Top

ಕನ್ನಡದ ಸೂಪರ್​ ಹಿಟ್​ ಕಥೆಗಳಿಗೆ ಸಿಕ್ಕಾಪಟ್ಟೆ​ ಡಿಮ್ಯಾಂಡ್​

  • ರೀಮೇಕ್​ ರೈಟ್ಸ್​ಗೆ ಮುಗಿಬಿದ್ದ ಪರಭಾಷಾ ಫಿಲ್ಮ್​ ಮೇಕರ್ಸ್.
  • ಕನ್ನಡದ ಸಣ್ಣ ಸಣ್ಣ ಸಿನಿಮಾಗಳು ಈಗ ತೆಲುಗು, ತಮಿಳು, ಹಿಂದಿಗೆ ರೀಮೇಕ್​ ಆಗ್ತಿರೋದು ವಿಶೇಷ.

ಕನ್ನಡದ ಸೂಪರ್​ ಹಿಟ್​ ಕಥೆಗಳಿಗೆ ಸಿಕ್ಕಾಪಟ್ಟೆ​ ಡಿಮ್ಯಾಂಡ್​
X

ಸ್ಯಾಂಡಲ್​ವುಡ್​ನಲ್ಲಿ ರೀಮೇಕ್​ ಹಾವಳಿ ಜಾಸ್ತಿ ಅನ್ನೋ ಮಾತುಗಳು ಕೆಲ ವರ್ಷಗಳ ಹಿಂದೆ ಕೇಳಿಬರ್ತಿತ್ತು. ಆದ್ರೀಗ ಕನ್ನಡ ಸಿನಿಮಾಗಳೇ ಅಕ್ಕಪಕ್ಕದ ಇಂಡಸ್ಟ್ರಿಗಳಲ್ಲಿ ಸೌಂಡ್​ ಮಾಡುತ್ತಿವೆ. ಕನ್ನಡದ ಸೂಪರ್​ ಹಿಟ್​ ಸಿನಿಮಾ ಕಥೆಗಳಿಗೆ ಬಾಲಿವುಡ್​, ಕಾಲಿವುಡ್​, ಟಾಲಿವುಡ್​ನಲ್ಲಿ ಬೇಡಿಕೆ ಜೋರಾಗಿದೆ. ಒಂದರ ಹಿಂದೊಂದರಂತೆ ಕನ್ನಡ ಸಿನಿಮಾಗಳು ಬೇರೇ ಭಾಷೆಗೆ ರೀಮೇಕ್​ ಆಗಲು ತುದಿಗಾಲಲ್ಲಿ ನಿಂತಿವೆ.

ಲಾಕ್​ಡೌನ್​ ಸಮಯದಲ್ಲೂ ಕನ್ನಡ ಸಿನಿಮಾಗಳು ಜೋರಾಗಿ ಸದ್ದು ಮಾಡುತ್ತಿವೆ. ಥಿಯೇಟರ್​ ಬಾಗಿಲು ಮುಚ್ಚಿದ್ರು, ಇನ್ನುಳಿದ ಸಿನಿಮಾ ಚಟುವಟಿಕೆಗಳು ಜೋರಾಗೇ ನಡೀತಿದೆ. ಹೊಸ ಹೊಸ ಸಿನಿಮಾಗಳ ಸುದ್ದಿ ಬರ್ತಿದೆ. ಕನ್ನಡ ಸಿನಿಮಾಗಳು ಈಗ ಬೇರೆ ಭಾಷೆಗೆ ರೀಮೇಕ್​ ಆಗುತ್ತಿದೆ. ಪ್ಯಾನ್​ ಇಂಡಿಯಾ ಸಿನಿಮಾ ಜಮಾನದ ನಡುವೆ ಸ್ಯಾಂಡಲ್​ವುಡ್​​ ಸಿನಿಮಾಗಳು ಪರಭಾಷಾ ಫಿಲ್ಮ್​​ ಮೇಕರ್ಸ್​​ ಗಮನ ಸೆಳೀತಿವೆ.

ಸ್ಟಾರ್​ಗಳ ಹಿಟ್​ ಸಿನಿಮಾಗಳನ್ನ ಮಾತ್ರ ಬೇರೆ ಭಾಷೆಗೆ ರೀಮೇಕ್​ ಮಾಡುವ ಕಾಲವೊಂದಿತ್ತು. ಆದ್ರೀಗ ಕಂಟೆಂಟ್​ ಇಂಪಾರ್ಟೆಂಟ್ ಆಗಿಬಿಟ್ಟಿದೆ. ಸಣ್ಣ ಸಿನಿಮಾಗಳು ಕೂಡ ಈಗ ಬೇರೆ ಭಾಷಿಕರನ್ನ ಸೆಳೆಯುತ್ತಿದೆ. ಕನ್ನಡದ ಸಣ್ಣ ಸಣ್ಣ ಸಿನಿಮಾಗಳು ಈಗ ತೆಲುಗು, ತಮಿಳು, ಹಿಂದಿಗೆ ರೀಮೇಕ್​ ಆಗ್ತಿರೋದು ವಿಶೇಷ. ಈಗಾಗಲೇ ಟಗರು, ಮಫ್ತಿ ಸಿನಿಮಾ ತಮಿಳಿಗೆ ರೀಮೇಕ್​ ಆಗ್ತಿದ್ರೆ, ಲವ್​ ಮಾಕ್ಟೇಲ್​ ತೆಲುಗಿನಲ್ಲಿ ರೀಮೇಕ್​ ಆಗ್ತಿರೋದು ಗೊತ್ತೇಯಿದೆ.

2 ವರ್ಷಗಳ ಹಿಂದೆ ದಯಾಳ ಪದ್ಮನಾಭನ್​ ನಿರ್ದೇಶನದಲ್ಲಿ ಬಂದ ಸಸ್ಪೆನ್ಸ್​ ಥ್ರಿಲ್ಲರ್​ ಸಿನಿಮಾ 'ಆ ಕರಾಳ ರಾತ್ರಿ'. ಜೆಕೆ, ಅನುಪಮಾ ಗೌಡ, ರಂಗಾಯಣ ರಘು, ವೀಣಾ ಸುಂದರ್​,ನವೀನ್​ ಕೃಷ್ಣ ಅಭಿನಯದ ಸಿನಿಮಾ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಅತ್ಯುತ್ತಮ ಸಿನಿಮಾ ಮತ್ತು ನಿರ್ದೇಶನ ವಿಭಾಗದಲ್ಲಿ ಚಿತ್ರಕ್ಕೆ ಎರಡು ರಾಜ್ಯ ಪ್ರಶಸ್ತಿ ಕೂಡ ಸಿಕ್ಕಿತ್ತು. ಇದೀಗ ಈ ಚಿತ್ರವನ್ನ ಸ್ವತಃ ದಯಾಳ್​ ಪದ್ಮನಾಭನ್​ ತೆಲುಗು ತಮಿಳಿಗೆ ರೀಮೇಕ್​ ಮಾಡುತ್ತಿದ್ದಾರೆ. ವಿಶೇಷ ಅಂದ್ರೆ, ತೆಲುಗು ಚಿತ್ರಕ್ಕೆ ಅಲ್ಲು ಅರವಿಂದ್​ ಬಂಡವಾಳ ಹಾಕಿದ್ರೆ, ರಮೇಶ ಪಿಳ್ಳೈ ತಮಿಳು ಸಿನಿಮಾ ಜವಾಬ್ದಾರಿ ವಹಿಸಿಕೊಂಡಿದ್ದಾರೆ.


ಇದು ಆ ಕರಾಳ ರಾತ್ರಿ ಕಥೆಯಾದ್ರೆ, ಪುನೀತ್​ ರಾಜ್​ಕುಮಾರ್​ ನಿರ್ಮಾಣದ ಮಾಯಾಬಜಾರ್​ ಸಿನಿಮಾವನ್ನ ತಮಿಳಿಗೆ ರೀಮೇಕ್​ ಮಾಡಲಾಗುತ್ತಿದೆ. ತಮಿಳು ನಿರ್ದೇಶಕ ಸುಂದರ್​. ಸಿ ರೀಮೇಕ್​ ರೈಟ್ಸ್​​ ಖರೀದಿಸಿದ್ದಾರಂತೆ. ಪಿಆರ್​ಕೆ ಪ್ರೊಡಕ್ಷನ್ಸ್​ ಬ್ಯಾನರ್​ನಲ್ಲಿ ಬಂದಿರುವ ಕವಲುದಾರಿ ಸಿನಿಮಾ ಕೂಡ ತಮಿಳಿಗೆ ರೀಮೇಕ್​ ಆಗ್ತಿದ್ದು, ಅದೇ ಸಾಲಿಗೆ ಮಾಯಾಬಜಾರ್​ ಕೂಡ ಸೇರಿ ಕೊಳ್ತಿದೆ.

ಶ್ರೀನಿ ನಿರ್ದೇಶಿಸಿ ನಟಿಸಿದ್ದ ಸಿನಿಮಾ ಬೀರ್​ಬಲ್​. ಕಳೆದ ವರ್ಷ ರಿಲೀಸ್​ ಆಗಿ ಸಕ್ಸಸ್​ ಕಂಡಿದ್ದ ಈ ಸಸ್ಪೆನ್ಸ್​ ಥ್ರಿಲ್ಲರ್​ ಸಿನಿಮಾ ಈಗ ತೆಲುಗಿಗೆ ರೀಮೇಕ್​ ಆಗುತ್ತಿದೆ. ಲವ್​ ಮಾಕ್ಟೇಲ್​ ತೆಲುಗು ರೀಮೇಕ್​ನಲ್ಲಿ ನಟಿಸ್ತಿರೋ ಸತ್ಯದೇವ್, ಈ ಚಿತ್ರದಲ್ಲೂ ನಟಿಸಲಿದ್ದಾರೆ. ತಿಮ್ಮರಸು ಹೆಸರಿನಲ್ಲಿ ಸಿನಿಮಾ ಪೋಸ್ಟರ್​ ಕೂಡ ರಿವೀಲ್​ ಆಗಿದೆ. ಶೀಘ್ರದಲ್ಲೇ ತಮಿಳಿಗೂ ಬೀರ್​ಬಲ್​ ರೀಮೇಕ್​ ಆಗಲಿದೆ.

ಆ ಕರಾಳ ರಾತ್ರಿ, ಮಾಯಾಬಜಾರ್​, ಬೀರ್​ಬಲ್​ ಸಿನಿಮಾಗಳು ತೆಲುಗು ತಮಿಳಿಗೆ ರೀಮೇಕ್​ ಆಗುತ್ತಿದ್ರೆ, ತುಪ್ಪದ ಹುಡುಗಿ ರಾಗಿಣಿ ಅಭಿನಯಿಸಿದ್ದ ದಿ ಟೆರರಿಸ್ಟ್​ ಸಿನಿಮಾ ಏಕ್​ದಮ್​ ಹಿಂದಿಗೆ ರೀಮೇಕ್ ಅಗುತ್ತಿದೆ. ಈ ವಿಚಾರವನ್ನ ಖುದ್ದು ಸಿನಿಮಾ ನಿರ್ದೇಶಕರಾದ ಪಿ.ಸಿ ಶೇಖರ್​ ಟ್ವೀಟ್​ ಮಾಡಿ ತಿಳಿಸಿದ್ದಾರೆ. ಕ್ರೈಮ್​ ಥ್ರಿಲ್ಲರ್​ 'ದಿ ಟೆರರಿಸ್ಟ್' ಹಿಂದಿ ರೀಮೇಕ್ ರೈಟ್ಸ್​ ವಿಶಾಲ್​ ರಾಣಾ ಪಾಲಾಗಿದೆ. ಸೋನಮ್​ ಕಪೂರ್​ ಅಥವಾ ವಿದ್ಯಾಬಾಲನ್​​ ಇಬರಲ್ಲಿ ಒಬ್ಬರು ರಾಗಿಣಿ ಮಾಡಿದ್ದ ರೇಷ್ಮಾ ಪಾತ್ರವನ್ನ ನಿಭಾಯಿಸಲಿದ್ದಾರೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ.


ಕೊರೊನಾ ಸಂಕಷ್ಟದ ಸಮಯದಲ್ಲೂ ಕನ್ನಡ ಸಿನಿಮಾಗಳು ಅಕ್ಕಪಕ್ಕದ ಇಂಡಸ್ಟ್ರಿ ಮಂದಿ ಗಮನ ಸೆಳೆದು, ರೀಮೇಕ್​ ಆಗುತ್ತಿರೋದು ಸಂತಸದ ವಿಷಯ. ಸಲಗ ಸಿನಿಮಾ ತಮಿಳು ರೀಮೇಕ್​ ರೈಟ್ಸ್​ಗೂ ಬೇಡಿಕೆ ಬಂದಿದೆಯಂತೆ. ಮುಂದೆ ಮತ್ತಷ್ಟು ಸಿನಿಮಾಗಳ ರೀಮೇಕ್​ ರೈಟ್ಸ್​ ಬಗ್ಗೆ ಮಾತುಕತೆ ನಡೀತಿದ್ದು, ಶೀಘ್ರದಲ್ಲೇ ಆ ಬಗ್ಗೆ ಮಾಹಿತಿ ಸಿಗಲಿದೆ.

Next Story

RELATED STORIES