚಿತ್ರಮಂದಿರಗಳು ಖಾಲಿಯಾಗಿದ್ವು. ನಿಧಾನಕ್ಕೆ ಮಳೆಯ ಹನಿಗಳ ರಭಸ ಜೋರಾಗಿತ್ತು. ಮುಂದೆ ಪ್ರೇಕ್ಷಕರೇ ಪ್ರಚಾರ ಮಾಡಿ ಈ ಸಿನಿಮಾವನ್ನ ದೊಡ್ಡ ಮಟ್ಟದಲ್ಲಿ ಗೆಲ್ಲಿಸಿಬಿಟ್ರು. ಚಿತ್ರರಂಗದಲ್ಲಿ ಗಣೇಶ್ ಮತ್ತು ಯೋಗರಾಜ್​ ಭಟ್ ಅವರಿಗೆ ಲೈಫ್​ ಕೊಟ್ಟ ಸಿನಿಮಾ ಇದು.

ಮೊದಲ ನೋಟದಲ್ಲೇ ನಾಯಕಿಯನ್ನ ನೋಡಿ ಪ್ರೀತಿಲಿ ಬೀಳೋ ಹುಡುಗ ಪ್ರೀತಂ. ತಂದೆಯ ಸ್ನೇಹಿತನ ಮಗಳ ಮದುವೆಗಂತ ಮಡಿಕೇರಿಗೆ ಹೋಗ್ತಾನೆ. ಸೀನ್ ಕಟ್ ಮಾಡಿದ್ರೆ, ತಾನು ಇಷ್ಟಪಟ್ಟ ಅದೇ ನಂದಿನಿಯ ಮದುವೆ ಅದು. ಅದಾಗಲೇ ನಂದಿನಿಗೆ ಬೇರೊಬ್ಬನ ಜೊತೆ ಮದ್ವೆ ಫಿಕ್ಸ್​ ಆಗೋಗಿರತ್ತೆ. ನಿಶ್ಚಿತಾರ್ಥ ಆಗಿರೋ ಹುಡುಗಿ ಜೊತೆ ಪ್ರೀತಂ ಪ್ರೀತಿ ಮುಂದುವರೆಯುತ್ತೆ. ನಂದಿನಿ ಕೂಡ ತನಗೇ ಅರಿವಿಲ್ಲದೇ ಪ್ರೀತಂ ಪ್ರೀತಿಗೆ ಮರುಳಾಗಿ ಬಿಡ್ತಾಳೆ. ಆದರೆ, ಸಣ್ಣ ಟ್ವಿಸ್ಟ್ ಇಟ್ಟು 'ಪ್ರೀತಿ ಮಧುರ ತ್ಯಾಗ ಅಮರ' ಅನ್ನೋ ಎಂಡ್ ಕಾರ್ಡ್​ ಸ್ಕ್ರೀನ್​ ಮೇಲೆ ಬರುತ್ತೆ.

ಇಂತಹ ಪ್ರೀತಂ-ನಂದಿನಿ ಪ್ರೇಮಕಥೆಯನ್ನ ಸೊಗಸಾಗಿ ಕಟ್ಟಿಕೊಟ್ಟು ಯೋಗರಾಜ್ ಭಟ್ ಅಂಡ್ ಟೀಮ್ ಸಕ್ಸಸ್ ಕಂಡಿತ್ತು. ಸಿಂಪಲ್​ ಕಥೆಗೆ ಭರ್ಜರಿ ಟ್ರೀಟ್​ಮೆಂಟ್​ ಕೊಟ್ಟು ಅದ್ಭುತ ಸಿನಿಮಾ ಮಾಡಿತ್ತು ಚಿತ್ರತಂಡ. ಭರ್ಜರಿ ಸ್ಕ್ರೀನ್​ ಪ್ಲೇ, ಅದ್ಭುತ ಕ್ಯಾಮರಾ ವರ್ಕ್​. ಅತ್ಯದ್ಭುತ ಸಾಂಗ್ಸ್, ಕಲಾವಿದರ ಸೊಗಸಾದ ಅಭಿನಯ. ಹೀಗೆ ಎಲ್ಲಾ ವಿಭಾಗದಲ್ಲೂ ದಿ ಬೆಸ್ಟ್​ ಅನ್ನಿಸಿಕೊಂಡ ಮುಂಗಾರು ಮಳೆ ಬಾಕ್ಸಾಫೀಸ್​ನಲ್ಲಿ ದಾಖಲೆ ಬರೆದಿತ್ತು. ಸಿನಿಮಾದಲ್ಲಿ ಕೆಲಸ ಮಾಡಿದ ಕಲಾವಿದರು, ತಂತ್ರಜ್ಞರ ನಸೀಬು ಬದಲಾಗಿಬಿಡ್ತು.

ಗಣೇಶ್​ ಬಿಟ್ರೆ, ಮತ್ಯಾರಿಂದಲೂ ಆ ಪಾತ್ರ ಮಾಡೋಕೆ ಸಾಧ್ಯವೇ ಇಲ್ಲ ಅನ್ನುವಂತೆ ಪ್ರೀತಂ ಆಗಿ ಮಿಂಚಿದ್ರು ಗಣೇಶ್​​. ಆರಂಭದಿಂದ ಕೊನೆಯವರೆಗೂ ನಗಿಸುತ್ತೇ ಹೋಗೋ ಗಣಿ, ಕ್ಲೈಮ್ಯಾಕ್ಸ್​ನಲ್ಲಿ ನೋಡುಗರ ಕಣ್ಣಾಲಿಗಳಲ್ಲಿ ನೀರು ಜಿನುಗುವಂತೆ ಮಾಡಿಬಿಟ್ಟಿದರು.

ಅಚ್ಚರಿ ಅನ್ನಿಸಿದರು, ಇದು ನಿಜ. ಅವತ್ತಿನ ಕಾಲಕ್ಕೆ ಕೇವಲ 1.5 ಕೋಟಿ ಬಂಡವಾಳದಲ್ಲಿ ನಿರ್ಮಾಣವಾಗಿದ್ದ ಮುಂಗಾರು ಮಳೆ ಸಿನಿಮಾ ಅಂದಾಜು 75 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಇಡೀ ಭಾರತೀಯ ಚಿತ್ರರಂಗ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಮುಂಗಾರು ಮಳೆ. ಕನ್ನಡ ಚಿತ್ರರಂಗದ ಇತಿಹಾಸವನ್ನ ಮುಂಗಾರು ಮಳೆ ಚಿತ್ರಕ್ಕೂ ಮುನ್ನ , ಮುಂಗಾರು ಮಳೆ ನಂತರ ಅಂತ ವಿಭಾಗಿಸಿ ಹೇಳಬಹುದು. ಅಷ್ಟರಮಟ್ಟಿಗೆ ಈ ಸಿನಿಮಾ ಸದ್ದು ಮಾಡಿತ್ತು.

ಮುಂಗಾರು ಮಳೆ ಚಿತ್ರದ ಪ್ರತಿ ಪಾತ್ರ ಸೂಪರ್ ಹಿಟ್ ಆಗಿತ್ತು. ದೇವದಾಸ್ ಅನ್ನೋ ಮೊಲದ ಪಾತ್ರ ಚಿತ್ರದ ಹೈಲೆಟ್. ಪ್ರೀತಂ, ನಂದಿನಿ ಬಿಟ್ರೆ, ಹೆಚ್ಚು ಸಿನಿಮಾದಲ್ಲಿ ಹೆಚ್ಚು ಸ್ಕ್ರೀನ್​ ಸ್ಪೇಸ್ ಸಿಕ್ಕಿದ್ದು ಇದೇ ದೇವದಾಸನಿಗೆ..

ಮುಂಗಾರು ಮಳೆಯ ಹದಿನಾಲ್ಕು ವರ್ಷದ ಸಂಭ್ರಮದ ಕುರಿತು ಗೋಲ್ಡನ್​ ಸ್ಟಾರ್ ಗಣೇಶ್ ಸಂತಹ ಹಂಚಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರೋ ಗಣೇಶ್,​ ಚಿತ್ರಕಷ್ಟೆಯಲ್ಲದೆ ನಮಗಿಬ್ಬರಿಗೂ ಇಂದು ಹುಟ್ಟುಹಬ್ಬ. ಕೆಲಸ ಕಲಿಸಿದ, ಬದುಕು ಕೊಟ್ಟ, ಪ್ರೀತಿ ತಿಳಿಸಿದ, ನಾಡು ನಲಿಸಿದ ಈ ಮಹಾನ್ ಚಿತ್ರಕ್ಕೆ ದೀರ್ಘದಂಡ ನಮಸ್ಕಾರ ಅಂತ ಗಣೇಶ್​ ಖುಷಿ ಹಂಚಿಕೊಂಡಿದ್ದಾರೆ.

ಇನ್ನು ಮುಂಗಾರು ಮಳೆಯನ್ನ ಸೃಷ್ಟಿಸಿದ್ದ ಯೋಗರಾಜ್​​​ ಭಟ್​ ಕೂಡ ಸಂತಸ ಹಂಚಿಕೊಂಡಿದ್ದಾರೆ. ನೆನಪು ಮಾಡಿದಷ್ಟು ಸಂತಸ ಜಾಸ್ತಿ..ಹ್ಯಾಪಿ ಹುಟ್ಟಿದ ಹಬ್ಬ, ಚಿತ್ರಕ್ಕೆ ನಾಡಿಗೆ, ನಮಗೆ, ನಿಮಗೆಲ್ಲ ಸದಾ ಶುಭವಾಗಲಿ ಅಂತ ಯೋಗರಾಜ್ ಭಟ್​ ತಮ್ಮ ಫೇಸ್​ಬುಕ್​​ನಲ್ಲಿ ಬರೆದುಕೊಂಡಿದ್ದಾರೆ.

ಆರಂಭದಿಂದ ಕೊನೆವರೆಗೂ ಹಲವು ಸಮಸ್ಯೆಗಳ ನಡುವೆಯೇ ಮಾಡಿದ ಸಿನಿಮಾ , ಕೊನೆಗೂ ಗೆಲುವಿನ ನಗೆಬೀರಿತ್ತು.. ಈ. ಕೃಷ್ಣಪ್ಪ ನಿರ್ಮಾಣದ ಮುಂಗಾರು ಮಳೆ ಸಿನಿಮಾ ಮಲ್ಟಿಫ್ಲೆಕ್ಸ್ ಗಳಲ್ಲಿ ಸತತವಾಗಿ ಒಂದು ವರ್ಷ ಪ್ರದರ್ಶನ ಕಂಡು ದಾಖಲೆಯನ್ನು ಬರೆಯಿತು.. ಸಿಂಗಲ್ ಸ್ಕ್ರೀನ್​​ ಥಿಯೇಟರ್​ನಲ್ಲಿ 865 ದಿನಗಳ ಪ್ರದರ್ಶನ ಕಂಡು ಬಾಕ್ಸಾಫೀಸ್​ ಶೇಕ್ ಮಾಡಿತ್ತು.

ಮುಂಗಾರು ಮಳೆ ಚಿತ್ರದ ಪ್ಲಸ್ ಪಾಯಿಂಟ್ ಅಂದ್ರೆ, ಅದು ಕ್ಯಾಮರಾ ವರ್ಕ್. ರೈನ್​ ಎಫೆಕ್ಟ್​ನಲ್ಲೇ ಬಹುತೇಕ ಸಿನಿಮಾ ಚಿತ್ರೀಕರಣ ಮಾಡಲಾಗಿತ್ತು. ಎಸ್​. ಕೃಷ್ಣ ಛಾಯಾಗ್ರಹಣಕ್ಕೆ ಎಲ್ಲರೂ ಬೆರಗಾಗಿದ್ರು.. ಇನ್ನು ಜೋಗಜಲಪಾತವನ್ನ ತೋರಿಸಿದ್ದ ಪರಿಗೆ ಪರಭಾಷಿಕರು ಫಿದಾ ಆಗೋಗಿದರು. ಈ ಸಿನಿಮಾ ನೋಡಿದ್ಮೇಲೆ ಜೋಗ್ ಜಲಪಾತಕ್ಕೆ ಬರೋ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಮುಂಗಾರು ಮಳೆ ಸಿನಿಮಾ ಬಗ್ಗೆ ಹೇಳುವಾಗ ಮನೋಮೂರ್ತಿ ಮ್ಯೂಸಿಕ್​ನ ಮರೆಯುವಂತಿಲ್ಲ. ಜಯಂತ್ ಕಾಯ್ಕಿಣಿ, ಹೃದಯ ಶಿವ, ಕವಿರಾಜ್, ಯೋಗರಾಜ್​ ಭಟ್ ಸಾಹಿತ್ಯ ಬರೆದಿದ್ದ ಮುಂಗಾರು ಮಳೆ ಹಾಡುಗಳನ್ನ ಕನ್ನಡ ಚಿತ್ರರಸಿಕರು ಅದೆಷ್ಟು ಬಾರಿ ಕೇಳಿದ್ದಾರೋ ಗೊತ್ತಿಲ್ಲ.

14 ವರ್ಷ ಕಳೆದರು ಮುಂಗಾರು ಮಳೆ ಸಿನಿಮಾವನ್ನ ಚಿತ್ರರಂಗ ಮತ್ತು ಚಿತ್ರರಸಿಕರು ಇಂದಿಗೂ ಮರೆತಿಲ್ಲ. ಅಂಥಾದೊಂದು ಸಿನಿಮಾ ಮತ್ತೆ ಬರಲೇಯಿಲ್ಲ. ಬೇರೆ ಭಾಷೆಗೆ ರೀಮೇಕ್ ಆದ್ರೂ, ಕನ್ನಡದಷ್ಟು ಸೌಂಡ್ ಮಾಡ್ಲಿಲ್ಲ. ಆ ಸಿನಿಮಾದಿಂದ ಪ್ರೇರಣೆಗೊಂಡು ಮಾಡಿದ ಸಿನಿಮಾಗಳು ಆ ಮಟ್ಟಿಗೆ ಪ್ರೇಕ್ಷಕರನ್ನ ರಂಜಿಸಲಿಲ್ಲ. ಕನ್ನಡ ಚಿತ್ರರಂಗಕ್ಕೊಂದೇ ಮುಂಗಾರು ಮಳೆ.

Next Story

RELATED STORIES