Top

ಸಿನಿಮಾ ರೂಪದಲ್ಲಿ ಬರಲಿದೆ ಸ್ಪಿನ್​ ಮಾಂತ್ರಿಕ ಮುತ್ತಯ್ಯ ಮರುಳಿಧರನ್ ಜೀವನ ಚರಿತ್ರೆ

ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮರುಳಿಧರನ್ ಜೀವನ ಚರಿತ್ರೆ ಬೆಳ್ಳಿ ಪರದೆ ಮೇಲೆ ತರಲು ಸಿದ್ಧತೆ.

ಸಿನಿಮಾ ರೂಪದಲ್ಲಿ ಬರಲಿದೆ ಸ್ಪಿನ್​ ಮಾಂತ್ರಿಕ  ಮುತ್ತಯ್ಯ ಮರುಳಿಧರನ್  ಜೀವನ ಚರಿತ್ರೆ
X

ಬಯೋಪಿಕ್​ ಅಂದಾಕ್ಷಣ ನೆನಪಾಗೋದೇ ಬಾಲಿವುಡ್. ಅದರಲ್ಲೂ ಧೋನಿ, ಸಚಿನ್​, ಕಪಿಲ್​ ದೇವ್, ಹೀಗೆ ಸಾಕಷ್ಟು ಕ್ರಿಕೆಟ್ ದಿಗ್ಗಜರ ಜೀವನ ಚರಿತ್ರೆ ಬಿಟೌನ್​ನಲ್ಲಿ ಸಿನಿಮಾ ರೂಪ ಪಡೆದಿದೆ. ಆದರೆ ಈಗ ಕಾಲಿವುಡ್​ ಕೂಡ ಒಬ್ಬ ಕ್ರಿಕೆಟ್ ದಿಗ್ಗಜನ ಬಯೋಪಿಕ್​ಗೆ ಸಜ್ಜಾಗಿದೆ.

ಮುತ್ತಯ್ಯ ಮರುಳಿಧರನ್ ಕ್ರಿಕೆಟ್ ಲೋಕದ ದಂತಕತೆ. ಕಣ್ಣಲ್ಲೆ ಕೆಣಕಿ. ಕೈಯಲ್ಲಿ ಮೋಡಿ ಮಾಡಿ ವಿಕೆಟ್​ ಉರುಳಿಸುತ್ತಿದ್ದ ಕ್ರಿಕೆಟ್ ಲೋಕದ ಜಾದುಗಾರ. ಮುತ್ತಯ್ಯ ಕೈಚಳಕಕ್ಕೆ ಅದೆಂಥಾ ದೈತ್ಯ ದಾಂಡಿಗನಾದ್ರೂ ಔಟಾಗುತ್ತಿದ್ದ. ಮುತ್ತಯ್ಯ ಮುರುಳಿಧರನ್ ಬೌಲಿಂಗ್​​ನಲ್ಲಿ ಅಂತದೊಂದು ಮ್ಯಾಜಿಕ್​​ ಇತ್ತು. ಮುತ್ತಯ್ಯ ಮುರಳೀಧರನ್​ರಂತಹ ಬೌಲರ್ ಹಿಂದೆಂದೂ ಹುಟ್ಟಿಲ್ಲ ಮುಂದೆಯೂ ಹುಟ್ಟಲು ಸಾಧ್ಯವಿಲ್ಲ. ಇದೀಗ ಈ ಸ್ಪಿನ್​​​ ಜಾದೂಗಾರನ ಜೀವನ ಚರಿತ್ರೆ ತೆರೆಮೇಲೆ ಬರಲು ರೆಡಿಯಾಗಿದ್ದಾರೆ.

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, 1983 ವಿಶ್ವಕಪ್ ಹೀರೋ ಕಪಿಲ್ ದೇವ್ ಬಯೋಪಿಕ್​ನ ನಂತರ ಇದೀಗ ವಿಶ್ವ ಕ್ರಿಕೆಟ್ ಕಂಡ, ಮತ್ತೊಬ್ಬ ದಿಗ್ಗಜ ಕ್ರಿಕೆಟ್ ಆಟಗಾರನ ಕಥೆ ತೆರೆಮೇಲೆ ಬರಲು ಸಜ್ಜಾಗಿದೆ. ಕ್ರಿಕೆಟ್​ ಅಂಗಳದಲ್ಲಿ ಮೋಡಿ ಮಾಡಿದ ಸ್ಪಿನ್ ದೈತ್ಯನ ಜೀವನಗಾಥೆಗೆ, ತಮಿಳಿನ ಸೂಪರ್ ಸ್ಟಾರ್ ವಿಜಯ್ ಸೇತುಪತಿ ಜೀವತುಂಬಲಿದ್ದಾರೆ. ಇದೀಗ ಬಹುನಿರೀಕ್ಷೆಯ ಬಯೋಪಿಕ್​​ನ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ.

1 ನಿಮಿಷ 16 ಸೆಕೆಂಡ್​ನ ಈ ಮೋಷನ್ ಪೋಸ್ಟರ್ ಚಿತ್ರಪ್ರಿಯರ ನಿದ್ದೆಗೆಡಿಸಿದೆ. ಮುತ್ತಯ್ಯ ಮುರಳೀಧರನ್ ಕ್ರಿಕೆಟ್ ಬದುಕಿನ ಜೊತೆಗೆ ಶ್ರೀಲಂಕಾದ ಕೆಲವು ವಿದ್ಯಮಾನಗಳ ಬಗ್ಗೆಯೂ ಈ ಬಯೋಪಿಕ್​ನಲ್ಲಿ ಅನಾವರಣ ಮಾಡಲಾಗಿದೆ. ಕ್ರಿಕೆಟಿಗನಾಗಬೇಕೆಂದು ಕನಸು ಕಂಡಿರುವ ಪುಟ್ಟ ಬಾಲಕ ಗಲ್ಲಿ ಕ್ರಿಕೆಟ್​ನಲ್ಲಿ ಮಿಂಚುತ್ತಾ ಸಂಘರ್ಷಗಳ ನಡುವೆಯೂ ಎಲ್ಲವನ್ನು ಮೀರಿ ಶ್ರೀಲಂಕಾದ ಖ್ಯಾತ ಕ್ರಿಕೆಟ್ ಪಟುವಾಗಿ ಹೊರಹೊಮ್ಮಿರುವ ಸಾಹಸದ ಕಥೆಯನ್ನು ಈ ಮೋಷನ್ ಪೋಸ್ಟರ್​ನಲ್ಲಿ ತೋರಿಸಲಾಗಿದೆ. ಈ ಪೋಸ್ಟರ್ ನೋಡಿ,ಮುತ್ತಯ್ಯ ಮುರುಳೀಧರನ್​ ಅಭಿಮಾನಿಗಳು ವಿಜಯ್​ ಸೇತುಪತಿ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ.

ಪೋಷನ್ ಪೋಸ್ಟರ್​​ನಲ್ಲಿ ವಿಜಯ್ ಸೇತುಪತಿ ಫಸ್ಟ್​ಲುಕ್ ರಿವೀಲ್ ಆಗಿದೆ. ವಿಜಯ್ ಸೇತುಪತಿ ಲುಕ್ ಥೇಟ್​ ಮುತ್ತಯ್ಯ ಮುರುಳೀಧರನ್ ಅಂತಯೇ ಕಾಣುತ್ತಿದೆ. ವಿಶೇಷ ಅಂದರೆ ಮುತ್ತಯ್ಯ ಮುರುಳೀಧರನ್ ಬಯೋಪಿಕ್​ನ ಈ ಸಿನಿಮಾಗೆ 800 ಅಂತ ಹೆಸರಿಡಲಾಗಿದೆ. ಇದಕ್ಕೂ ಒಂದು ಕಾರಣ ಇದೆ. ಮುತ್ತಯ್ಯ ಮುರುಳೀಧರನ್ ಒಟ್ಟು 800 ವಿಕೆಟ್​ ಉರುಳಿಸಿ ದಾಖಲೆ ಬರೆದಿದರು. ಅದು ಕೇವಲ ದಾಖಲೆಯಲ್ಲ ಅದೊಂದು ವಿಶ್ವದಾಖಲೆ. ಕ್ರಿಕೆಟ್​ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ದಾಖಲೆ, ಮುತ್ತಯ್ಯ ಮುರುಳೀಧರನ್​ ಹೆಸರಿನಲ್ಲಿದೆ. ಆ ದಾಖಲೆಯಲ್ಲಿ ಟಚ್ ಮಾಡಲು ಇಲ್ಲಿವರೆಗೂ ಯಾರಿಂದಲೂ ಸಾಧ್ಯವಾಗಿಲ್ಲ.

ಘಟಾನುಘಟಿ ಬ್ಯಾಟ್ಸ್​ಮನ್​ಗಳಿಗೆ ಮಣ್ಣುಮುಕ್ಕಿಸಿ, ವಿಕೆಟ್​ಗಳನ್ನು ತರಗೆಲೆಗಳಂತೆ ಉದುರಿಸಿ ವಿಶ್ವದಾಖಲೆಗಳ ಮೇಲೆ ದಾಖಲೆಗಳನ್ನು ಬರೆದಿರುವ ಮುರಳೀಧರನ್ ಹುಟ್ಟಿದ್ದು ತಮಿಳುನಾಡಿನಲ್ಲಿ ಅವರ ಪೂರ್ವಜರು ಕೂಡ ತಮಿಳುನಾಡಿದವರು. ನಂತರ ಅವರ ಕುಟುಂಬ ಶ್ರೀಲಂಕಾಗೆ ತೆರಳಿದರು. ಹೀಗಾಗಿ ಭಾರತಕ್ಕೂ ಮುತ್ತಯ್ಯ ಮುರುಳೀಧರನ್​ಗೂ ಅವಿನಾಭಾವ ಸಂಬಂಧ ಇದೆ. ಇದೇ ಕಾರಣಕ್ಕೆ ತಮಿಳಿನಲ್ಲಿ ಮುತ್ತಯ್ಯ ಮುರುಳೀಧರನ್ ಸಿನಿಮಾ ಸಿದ್ಧವಾಗುತ್ತಿದೆ. ಇನ್ನು ಮುರಳೀಧರನ್ ಮತ್ತು ಸೇತುಪತಿ ಅವರ ಜನಪ್ರಿಯತೆಯಿಂದಾಗಿ, ಈ ಚಿತ್ರವನ್ನು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಹಾಗೂ ಹಿಂದಿ, ಬಂಗಾಳಿ ಮತ್ತು ಸಿಂಹಳೀಯ ಭಾಷೆಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

ವಿಜಯ್​ ಸೇತುಪತಿಗೆ ಈ ಚಿತ್ರ ಮಾಡದಂತೆ ಒತ್ತಾಯ ಕೇಳಿಬಂದಿತ್ತು. ಅದಕ್ಕೆ ಕಾರಣ ಶ್ರೀಲಂಕಾದಲ್ಲಿ ತಮಿಳರಿಗೆ ಅನ್ಯಾಯ ಮಾಡಿದ ಸರ್ಕಾರದ ಪರವಾಗಿ ಮುರುಳೀಧರನ್ ಇದ್ದರು. ಹೀಗಾಗಿ ಈ ಸಿನಿಮಾ ಮಾಡಿದ್ರೆ ತಮಿಳರ ಭಾವನೆಗೆ ಧಕ್ಕೆ ಬಂದಾಗುತ್ತೆ ಅಂತ ವಿರೋಧ ವ್ಯಕ್ತವಾಗಿತ್ತು. ಈ ಎಲ್ಲಾ ವಿರೋಧ ನಡುವೆಯೂ ಸೇತುಪತಿ 800 ಚಿತ್ರಕ್ಕೆ ಬಣ್ಣಹಚ್ಚಿದ್ದಾರೆ.

ವಿಜಯ್ ಸೇತುಪತಿ ಹಗಲು ರಾತ್ರಿಯಾಗೋದ್ರೊಳಗೆ ಸ್ಟಾರ್ ಆದವರಲ್ಲ. ಹಲವು ಚಿತ್ರಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳನ್ನು ಮಾಡಿ. ತುಂಬಾ ವರ್ಷ ಚಿತ್ರರಂಗದಲ್ಲಿ ಬೆವರು ಸುರಿಸಿ ಸ್ಟಾರ್ ಪಟ್ಟಗಿಟ್ಟಿಸಿಕೊಂಡುವರು. ಅದರಲ್ಲೂ ಯಾವುದೇ ಪಾತ್ರ ಇದ್ರೂ ಆ ಪಾತ್ರಕ್ಕೆ ವಿಜಯ್​ ಸೇತುಪತಿ ಸೂಟ್ ಆಗ್ತಾರೆ. ಇದೇ ಕಾರಣಕ್ಕೆ ಮುರುಳೀಧರನ್ ಪಾತ್ರಕ್ಕೆ ವಿಜಯ್ ಸೇತುಪತಿಯವರನ್ನು ಆಯ್ಕೆ ಮಾಡಲಾಗಿದೆ.

ಸದ್ಯ ಮುರುಳೀಧರನ್ ಜೀವನ ಚರಿತ್ರೆಯನ್ನು ತೋರಿಸುವ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್​ ಆಗಿನ್. ಕ್ರಿಕೆಟ್​ ಬಗ್ಗೆ ಅಷ್ಟೊಂದು ಗೊತ್ತಿರದ ಸೇತುಪತಿ ಕ್ರಿಕೆಟ್​ ಬಗ್ಗೆ ತಿಳಿದುಕೊಂಡು ಮುರುಳೀಧರನ್​ರಂತೆ ಬೌಲಿಂಗ್ ಮಾಡೋದನ್ನು ಅಭ್ಯಾಸ ಮಾಡುತ್ತಿದ್ದಾರೆ. ಅದೇನೇ ಇರ್ಲಿ ತೆರೆಮೇಲೆ ಮುರುಳೀಧರನ್ ಆಗಿ ಸೇತುಪತಿ ಯಾವ ರೀತಿ ಸ್ಪಿನ್ ಮೋಡಿ ಮಾಡ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.

Next Story

RELATED STORIES