ಸಲಗ ಸಿನಿಮಾಗೆ ಶಾಸನ ರಚಿಸಿದ ದುನಿಯಾ ವಿಜಯ್ ಅಭಿಮಾನಿ
ಶತದಿನದ ಶಾಸನ ದುನಿಯಾ ವಿಜಯ್ಗೆ ಗಿಫ್ಟ್

ಸಲಗ ಸಿನಿಮಾ ರಿಲೀಸ್ಗೂ ಮುನ್ನವೇ ಸೆಲೆಬ್ರೇಷನ್ ಶುರುವಾಗಿದೆ. ದುನಿಯಾ ವಿಜಯ್ ಅಭಿಮಾನಿಯೊಬ್ಬರು, ಸಲಗ ಟೀಂಗೆ ವಿಶೇಷ ಉಡುಗೊರೆಯೊಂದನ್ನ ಕೊಟ್ಟಿದ್ದಾರೆ. ಅಭಿಮಾನಿಯ ಅಭಿಮಾನಕ್ಕೆ ವಿಜಿ ಫುಲ್ಖುಷ್ ಆಗಿದ್ದಾರೆ.
ಸಲಗ ಸಿನಿಮಾ ಸೆಟ್ಟೆರಿದಾಗಿನಿಂದಲೂ ಒಂದಲ್ಲಾ ಒಂದು ವಿಚಾರದಲ್ಲಿ ಸುದ್ದಿಯಾಗ್ತಾನೇ ಬಂದಿದೆ. ಫಸ್ಟ್ಲುಕ್, ಟ್ರೈಲರ್, ಹಾಡುಗಳು ಈಗಾಗಲೇ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸಿದೆ. ಅದರಲ್ಲೂ ಸೂರಿ ಅಣ್ ಮತ್ತು ಮಳೆಯೇ ಮಳೆಯೇ ಹಾಡು ಹೊಸ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ದುನಿಯಾ ವಿಜಯ್ ನಾಯಕನಾಗಿ ನಟಿಸಿ ನಿರ್ದೇಶನ ಮಾಡುತ್ತಿರುವ ಬಹುನೀರಿಕ್ಷಿತ ಚಿತ್ರ ಸಲಗ ಇದೀಗ ಮತ್ತೊಂದು ವಿಚಾರದಲ್ಲಿ ಸದ್ದು ಮಾಡುತ್ತಿದೆ.
ಸ್ಯಾಂಡಲ್ವುಡ್ನ ಮೋಸ್ಟ್ ಎಕ್ಸ್ಪೆಕ್ಟೆಡ್ ಚಿತ್ರ ಸಲಗ ಬಿಡುಗಡೆಗೂ ಮುನ್ನವೇ ಹೊಸ ದಾಖಲೆ ಸೃಷ್ಟಿಸಿದೆ. ಚಂದನವನದ ಇತಿಹಾಸದಲ್ಲೇ ಮೊದಲ ಬಾರಿಗೆ ಅಭಿಮಾನಿಯೊಬ್ಬರು ಸಲಗ ಚಿತ್ರಕ್ಕೆ ಶಾಸನವನ್ನು ರಚಿಸಿದ್ದಾರೆ. ರಾಜರ ಕಾಲದಲ್ಲಿ ನಿರ್ಮಾಣವಾಗುತ್ತಿದ್ದ ಶಿಲಾ ಶಾಸನದ ರೂಪದಲ್ಲಿಯೇ ಸಿನಿಮಾ ಕುರಿತು ಶಾಸನ ರಚಿಸಲಾಗಿದೆ. ಶಾಸನದಲ್ಲಿ ಸಿನಿಮಾ ಶತದಿನದ ಸಂಭ್ರಮದ ಕುರಿತು ಬರೆಯಲಾಗಿದೆ. ದುನಿಯಾ ವಿಜಯ್ ಅಭಿಮಾನಿ ಈ ಶಾಸನ ರೂಪದ ಸ್ತಬ್ಧ ಚಿತ್ರವನ್ನು ವಿನ್ಯಾಸಗೊಳಿಸಿದ್ದಾರೆ. ಈ ಶಾಸನ ಸೇಮ್ ಟು ಸೇಮ್ ಶಿಲಾಶಾಸನದಂತೆಯೇ ಕಾಣಿಸುತ್ತಿದೆ.
ದುನಿಯಾ ವಿಜಯ್ ಅವರ ಅಭಿಯಾಗಿರುವ ವೀರೇಶ್ ಆಚಾರಿ ಇಂತಹದೊಂದು ಸುಂದರವಾದ ಶಾಸನವನ್ನು ತಮ್ಮ ಕಲಾಕುಂಚದಲ್ಲಿ ರಚಿಸಿದ್ದಾರೆ. ಇದನ್ನು ಚಿತ್ರತಂಡಕ್ಕೆ ಉಡುಗೊರೆಯಾಗಿ ನೀಡಿದ್ದಾರೆ. ಈ ಅಭಿಮಾನದ ಉಡುಗೊರೆಯನ್ನು ನೋಡಿ ಚಿತ್ರತಂಡ ಫುಲ್ಖುಷ್ ಆಗಿದೆ. ದುನಿಯಾ ವಿಜಯ್ ಕುತೂಹಲದಿಂದಲೇ ಈ ಶಾಸನವನ್ನು ಅನಾವರಣಗೊಳಿಸಿದ್ದಾರೆ.
ಸಲಗ ಸಿನಿಮಾ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸುತ್ತಲೇ ಹೋಗುತ್ತಿದೆ. ಅದಕ್ಕೆ ಕಾರಣ ಹತ್ತು ಹಲವಾರಿದೆ. ದುನಿಯಾ ವಿಜಯ್ ಇದೇ ಮೊದಲ ಬಾರಿ ಡೈರೆಕ್ಟರ್ ಕ್ಯಾಪ್ ತೊಟ್ಟು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಡಾಲಿ ಧನಂಜಯ್ ಹಾಗೂ ದುನಿಯಾ ವಿಜಯ್ ಜೊತೆಯಾಗಿ ನಟಿಸುತ್ತಿರುವುದು ಈ ಚಿತ್ರಕ್ಕೆ ಮತ್ತಷ್ಟು ಹೈಪ್ ಕೊಟ್ಟಿದೆ. ಇವರಿಬ್ಬರ ಜೋಡಿ ನೋಡಲು ಅಭಿಮಾನಿಗಳು ಕಾತುರರಾಗಿದ್ದು, ದುನಿಯಾ ವಿಜಿ ಎದುರು ಪೊಲೀಸ್ ಅಧಿಕಾರಿಯಾಗಿ ಡಾಲಿ ಪಾತ್ರ ಹೇಗೆ ಮೂಡಿಬರಲಿದೆ ಎಂಬ ಕುತೂಹಲ ಕೂಡ ಮೂಡಿದೆ.
ಇನ್ನು ಮ್ಯೂಸಿಕ್, ಈ ಚಿತ್ರದ ಮೇಲೆ ಮತ್ತಷ್ಟು ನಿರೀಕ್ಷೆ ಹುಟ್ಟಲು ಕಾರಣವಾಗಿದೆ. ಸಲಗ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದು, ಈಗಾಗಲೇ ಸೂರಿ ಅಣ್ಣ ಸಾಂಗ್ ಸಖತ್ ವೈರಲ್ ಆಗಿದೆ. ಮಳೆಯೇ ಮಳೆಯೆ ಹಾಡು ಕೂಡ ಸೂಪರ್ ಹಿಟ್ ಆಗಿದೆ. ಕಳೆದ ವರ್ಷಕ್ಕೆ ಆರಂಭವಾಗಿದ್ದ ಸಿನಿಮಾ ಕೊರೋನಾ ಹಿನ್ನೆಲೆ ಶೂಟಿಂಗ್ ಸ್ಥಗಿತಗೊಳಿಸಿತ್ತು. ಲಾಕ್ಡೌನ್ ಬಳಿಕ ಮುನ್ನೆಚ್ಚರಿಕಾ ಕ್ರಮದೊಂದಿಗೆ ಚಿತ್ರೀಕರಣ ಮುಂದುವರೆಸಲಾಯಿತು. ಇದೀಗ ಸಲಗ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು. ಯಾವಗ ಬಿಡುಗಡೆಯಾಗುತ್ತೆ ಅಂತ ಅಭಿಮಾನಿಗಳು ಕಾದು ಕುಳಿತಿದ್ದಾರೆ.