ಎಸ್.ಎಂ.ಕೃಷ್ಣಾ- ಡಿಕೆಶಿ ಕುಟುಂಬಗಳಲ್ಲಿ ಸಂಭ್ರಮವೋ, ಸಂಭ್ರಮ..!
ಐಶ್ವರ್ಯಾ-ಅಮಾರ್ಥ್ಯ ಸಿದ್ಧಾರ್ಥ್ ಸುಬ್ರಮಣ್ಯ ಹೆಗ್ಡೆಗೆ ನಿಶ್ಚಿತಾರ್ಥ

ಬೆಂಗಳೂರು: ರಾಜ್ಯದ ಎರಡು ಪ್ರಸಿದ್ಧ ರಾಜಕೀಯ ಕುಟುಂಬಗಳು ಮತ್ತಷ್ಟು ಹತ್ತಿರವಾಗಿವೆ. ವಿವಾಹ ಸಂಬಂಧದಿಂದಾಗಿ ಹೊಕ್ಕಳು ಬಳ್ಳಿ ಬಾಂಧವ್ಯ ಗಟ್ಟಿಗೊಂಡಿದೆ. ಶೀಘ್ರದಲ್ಲಿಯೇ ಎರಡೂ ಕುಟುಂಬಗಳ ಕುಡಿಗಳು ಹಸೆ ಮಣೆ ಏರಲಿವೆ.

ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣಾ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುಟುಂಬಗಳಲ್ಲಿ ಸಂಭ್ರಮ ಮನೆಮಾಡಿದೆ. ತಮ್ಮದೇ ಕರುಳ ಬಳ್ಳಿಗಳ ವಿವಾಹ ಸಂಬಂಧದಿಂದಾಗಿ ಪರಸ್ಪರ ಹತ್ತಿರವಾಗಿವೆ. ಎಸ್.ಎಂ.ಕೃಷ್ಣರ ಮೊಮ್ಮಗ ಅರ್ಥಾತ್ ಕಾಫಿ ಡೇ ಮಾಲಿಕ ಸಿದ್ಧಾರ್ಥ ಹೆಗ್ಡೆಯವರ ಪುತ್ರ ಅಮಾರ್ಥ್ಯ ಸಿದ್ಧಾರ್ಥ್ ಸುಬ್ರಮಣ್ಯ ಹೆಗ್ಡೆ ಹಾಗೂ ಡಿಕೆಶಿ ಹಿರಿಯ ಪುತ್ರಿ ಐಶ್ವರ್ಯಾ ಮದ್ವೆಯಾಗುತ್ತಿದ್ದಾರೆ. ಕಳೆದ ಹಲವು ದಿನಗಳ ಹಿಂದಷ್ಟೇ ಪರಸ್ಪರ ಕೊಟ್ಟು ತೆಗೆದುಕೊಳ್ಳುವ ಸಂಬಂಧ ಮುಗಿದಿತ್ತು. ಇಂದು ನಿಶ್ಚಿತಾರ್ಥವನ್ನ ನಡೆಸಲಾಯ್ತು. ಫೆಬ್ರವರಿ 21ರಂದು ವಿವಾಹ ನಡೆಯುವ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ.

ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಪ್ರತಿಷ್ಠಿತ ತಾಜ್ ಹೊಟೇಲ್ ನಲ್ಲಿ ನಿಶ್ಚಿತಾರ್ಥವನ್ನ ನಡೆಸಲಾಯ್ತು. ಕೋವಿಡ್ ನಿಂದಾಗಿ ಕುಟುಂಬ ಸದಸ್ಯರು ಹಾಗೂ ಆಯ್ದ ಕೆಲ ಗಣ್ಯರಿಗಷ್ಟೇ ಅಧಿಕೃತ ಆಹ್ವಾನ ನೀಡಲಾಗಿತ್ತು. ಸಿಎಂ ಸೇರಿದಂತೆ ಸುಮಾರು 250 ಮಂದಿ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹಾಜರಾಗಿದರು. ಎಸ್ ಎಂ ಕೃಷ್ಣಾ ದಂಪತಿ, ಸಿಎಂ ಬಿಎಸ್ ವೈ ಸೇರಿದಂತೆ ಹಿರಿಯ ಗಣ್ಯರು ಬಾವಿ ವಧುವರರನ್ನ ಆಶೀರ್ವದಿಸಿದರು.

ಇನ್ನು ಇವತ್ತಿನ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಅಮಾರ್ಥ್ಯ ಹಾಗೂ ಐಶ್ವರ್ಯಾ ಟ್ರಡಿಷನಲ್ ಲುಕ್ ನಲ್ಲಿ ಮಿಂಚಿದರು. ಎರಡೂ ಕುಟುಂಬಗಳ ಸದಸ್ಯರು ಕೂಡ ತಾವೇನು ಕಡಿಮೆ ಅನ್ನುವಂತೆ ಮಿರಿಮಿರಿ ಮಿಂಚುವ ಡ್ರೆಸ್ ನಲ್ಲಿ ಮೆರುಗು ತಂದರು.
ಸದ್ಯ ಡಿಕೆಶಿ ಹಾಗೂ ಎಸ್.ಎಂ.ಕೆ ಕುಟುಂಬಗಳು ಕರುಳಬಳ್ಳಿಗಳ ನಿಶ್ಚಿತಾರ್ಥದಿಂದಾಗಿ ಮತ್ತಷ್ಟು ಸಂಭ್ರಮದಲ್ಲಿ ತೇಲಾಡ್ತಿವೆ. ಕಳೆದ ವರ್ಷದ ಸಿದ್ದಾರ್ಥ ಹೆಗ್ಡೆ ನಿಧನದ ದುಃಖವನ್ನ ಈ ಮೂಲಕ ಕೃಷ್ಣಾ ಕುಟುಂಬವೂ ಮರೆಯೋಕೆ ಪ್ರಯತ್ನಿಸ್ತಿದೆ.