Top

ಗೋವಾ ಚಲನಚಿತ್ರೋತ್ಸವದಲ್ಲಿ ಕಿಚ್ಚನ ಕನ್ನಡದ ಕಂಪು

ಸಿನಿಮಾಗಳ ಹಬ್ಬದಲ್ಲಿ ಮಿಂಚಿದ ಅಭಿನಯ ಚಕ್ರವರ್ತಿ

ಗೋವಾ ಚಲನಚಿತ್ರೋತ್ಸವದಲ್ಲಿ ಕಿಚ್ಚನ ಕನ್ನಡದ ಕಂಪು
X

ಸ್ಯಾಂಡಲ್​ವುಡ್​ನ ಬಾದ್ಶಾ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ಹೆಮ್ಮೆಯ ನಟ. ಕರ್ನಾಟಕದಾಚೆಗೂ ಕನ್ನಡ ಕೀರ್ತಿ ಪತಾಕೆಯನ್ನ ಹಾರಿಸಿದ್ದಾರೆ. ಇದೀಗ 51ನೇ ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಹೋಗಿದ್ದ ಕಿಚ್ಚ, ಆ ವೇದಿಕೆಯಲ್ಲೂ ಕನ್ನಡ ಭಾಷೆಯನ್ನ ಎತ್ತಿ ಹಿಡಿದಿದ್ದಾರೆ. ಕಿಚ್ಚನ ಕನ್ನಡ ಪ್ರೇಮಕ್ಕೆ ಅಭಿಮಾನಿಗಳು ಖುಷಿಪಡುತ್ತಿದ್ದಾರೆ.

ಭಾರತೀಯ ಚಿತ್ರರಂಗದ ಸಿನಿಮಾಗಳ ಹಬ್ಬ ಅಂತಾನೇ ಕರೆಯುವ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಗೋವಾದಲ್ಲಿ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಬೀಚ್​ಗಳ ರಾಜಧಾನಿ ಗೋವಾದಲ್ಲಿ ನಡೆಯುತ್ತಿರೋ 51ನೇ ಚಿತ್ರೋತ್ಸವದಲ್ಲಿ ಹಲವು ದೇಶಗಳ, ಹಲವು ಭಾಷೆಗಳ ಸಿನಿಮಾಗಳನ್ನ ಪ್ರದರ್ಶಿಸಲಾಗುತ್ತದೆ.

ಸದ್ಯ ಪಣಜಿ ನಗರದ ಡಾ.ಶ್ಯಾಮ ಪ್ರಸಾದ್‌ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಸಿನಿಮೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಈ ಬಾರಿ ಚಲನಚಿತ್ರೋತ್ಸವದಲ್ಲಿ ಮೈನ್ ಅಟ್ರ್ಯಾಕ್ಷನ್ ಆಗಿದ್ದು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​.

ಗೋವಾದಲ್ಲಿ ನಡೆಯುತ್ತಿರುವ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಕಿಚ್ಚ ಸುದೀಪ್​ ಕನ್ನಡದ ಕಂಪನ್ನು ಪರಸಿರಿದ್ದಾರೆ. ಹಲವು ದೇಶ, ಭಾಷೆಗಳ ಸಿನಿಮಾಸಕ್ತರು ನೆರೆದಿದ್ದ ಆ ಕಾರ್ಯಕ್ರಮದ ವೇದಿಕೆಯಲ್ಲಿ ಕನ್ನಡದಲ್ಲಿ ಮಾತು ಆರಂಭಿಸುವ ಮೂಲಕ ಅಭಿನಯ ಚಕ್ರವರ್ತಿ ಕನ್ನಡಿಗರ ಹೃದಯ ಗೆದ್ದಿದ್ದಾರೆ.

ಪ್ರತಿಯೊಬ್ಬರಿಗೂ ಕನ್ನಡ ಚಿತ್ರರಂಗದ ಪರವಾಗಿ ಹಾಗೂ ಕರ್ನಾಟಕದ ಪರವಾಗಿ ಈ ಕಿಚ್ಚನಿಂದ ನಮಸ್ತೆ' ಎಂದು ಕನ್ನಡದಲ್ಲಿಯೇ ಹೇಳುವ ಮೂಲಕ ಸುದೀಪ್‌ ಮಾತು ಆರಂಭಿಸಿದರು. ಆ ಮೂಲಕ ಅವರು ಮಾತೃಭಾಷೆ ಮೇಲಿರುವ ಅಭಿಮಾನವನ್ನು ಮೆರೆದಿದ್ದಾರೆ. ಚಿಕ್ಕದಾಗಿ ಚೊಕ್ಕದಾಗಿ ತಮ್ಮ ಮಾತುಗಳನ್ನು ಹಂಚಿಕೊಂಡ ಅವರು ಎಲ್ಲರಲ್ಲೂ ಭರವಸೆ ತುಂಬುವ ಪ್ರಯತ್ನ ಮಾಡಿದ್ದಾರೆ.

ಇನ್ನು ಸಿನಿಮಾ ಹಾಗೂ ಮನುಷ್ಯನ ಸಂಬಂಧದ ಬಗ್ಗೆ ಕಿಚ್ಚ ಸುದೀಪ್​ ಮನ ಬಿಚ್ಚಿ ನುಡಿದಿದ್ದಾರೆ. ಸಿನಿಮಾ ಮತ್ತು ಕ್ರೀಡೆಗಳು ನಮ್ಮೆಲ್ಲರನ್ನೂ ಬೆಸಿದಿವೆ. ಇದೇ ಕಾರಣಕ್ಕಾಗಿ ನಾವೆಲ್ಲರೂ ಇಂದು ಇಲ್ಲಿ ಸೇರಿದ್ದೇವೆ. ಸಿನಿಮಾ ರಂಗವೂ ಸಾಂಕ್ರಾಮಿಕ ಕೊರೊನಾದಂತೆಯೇ ಎಲ್ಲೆಲ್ಲೂ ವ್ಯಾಪಿಸಲಿ. ದೇಶ ಸುತ್ತು, ಕೋಶ ಓದು ಎಂಬ ನಾಣ್ಣುಡಿಯನ್ನು ನಾವು ಕೇಳಿದ್ದೇವೆ. ಅದೇ ರೀತಿ ಸಿನಿಮಾವು ಒಂದೇ ವೇದಿಕೆಯಲ್ಲಿ ಈ ಎರಡನ್ನೂ ಪೂರೈಸುತ್ತದೆ ಅನ್ನೋ ಮೂಲಕ ಭರವಸೆಯ ಮಾತುಗಳನ್ನಾಡಿದರು.

ಚಿತ್ರರಂಗದಲ್ಲಿ 25 ವರ್ಷಗಳನ್ನ ಪೂರೈಸಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ಗೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ವೇದಿಕೆಯಲ್ಲಿ ಗೌರವಿಸಲಾಯಿತು. ಗೋವಾ ರಾಜ್ಯದ ಮುಖ್ಯಮಂತ್ರಿ ಡಾ. ಪ್ರಮೋದ್​ ಸಾವಂತ್​ ಕಿಚ್ಚ ಸುದೀಪ್​ಗೆ ಸನ್ಮಾನ ಮಾಡಿದ್ದಾರೆ.

ಎಲ್ಲದಕ್ಕಿಂತ ಇಂಟ್ರೆಸ್ಟಿಂಗ್ ಸಂಗತಿ ಅಂದ್ರೆ ಈ ಪ್ರತಿಷ್ಠಿತ ಚಿತ್ರೋತ್ಸವವನ್ನು ಉದ್ಘಾಟಿಸುವ ಅವಕಾಶ ಪಡೆದ ಕನ್ನಡದ ಮೊದಲ ನಟ ಎಂಬ ಖ್ಯಾತಿಗೆ ಸುದೀಪ್‌ ಪಾತ್ರರಾಗಿದ್ದಾರೆ. ಒಟ್ಟಿನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರೋ ಚಲನಚಿತ್ರೋತ್ಸವದಲ್ಲಿ ಕನ್ನಡದಲ್ಲಿ ಮಾತು ಆರಂಭಿಸುವ ಮೂಲಕ ಕಿಚ್ಚ ಸುದೀಪ್ ಕನ್ನಡಿಗರಿಗೆ ಉಡುಗೊರೆ ನೀಡಿದ್ದಾರೆ.

Next Story

RELATED STORIES