Top

ಎರಡು ಜೀಪ್ ನಲ್ಲಿ ಚುನಾವಣೆ ಗೆದ್ದರು..! ವಾಜಪೇಯಿ ಮೊದಲ ಚುನಾವಣೆಯ ರೋಚಕ ಸ್ಟೋರಿ..!

ಎರಡೇ ಜೀಪ್ ಇತ್ತು.. ಒಂದು ಪಕ್ಷದ್ದು.. ಇನ್ನೊಂದು ಬಾಡಿಗೆಯದ್ದು.. ವಾಜಪೇಯಿಯವರ ಮೊದಲ ಚುನಾವಣೆಯ ಇಂಟರೆಸ್ಟಿಂಗ್ ಸ್ಟೋರಿ..!

ಎರಡು ಜೀಪ್ ನಲ್ಲಿ ಚುನಾವಣೆ ಗೆದ್ದರು..! ವಾಜಪೇಯಿ ಮೊದಲ ಚುನಾವಣೆಯ ರೋಚಕ ಸ್ಟೋರಿ..!
X

ಭಾರತೀಯ ರಾಜಕಾರಣ ಎನ್ನುವ ಆಕಾಶಗಂಗೆಯಲ್ಲಿ 5 ದಶಕಗಳ ಕಾಲ ದೇದಿಪ್ಯಮಾನ ನಕ್ಷತ್ರದಂತೆ ಮಿನುಗಿದವರು ಅಟಲ್ ಬಿಹಾರಿ ವಾಜಪೇಯಿ. ಇಂದು ಆ ಮಹಾಪುರುಷನ ಜನ್ಮದಿನ. ಮಾಜಿ ಪ್ರಧಾನಿ ವಾಜಪೇಯಿ ಅವರು ಇಂದು ಬದುಕಿದ್ದರೆ 96ನೇ ಜನ್ಮದನವನ್ನ ಆಚರಿಸಿಕೊಳ್ಳುತ್ತಿದ್ದರು. ಆದರೆ, ಇಂದು ವಾಜಪೇಯಿಯವರು ಕಥೆಗಳಲ್ಲಿ, ಕಹಾನಿಗಳಲ್ಲಿ, ಕವಿತೆಗಳಲ್ಲಿ ಹಾಗೂ ಪೊಲಿಟಿಕಲ್ ಕಾರಿಡಾರ್‌ನಲ್ಲಿ ಸುಳಿದಾಡುತ್ತಿದ್ದಾರೆ. ಏಕೆಂದರೆ 2018 ಆಗಸ್ಟ್ 16ನೇ ತಾರೀಕು ಅಟಲ್ ಜೀ ಕೋಟ್ಯಾನುಕೋಟಿ ಭಾರತೀಯರನ್ನ ಅಗಲಿದರು.

ಅಟಲ್ ಬಿಹಾರಿ ವಾಜಪೇಯಿ ಅವರನ್ನ ಆದರ್ಶ ರಾಜಕಾರಣಿ, ಅಜಾತಶತ್ರು, ಲೋಕಪ್ರಿಯ ನಾಯಕ ಹಾಗೂ ಸಹೃದಯ ಕವಿ ಎಂದು ಬಣ್ಣಿಸಲಾಗುತ್ತೆ. ಇಂದು ಜನಾದೇಶ ಪಡೆದ ಏಕೈಕ ಪಕ್ಷವಾಗಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ನರೇಂದ್ರ ಮೋದಿಯವರು ಪ್ರಧಾನಮಂತ್ರಿಗಳಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅಟಲ್ಜಿ ಪುನಃ ನೆನಪಾಗುತ್ತಾರೆ. ಯಾಕಂದ್ರೆ, 1999ರಲ್ಲಿ ಅಟಲ್ಜೀ ದೇಶದ ಪ್ರಧಾನಿಯಾಗಿದ್ದರು. ಅವರದ್ದು 24 ಪಕ್ಷಗಳ ಮೈತ್ರಿ ಸರ್ಕಾರತ್ತು. ನಿಮಗೆ ಅಚ್ಚರಿ ಎನಿಸಬಹುದು, ಆ ಸರ್ಕಾರದಲ್ಲಿ ಬೇರೆ ಬೇರೆ ಪಕ್ಷಗಳ ಒಟ್ಟು 81 ಸಚಿವರಿದ್ದರು.

24 ಪಕ್ಷ 81 ಸಚಿವರನ್ನ ಹೊಂದಿದ್ದ ಏಕೈಕ ಪ್ರಧಾನಿ..!

24 ಪಕ್ಷಗಳ ಒಂದು ಸರ್ಕಾರ. ನಿಜಕ್ಕೂ ಅದೊಂದು ದೊಡ್ಡ ಸವಾಲೇ ಸರಿ. ಯಾಕಂದ್ರೆ , ಪ್ರತಿಯೊಂದು ಪಕ್ಷಗಳಿಗೆ ತಮ್ಮದೇ ಆದ ಪ್ರಾದೇಶಿಕ ಅಸ್ಮಿತೆ ಇತ್ತು, ಭಾಷೆಗೆ ಹಾಗೂ ಗಡಿಗೆ ಸಂಬಂಧಿಸಿದ ವಿವಾದಗಳಿದ್ದವು, ನದಿ ಮತ್ತು ಜಲ ವಿವಾದಗಳಿದ್ದವು. ಆದರೆ ವಾಜಪೇಯಿ ಎನ್ನುವ ಒಂದು ಆಲದ ಮರದ ಕೆಳಗೆ 24 ಪಕ್ಷಗಳು, 24 ವಿಚಾರಧಾರೆಗಳು ಒಂದಾಗಿ ನಿಂತ್ತಿದ್ದವು. ಆ 24 ಪಕ್ಷಗಳನ್ನೊಳಗೊಂಡ ಒಂದು ಯಶಸ್ವಿ ಸರ್ಕಾರ 5 ವರ್ಷ ಪೂರೈಸಿದ್ದು ಭಾರತದ ಇತಿಹಾಸದಲ್ಲೇ ಅದು ಮೊದಲು.

ವಾಜಪೇಯಿ ಅವರು ಎಂತಾ ಸ್ಟೇಟ್ಸ್ಮನ್ ಆಗಿದ್ದರು ಅಂದ್ರೆ, ಅವರು ಪಕ್ಷ, ದೇಶ ಹಾಗೂ ವಿಚಾರಧಾರೆಗಳ ಎಲ್ಲೆಯನ್ನ ಮೀರಿ ಲೋಕಪ್ರಿಯತೆಯನ್ನ ಗಳಿಸಿದ್ದರು. ಇದೇ ಕಾರಣಕ್ಕೆ ವಿರೋಧ ಪಕ್ಷಗಳು ಅವರನ್ನ ಟೀಕಿಸುವಾಗ ಯಾವತ್ತೂ ಅವರ ವ್ಯಕ್ತಿತ್ವವನ್ನಾಗಲಿ, ಅವರ ನೈತಿಕತೆಯನ್ನಾಗಲಿ ಪ್ರಶ್ನೆ ಮಾಡಿದ ಉದಾಹರಣೆಯೇ ಇಲ್ಲ.

ತಪೋಭೂಮಿ ಗ್ವಾಲಿಯರ್ನಲ್ಲಿ ಜನಿಸಿದ ಮಹಾಫುರುಷ ಅಟಲ್..!

ಅಟಲ್ಜೀ ಜನಿಸಿದ್ದು 1924 ಡಿಸೆಂಬರ್ 25ರಂದು, ತಪೋಭೂಮಿ ಗ್ವಾಲಿಯರ್‌ನಲ್ಲಿ. 1942ರಲ್ಲಿ ತಮ್ಮ 18ನೇ ವಯಸ್ಸಿನಲ್ಲಿ ಅಟಲ್ಜೀ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು. ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ 23 ದಿನ ಸೆರೆವಾಸವನ್ನ ಅನುಭವಿಸಿದರು. 1947ರಲ್ಲಿ ಭಾರತ ಸ್ವಾತಂತ್ರ್ಯಗೊಂಡಾಗ ಅಟಲ್ ಬಿಹಾರಿ ವಾಜಪೇಯಿಯವರು ಕಾನ್ಪುರದ ಡಿಎವಿ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಎಂಎ ವ್ಯಾಸಾಂಗ ಮಾಡುತ್ತಿದ್ದರು. ಶಿಕ್ಷಣ ಪೂರೈಸುತ್ತಿದ್ದಂತೆ ಯುವ ಅಟಲ್ ಆರ್ಎಸ್ಎಸ್ ಸಂಪರ್ಕ ಬೆಳೆಸುತ್ತಾರೆ. ಅಲ್ಲಿಂದಲೇ ಅವರ ರಾಜಕೀಯ ಜೀವನ ಆರಂಭವಾಗುತ್ತೆ. 1957ರಲ್ಲಿ ಅಟಲ್ ಅವರು ಜನಸಂಘದ ಅಭ್ಯರ್ಥಿಯಾಗಿ ಮೊದಲ ಚುನಾವಣೆಯನ್ನ ಎದುರಿಸುತ್ತಾರೆ. ಆವತ್ತಿಗೆ ವಾಜಪೇಯಿ ಅವರ ವಯಸ್ಸು ಕೇವಲ 33.


1951 ಅಕ್ಟೋಬರ್ 21ನೇ ತಾರೀಕು ಶ್ಯಾಮಪ್ರಸಾದ್ ಮುಖರ್ಜಿಯವರು ಜನಸಂಘದ ಸ್ಥಾಪನೆ ಮಾಡಿದ್ದರು. ಆರ್ಎಸ್ಎಸ್ ಹಾಗೂ ಜನಸಂಘದಲ್ಲಿ ಒಡನಾಟದಿಂದ ವಾಜಪೇಯಿಯವರು 1957ರ ಹೊತ್ತಿಗೆ ಅದ್ಭುತ ವಾಗ್ಮಿಯಾಗಿ ರೂಪಗೊಂಡಿದ್ದರು. ಯುವ ವಾಜಪೇಯಿಯವರ ಮಿಂಚಿನಂತಾ ಮಾತುಗಳು ಹಾಗೂ ಅವರ ವೇಗವನ್ನ ಗುರುತಿಸಿದ್ದ ಜನಸಂಘದ ಹಿರಿಯರು, ಅವರನ್ನ ಸಂಸತ್ ಸದಸ್ಯರನ್ನಾಗಿ ಮಾಡಲೇಬೇಕು ಎನ್ನುವ ಪಣತೊಟ್ಟಿದ್ದರು. ಇದೇ ಕಾರಣಕ್ಕೆ 1957ರ ಲೋಕಸಭಾ ಚುನಾವಣೆಯಲ್ಲಿ ವಾಜಪೇಯಿಯವರನ್ನ 3 ಕ್ಷೇತ್ರಗಳಿಂದ ಕಣಕ್ಕಿಳಿಸಲಾಗಿತ್ತು. ಉತ್ತರ ಪ್ರದೇಶದ ಮಥುರಾ, ಬಲರಾಮ್ಪುರ ಹಾಗೂ ಲಖನೌ ಲೋಕಸಭಾ ಕ್ಷೇತ್ರಗಳಿಂದ ಅಟಲ್ಜೀ ಸ್ಫರ್ಧಿಸಿದ್ದರು.

ಪ್ರಜಾಪ್ರಭುತ್ವದ ನರ್ಸರಿಯಲ್ಲಿ ಅರಳಿದ ಕಮಲ ವಾಜಪೇಯಿ..!

1957ನೇ ವರ್ಷ ಭಾರತೀಯ ಪ್ರಜಾಪ್ರಭತ್ವವಿನ್ನೂ ಶೈಶವಾವಸ್ಥೆಯಲ್ಲಿದ್ದ ಕಾಲ. 1952ರಲ್ಲೇ ಭಾರತದಲ್ಲಿ ಮೊಟ್ಟ ಮೊದಲ ಚುನಾವಣೆ ನಡೆದಿತ್ತು. ಆಗಷ್ಟೇ ದೇಶದಲ್ಲಿ ಪ್ರಜಾಪ್ರಭುತ್ವ ಒಂದು ಸ್ವರೂಪ ಪಡೆದುಕೊಳ್ಳುತ್ತಿದ್ದ ಕಾಲವದು. ದಾಖಲಾತಿ, ಪ್ರಚಾರ, ಮತದಾನ, ಮತ ಎಣಿಕೆ ಎಲ್ಲವೂ ಹೊಸದು. ಬ್ರಿಟೀಷ್ ಆಡಳಿತಾವಧಿಯಲ್ಲೇ ಭಾರತದಲ್ಲಿ ಒಂದೆರಡು ಚುನಾವಣೆಗಳು ನಡೆದಿದ್ದವು. ಆದ್ರೆ ಸ್ವತಂತ್ರ ಭಾರತದಲ್ಲಿ ಮೊಟ್ಟ ಮೊದಲ ಚುನಾವಣೆ ನಡೆದದ್ದು 1952ರಲ್ಲಿ. ಆದರೆ 1957ರಲ್ಲಿ ಭಾರತ ದೇಶದ ಪ್ರಜಾಪ್ರಭುತ್ವದ ನರ್ಸರಿಯಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ತಮ್ಮ ಅದೃಷ್ಟ ಪರೀಕ್ಷೆ ನಡೆಸಿದ್ದರು.

ಪ್ರಜಾಪ್ರಭುತ್ವದ ಬ್ಯಾಕ್ಡ್ರಾಪ್ನಲ್ಲಿ ಅತ್ಯಂತ ಸೀಮಿತ ಸಂಪನ್ಮೂಲಗಳ ಜೊತೆ ವಾಜಪೇಯಿಯವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇವತ್ತಿನ ರಾಜಕಾರಣದಲ್ಲಿ ಐಷಾರಾಮಿ ಕಾರುಗಳು ಹಾಗೂ ಬೈಕ್ ರಾಲಿಗಳು ಮಾಮೂಲಿ. ಹಿಂತಿರುಗಿ ನೋಡಿದರೆ ಇಂದಿನ ಜನರಿಗೆ ನಿಜಕ್ಕೂ ಅಚ್ಚರಿ ಎನಿಸಬಹುದು. ಯಾಕಂದ್ರೆ, ಆ ಕಾಲಕ್ಕೆ ಚುನಾವಣಾ ಅಭ್ಯರ್ಥಿಗಳು ಸೈಕಲ್ ಹಾಗೂ ಎತ್ತಿನ ಗಾಡಿಗಳಲ್ಲಿ ಪ್ರಚಾರಕ್ಕೆ ಬರುತ್ತಿದ್ದರು. ಕೆಲವೇ ಕೆಲವು ಅಭ್ಯರ್ಥಿಗಳು ಮಾತ್ರ ಜೀಪ್ಗಳಲ್ಲಿ ಪ್ರಚಾರ ನಡೆಸುತ್ತಿದ್ದರು.

ಪಕ್ಷದಿಂದ ಒಂದು ಜೀಪ್.. ಬಾಡಿಗೆಗೆ ಮತ್ತೊಂದು ಜೀಪ್..!

ಬಲರಾಮ್ಪುರದಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ಕಾಂಗ್ರೆಸ್ ಪಕ್ಷದ ಹೈದರ್ ಹುಸೇನ್ ವಿರುದ್ಧ ಸ್ಪರ್ಧಿಸಿದ್ದರು. ಬೆಳಗುವ 'ದೀಪ' ಜನಸಂಘದ ಗುರುತಾಗಿತ್ತು. ಜನಸಂಘಕ್ಕೂ ಬಲರಾಮಪುರದಲ್ಲಿ ಜನ ದೀಪ ಬೆಳಗುತ್ತಾರೆ ಎನ್ನುವ ವಿಶ್ವಾಸವಿತ್ತು. ಅದರಂತೆ ವಾಜಪೇಯಿ ಕೂಡ ಹಗಲು ರಾತ್ರಿ ಎನ್ನದೇ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಆ ಸಮಯದಲ್ಲಿ ಉತ್ತರ ಪ್ರದೇಶದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆ. ಆ ಮಳೆಯಲ್ಲೂ ಅಟಲ್ಜೀ ಪಕ್ಷ ಕೊಟ್ಟಿದ್ದ ಜೀಪ್ನಲ್ಲಿ ಸುತ್ತುತ್ತಾ ಹಳ್ಳಿ, ನಗರ, ಮೊಹಲ್ಲಾಗಳಲ್ಲಿ ಪ್ರಚಾರ ನಡೆಸಿದ್ದರು. ಕಳಪೆ ರಸ್ತೆಗಳಲ್ಲಿ ಆ ಕಾರು ಪ್ರತಿನಿತ್ಯ ಕೆಟ್ಟು ನಿಲ್ಲುತ್ತಿತ್ತು.

ಇಂಟರೆಸ್ಟಿಂಗ್ ಸಂಗತಿ ಏನಂದ್ರೆ, ವಾಜಪೇಯಯವರು 16 ವರ್ಷಗಳ ಹಿಂದೆ ಅಂದ್ರೆ 2004ರ ಲೋಕಸಭಾ ಚುನಾವಣೆಗೂ ಮುನ್ನ ಒಂದು ಸಂದರ್ಶನದಲ್ಲಿ ತಮ್ಮ ಮೊದಲ ಚುನಾವಣೆ ಹಾಗೂ ನೆಚ್ಚಿನ ಜೀಪ್ಗಳ ಬಗ್ಗೆ ಮಾತನಾಡಿದ್ದರು. "ನನಗೆ ಸರಿಯಾಗಿ ನೆನಪಿದೆ, ನಮ್ಮ ಬಳಿ ಎರಡು ಜೀಪ್‌ಗಳಿದ್ದವು. ಒಂದು ಜೀಪ್‌ನಲ್ಲಿ ನಮ್ಮ ಪಕ್ಷವೇ ಕೊಟ್ಟಿತ್ತು. ಇನ್ನೊಂದು ಜೀಪ್ನ್ನ ನಾವು ಬಾಡಿಗೆಗೆ ಪಡೆದಿದ್ದೆವು. ಅದನ್ನ ಬಿಟ್ಟರೆ ಬೇರೆ ಸಂಪನ್ಮೂಲ ನಮ್ಮ ಬಳಿ ಇರಲಿಲ್ಲ. ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಇದ್ದರು. ಮತದಾನದ ದಿನ ಅಭ್ಯರ್ಥಿಯಾಗಿದ್ದ ನಾನು ಮತಕೇಂದ್ರಗಳಿಗೆ ಭೇಟಿ ನೀಡಲು ಹೊರಟಿದ್ದೆ. ಆದ್ರೆ, ಅರಣ್ಯವೊಂದರಲ್ಲಿ ನಮ್ಮ ಕಾರು ಕೆಟ್ಟು ನಿಂತಿತ್ತು. ರಿಪೇರಿ ಮಾಡಿಕೊಂಡು ಹೋಗುವಷ್ಟರಲ್ಲಿ ಸಾಯಂಕಾಲವಾಗಿ ಮತದಾನವೇ ಮುಗಿದುಹೋಗಿತ್ತು. ಆದರೆ ಆ ಚುನಾವಣೆಯಲ್ಲಿ ನಾನು ಜಯಗಳಿಸಿದ್ದೆ."


ಆ ಚುನಾವಣೆಯ ಸಂದರ್ಭದಲ್ಲಿ ಅಲ್ಜೀ ಹೆಚ್ಚಿನ ಕಾಲ ಕಾಲ್ನಡಿಗೆಯಲ್ಲೇ ಪ್ರಚಾರ ಮಾಡಿದ್ದರು. ಕಾಲ್ನಡಿಗೆಯಲ್ಲೇ ಜನಸಂಪರ್ಕ ಅಭಿಯಾನವನ್ನ ನಡೆಸಿದ್ದರು. ಜನಸಂಘದ ಕಾರ್ಯಕರ್ತರೆಲ್ಲಾ ಸೈಕಲ್ಗಳ ಮೂಲಕ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದರು. ಅಟಲ್ ಜೀ ಯಾವ ಊರಿಗೆ ಹೋದರೂ ಅದು ಅಟಲ್ ಅವರದ್ದೇ ಊರಾಗುತ್ತಿತ್ತು. ಎಲ್ಲಿ ಕತ್ತಲು ಕವಿಯುತ್ತಿತ್ತೋ ಅಟಲ್ಜೀ ಅಲ್ಲೇ ರಾತ್ರಿಯನ್ನ ಕಳೆಯುತ್ತಿದ್ದರು. ಸಭೆಗಳನ್ನ ಮಾಡುತ್ತಿದ್ದರು. ಕಾರ್ಯಕರ್ತರನ್ನ ಹುರಿದುಂಬಿಸುತ್ತಿದ್ದರು. ಹಾಡುಗಳ ಮೂಲಕ, ಕಥೆ ಕವನಗಳ ಮೂಲಕ ರಂಜಿಸುತ್ತಿದ್ದರು.

ಕೆಟ್ಟುನಿಂತ ಕಾರನ್ನು ತಳ್ಳಿ ಸ್ಟಾರ್ಟ್ ಮಾಡಿದ್ದ ವಾಜಪೇಯಿ..!

ಕುತೂಹಲಕಾರಿ ಸಂಗತಿ ಏನಂದ್ರೆ, ಜನಸಂಘದ ವತಿಯಿಂದ ವಾಜಪೇಯಿಯವರಿಗೆ ನೀಡಿದ್ದ ಕಾರು ಒಂದೆರಡು ಕಿಲೋ ಮೀಟರ್ ಚಲಿಸಿದ ಬಳಿಕ ನಿಂತುಹೋಗುತ್ತಿತ್ತು. ಪದೇ ಪದೇ ತಳ್ಳಿ ಸ್ಟಾರ್ಟ್ ಮಾಡುವುದು ಅಭ್ಯಾಸ. ಬಲರಾಮಪುರ ಜಿಲ್ಲೆಯ ಸದರ್ ವಿಧಾನಸಭಾ ಕ್ಷೇತ್ರದ ಸಿಂಗಾಹಿ ಎನ್ನವ ಹಳ್ಳಿಯಲ್ಲಿ ಅಟಲ್ ಜೀ ಪ್ರಚಾರ ಮುಗಿಸಿ ಹೊರಟಿದ್ದರು. ಈ ವೇಳೆ ಪುಟ್ಟ ಹಳ್ಳಿಯ ಕಚ್ಚಾ ರಸ್ತೆಯಲ್ಲಿ ಅವರ ಕಾರು ಕೈಕೊಡುತ್ತೆ. ಕೂಡಲೇ ಕಾರ್ಯಕರ್ತರು ಕಾರನ್ನ ತಳ್ಳಲು ಶುರು ಮಾಡುತ್ತಾರೆ. ಎಷ್ಟೇ ತಳ್ಳಿದರೂ ಕಾರು ಸ್ಟಾರ್ಟ್ ಆಗಲಿಲ್ಲ. ಆಗ ಸ್ವತಃ ವಾಜಪೇಯಿಯವರೇ ಕೆಳಗಿಳಿದು ಕಾರನ್ನ ತಳ್ಳುತ್ತಾರೆ. ಸುಮಾರು ಅರ್ಧಗಂಟೆ ಸರ್ಕಸ್ ಮಾಡಿದ ಬಳಿಕ ಕಾರು ಸ್ಟಾರ್ಟ್ ಆಗಿತ್ತು. ತಮ್ಮ ಮೊದಲ ಚುನಾವಣಾ ಪ್ರಚಾರದ ವೇಳೆ ನಡೆದ ಇಂತಹ ಅದೆಷ್ಟೋ ಸ್ವಾರಸ್ಯಕರ ಘಟನೆಗಳನ್ನ ಅಟಲ್ ಜೀ ಆಗಾಗ ಹಂಚಿಕೊಳ್ಳುತ್ತಿದ್ದರು.

ಸಂಸತ್‌ನಲ್ಲಿ ಕಾರುಗಳ ಬಗ್ಗೆ ಚರ್ಚೆ ಮಾಡಿದ್ದ ಅಟಲ್ ಜೀ..!

ಅದು 1998 ಮಾರ್ಚ್ 31ನೇ ತಾರೀಕು. ಭಾರತೀಯ ಚುನಾವಣಾ ಸುಧಾರಣೆಯ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ನಡೆದಿತ್ತು. ಈ ವೇಳೆ ಪ್ರಧಾನಮಂತ್ರಿ ಅಟಲ್ಜೀ ಎದ್ದುನಿಂತು ತಮ್ಮ ಮೊದಲ ಚುನಾವಣೆಯಲ್ಲಿ ಎರಡು ಕಾರುಗಳನ್ನ ಬಳಕೆ ಮಾಡಿದ್ದ ಬಗ್ಗೆ ಹೇಳಿದ್ದರು. "1957ರಲ್ಲಿ ನಾನು ಮೊದಲ ಚುನಾವಣೆಯನ್ನ ಎದುರಿಸಿದ್ದೆ. ಆ ಸಮಯದಲ್ಲಿ ನನ್ನ ಬಳಿ ಎರಡು ಕಾರುಗಳಿದ್ದವು. ಬಲರಾಮಪುರದಲ್ಲಿ ನಮಗೆ ಅನುಕೂಲಕರ ಪರಿಸ್ಥಿತಿ ಇದೆ ಎಂದು ಪಕ್ಷ ತಿಳಿಸಿತ್ತು. ಹೀಗಾಗಿ ಚುನಾವಣೆಗೆ ಸ್ಪರ್ಧಿಸಿದ್ದೆ. ನಾವು ಪಕ್ಷದ ಒಂದು ಜೀಪ್ನ್ನ ತೆಗೆದುಕೊಂಡಿದ್ದೆವು. ಮತ್ತೊಂದನ್ನ ಬಾಡಿಗೆ ಪಡೆದಿದ್ದೆವು. ಆ ಎರಡು ಜೀಪ್ಗಳಿಂದಲೇ ಇಡೀ ಕ್ಷೇತ್ರವನ್ನ ಸುತ್ತಿ ಪ್ರಚಾರ ಮಾಡಿದೆವು, ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೆವು. ಆದರೆ ಇಂದು ನಮಗೆ ಬೆಂಗಾವಲು ಬೇಕು. ಅದೆಲ್ಲಾ ಎಲ್ಲಿಂದ ಬರುತ್ತೆ, ನಾವೆಲ್ಲಾ ಕಪ್ಪುಹಣದಿಂದ ಚುನಾವಣೆ ನಡೆಸಬೇಕಾ..? ನಾವೆಲ್ಲಾ ನಮ್ಮ ಹೃದಯವನ್ನ ಒಂದು ಬಾರಿ ಮುಟ್ಟಿ ಚಿಂತಿಸಬೇಕಿದೆ, ನಾವು ಎಲ್ಲಿಂದ ಎಲ್ಲಿಗೆ ಬಂದಿದ್ದೇವೆ ಎಂದು."


ನೆಹರು ಪ್ರಭಾವದ ನಡುವೆಯೂ ಗೆದ್ದುಬಂದ ವಾಜಪೇಯಿ..!

1957ನೇ ವರ್ಷ ಜವಾಹರಲಾಲ್ ನೆಹರು ಅವರು ಕೇವಲ ಭಾರತದಲ್ಲಷ್ಟೇ ಅಲ್ಲ, ಇಡೀ ಏಷ್ಯಾ ಖಂಡದ ನಾಯಕ ಎನಿಸಿಕೊಂಡಿದ್ದರು. ನವ ಭಾರತದ ನಿರ್ಮಾತೃ ಎಂದೇ ಅವರನ್ನ ಕರೆಯಲಾಗುತ್ತಿತ್ತು. ಭಾರತದಲ್ಲಿ ಅವರ ಸರಿಸಮನಾಗಿ ನಿಲ್ಲುವ ಮತ್ತೋರ್ವ ನಾಯಕ ಇರಲಿಲ್ಲ. ಅಂತಹ ನೆಹರು ಅವರ ಪ್ರಭಾವದ ನಡುವೆ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಮಥುರಾ ಮತ್ತು ಲಖನೌ ಕ್ಷೇತ್ರಗಳಲ್ಲಿ ಸೋಲನ್ನ ಅನುಭವಿಸುತ್ತಾರೆ. ಆದರೆ ಬಲರಾಮಪುರ ಕ್ಷೇತ್ರದ ಜನ ಜನಸಂಘದ ದೀಪವನ್ನ ಬೆಳಗಿ ವಾಜಪೇಯಿಯವರಿಗೆ ವಿಜಯಮಾಲೆಯನ್ನ ಹಾಕಿದ್ದರು. ಆ ಚುನಾವಣೆಯಲ್ಲಿ ಅಟಲ್ಜೀ 1 ಲಕ್ಷ 18 ಸಾವಿರ 380 ಮತಗಳನ್ನ ಪಡೆದಿದ್ದರು. ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಹೈದರ್ ಹುಸೇನ್ 1 ಲಕ್ಷ 8 ಸಾವಿರ 568 ಮತಗಳನ್ನ ಗಳಿಸಿದ್ದರು. ಅಟಲ್ ಜೀ ಒಟ್ಟು 9 ಸಾವಿರಕ್ಕೂ ಅಧಿಕ ಮತಗಳಿಂದ ವಿಜಯಶಾಲಿ ಎನಿಸಿದ್ದರು. ಆ ಗೆಲುವಿನ ಮೂಲಕ ವಾಜಪೇಯಿಯವರು ಸಂಸತ್‌ ಪ್ರವೇಶ ಮಾಡಿದರು. ಒಟ್ಟಾರೆ 1957ರಲ್ಲಿ ಉತ್ತರಪ್ರದೇಶದ ಬಲರಾಮಪುರ ಲೋಕಸಭಾ ಕ್ಷೇತ್ರದ ಜನರ ಒಂದು ತೀರ್ಪು ಭವಿಷ್ಯದ ಪ್ರಧಾನಮಂತ್ರಿಗಳನ್ನ ದೇಶಕ್ಕೆ ನೀಡಿತ್ತು.

- ಸತೀಶ್ ಕುಮಾರ್ ಎಂ, ಪ್ರಧಾನ ಸಂಪಾದಕರು, ಟಿವಿ5 ಕನ್ನಡ

Next Story

RELATED STORIES