ತೆಲುಗು ಚಿತ್ರರಂಗದ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಸಮಾಧಾನ
ಜನವರಿ 28ರಂದು ನಟ ದರ್ಶನ್ ಅವರು ತೆಲುಗು ಸಿನಿಮಾರಂಗದ ಧೋರಣೆ ವಿರುದ್ಧ ಫಿಲಂ ಛೇಂಬರ್ನಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.

ಬೆಂಗಳೂರು: ತೆಲುಗು ಚಿತ್ರರಂಗದವರ ಧೋರಣೆ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಸಮಾಧಾನಗೊಂಡಿದ್ದು, ಟಾಲಿವುಡ್ನ ಈ ನೀತಿಯ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸುವ ಸಾಧ್ಯತೆಯಿದೆ.
ಕರ್ನಾಟಕದಲ್ಲಿ ತೆಲುಗು ಸೇರಿ ಮತ್ತಿತರ ಪರಭಾಷೆ ಸಿನಿಮಾಗಳು ಬಿಡುಗಡೆ ಆಗಲು ಯಾವುದೇ ನಿಯಮಗಳಾಗಲಿ, ತಕರಾರುಗಳಾಗಲಿ ಇಲ್ಲ. ಆದರೆ, ಕನ್ನಡ ಸಿನಿಮಾಗಳಿಗೆ ತೆಲುಗಿನಲ್ಲಿ ಚಿತ್ರ ಬಿಡುಗಡೆ ಮಾಡಲು ಕೆಲವು ಅಲಿಖಿತ ನಿಯಮಗಳನ್ನು ವಿಧಿಸಲಾಗಿರುವುದು ದರ್ಶನ್ ಆಕ್ರೋಶಕ್ಕೆ ಕಾರಣವಾಗಿದೆ.
ಟಾಲಿವುಡ್ನ ಯಾವುದೇ ಸಿನಿಮಾ ಬಿಡುಗಡೆ ಸಿದ್ಧವಿದ್ದರೆ, ಈ ಸಮಯದಲ್ಲಿ ಕನ್ನಡದ ಯಾವುದಾದರು ಚಿತ್ರಗಳು ಅಲ್ಲಿ ಬಿಡುಗಡೆ ಮಾಡಲು ಪ್ರಯತ್ನಿಸಿದರೆ ಅದಕ್ಕೆ ಅವಕಾಶ ನೀಡಲಾಗುತ್ತಿಲ್ಲ. ತೆಲುಗಿನ ಸಣ್ಣ ಬಜೆಟ್ ಸಿನಿಮಾ ಬಿಡುಗಡೆ ಇದ್ದರೂ ಸಹ ಕನ್ನಡ ಚಿತ್ರಗಳಿಗೆ ಅಡ್ಡಿಪಡಿಸಲಾಗುತ್ತಿದೆ. ಅಲ್ಲದೆ ತೆಲುಗು ಡಬ್ ವರ್ಷನ್ಗಳಿಗೆ ಸಹ ತಡೆಹಿಡಿಯಲಾಗುತ್ತಿದೆ.
ಜನವರಿ 28ರಂದು ನಟ ದರ್ಶನ್ ಅವರು ತೆಲುಗು ಸಿನಿಮಾರಂಗದ ಧೋರಣೆ ವಿರುದ್ಧ ಫಿಲಂ ಛೇಂಬರ್ನಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ರಾಬರ್ಟ್' ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಮಾರ್ಚ್ 11ರಂದು ಬಿಡುಗಡೆ ಆಗಲಿದೆ. ಅದೇ ದಿನ ತೆಲುಗಿನ ಮೂರು ಸಿನಿಮಾಗಳು ತೆರೆಗೆ ಬರಲು ಸಿದ್ಧವಿದೆ. ಹೀಗಾಗಿ 'ರಾಬರ್ಟ್' ಚಿತ್ರ ಬಿಡುಗಡೆಗೆ ತಡೆ ನೀಡಲಾಗಿದೆ ಎಂದು ತಿಳಿದುಬಂದಿದೆ.