ಸಿನಿಮಾ ಮಾತ್ರವಲ್ಲ ರಿಯಲ್ ಲೈಫ್ನಲ್ಲೂ ಹೀರೋ ಕಿಚ್ಚ
ಕಿಚ್ಚನಿಂದ ನಡೀತಿದೆ ಸಾಲು ಸಾಲು ಸಮಾಜಮುಖಿ ಕೆಲಸಗಳು..

ಕಿಚ್ಚ ಸುದೀಪ್ ಸಿನಿಮಾಗಳಲ್ಲಿ ಮಾತ್ರ ಹೀರೋ ಅಲ್ಲ. ರಿಯಲ್ ಲೈಫ್ನಲ್ಲೂ ಹೀರೋ ಅನ್ನೋದನ್ನ ಸಾಕಷ್ಟು ಬಾರಿ ಸಾಬೀತು ಮಾಡಿದ್ದಾರೆ. ಸಮಾಜಮುಖಿ ಕೆಲಸಗಳನ್ನ ಮಾಡ್ತಾ ಕಿಚ್ಚ ಮಾದರಿಯಾಗಿದ್ದಾರೆ. ಕಿಚ್ಚ ಚಾರಿಟೇಬಲ್ ಸೊಸೈಟಿ ಮೂಲಕ ನಡಿತಿರೋ ಮಹತ್ಕಾರ್ಯಗಳು ಮುಂದುವರೆಯುತ್ತಲೇ ಇದೆ. ಇದೀಗ ಮತ್ತೊಂದು ಸಮಾಜಮುಖಿ ಕೆಲಸ ಮಾಡಿದ್ದಾರೆ ಕಿಚ್ಚ ಮತ್ತು ತಂಡ.
ಸ್ಯಾಂಡಲ್ ವುಡ್ ಬಾದ್ಶಾ ಕಿಚ್ಚ ಸುದೀಪ್. ನಿಜ ಜೀವನದಲ್ಲಿ ತಮ್ಮ ಕೈಲಾದ ಕೆಲಸಗಳನ್ನ ಮಾಡ್ತಾ, ನೊಂದವರಿಗೆ ಸ್ಪಂದಿಸ್ತಾ, ರಿಯಲ್ ಲೈಫ್ ಹೀರೋ ಅನ್ನಿಸಿಕೊಂಡಿದ್ದಾರೆ ಇದಕ್ಕೆ ಸಾಲು ಸಾಲು ಉದಾಹರಣೆಗಳು ಕಣ್ಣಮುಂದಿವೆ.

ಈಗಾಗಲೇ ಕಿಚ್ಚ ಚಾರಿಟಬಲ್ ಟ್ರಸ್ಟ್ ವತಿಯಿಂದ ಸುದೀಪ್ ಸದ್ದಿಲ್ಲದೇ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದಾರೆ. ಈ ಮೊದಲು ತಿಲಕ್ ನಗರದ ರಿಯಾಜ್ ಎಂಬ ಆಟೋಚಾಲಕನ ಕುಟುಂಬಕ್ಕೆ ಆರ್ಥಿಕವಾಗಿ ನೆರವು ನೀಡಿದರು. ಆರ್ಥಿಕ ಸಂಕಷ್ಟದ ಜೊತೆಗೆ ತಂದೆಯನ್ನು ಕಳೆದುಕೊಂಡಿದ್ದ ಈ ಕುಟುಂಬದಲ್ಲಿ, ಹೆಣ್ಣು ಮಗಳ ಮದುವೆಗೆ ಕಿಚ್ಚ ಚಾರಿಟೇಬಲ್ ಸೊಸೈಟಿಯಿಂದ ನೆರವು ನೀಡಲಾಗಿತ್ತು.
ಅಷ್ಟೇಅಲ್ಲ, ಕಿಚ್ಚ ನಾಲ್ಕು ಸರ್ಕಾರಿ ಶಾಲೆಗಳನ್ನ ಕೂಡ ದತ್ತು ಪಡೆದಿದರು. ಚಿತ್ರದುರ್ಗದ ಒಬನಹಳ್ಳಿ, ಬಗ್ಗನಡು ಹಳ್ಳಿ,ಪರುಶರಾಂಪುರ, ಚಿತ್ರನಾಯಕನ ಹಳ್ಳಿಯ ನಾಲ್ಕು ಶಾಲೆಗಳನ್ನ ದತ್ತು ಪಡೆದು ಸಂಪೂರ್ಣ ಅಭಿವೃದ್ದಿಯ ಜವಾಬ್ದಾರಿಯನ್ನ ವಹಿಸಿಕೊಂಡಿದರು.
ಇಷ್ಟು ಮಾತ್ರವಲ್ದೆ, ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದ ಬಾಲಿಯೊಬ್ಬಳ ಸಂಪೂರ್ಣ ವಿದ್ಯಾಭ್ಯಾಸದ ಖರ್ಚು ಹಾಗೂ ವೃದ್ಧ ದಂಪತಿಯ ಮನೆಗೆ ವಿದ್ಯುತ್ ವ್ಯವಸ್ತೆಯನ್ನ ಕೂಡ ಕಿಚ್ಚ ಚಾರಿಟೇಬಲ್ ಸೊಸೈಟಿ ಕಡೆಯಿಂದ ಮಾಡಲಾಗಿತ್ತು.

ಇನ್ನು ಸರ್ಕಾರಿ ಶಾಲೆಯ 500 ಮಕ್ಕಳಿಗೆ ಶೂ ಮತ್ತು ಯೂನಿಫಾರಂ ವಿತರಣೆ ಮಾಡಿದ್ದು ಹಾಗೂ ಇತ್ತೀಚೆಗೆ ಕಿಚ್ಚ ಚಾರಿಟಬಲ್ ಟ್ರಸ್ಟ್ ನಾಲ್ಕು ವರ್ಷ ಪೂರೈಸಿದ್ದ ಸಂದರ್ಭದಲ್ಲಿ, ಕಿಚ್ಚನ ಅಭಿಮಾನಿಗಳು ಮೂಕಪ್ರಾಣಿಗಳಿಗೆ ಸಹಾಯ ಹಸ್ತ ಚಾಚೋದರ ಮೂಲಕ ನಾಲ್ಕು ವರ್ಷದ ಸಂಭ್ರಮವನ್ನ ಅರ್ಥಪೂರ್ಣವಾಗಿ ಆಚರಿಸಿದರು.
ಇದೆಲ್ಲರ ನಡುವೆ ಇದೀಗ ಮತ್ತೊಂದು ಮಹತ್ಕಾರ್ಯ ಮಾಡಿದ್ದಾರೆ ಕಿಚ್ಚ ಚಾರಿಟೇಬಲ್ ಸೊಸೈಟಿ. ಅದರಂತೆ ಈಗ ನಟ ಸುದೀಪ್ ಶಿವಮೊಗ್ಗದ ಆವಿಗೆ ಎಂಬ ಗ್ರಾಮವನ್ನು ದತ್ತು ಪಡೆದುಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆವಿಗೆ ಗ್ರಾಮವನ್ನ ಅಭಿವೃದ್ದಿ ಮಾಡಿ, ಮಾದರಿ ಗ್ರಾಮವನ್ನಾಗಿಸುವ ಮಹತ್ವಾಕಾಂಕ್ಷೆಯಿಂದ ಕಿಚ್ಚ ಚಾರಿಟೇಬಲ್ ಟ್ರಸ್ಟ್ ಈ ಗ್ರಾಮವನ್ನು ದತ್ತು ಪಡೆದಿದೆ.