ಯತ್ನಾಳ್ ಅವರಿಗೆ ಮುಂದೆ ಒಳ್ಳೆಯ ಭವಿಷ್ಯವಿದೆ - ಸಚಿವ ರಮೇಶ್ ಜಾರಕಿಹೊಳಿ
ಸಮಾಜದ ವಿಚಾರವಾಗಿ ಶಾಸಕ ಯತ್ನಾಳ್ ಮಾತನಾಡುತ್ತಿರುವುದರಲ್ಲಿ ತಪ್ಪಿಲ್ಲ

ಬೆಳಗಾವಿ: 2018ರ ಚುನಾವಣೆ ಮೊದಲು ನಾನು ಗ್ರಾಮೀಣದಲ್ಲಿ ಓಡಾಡಿದೆ. ಆಗ ಬಿಜೆಪಿಯ ಸಂಜಯ ಪಾಟೀಲ್ ಶಾಸಕರಾಗಿದ್ದರು. ಆಗ ನಾನು ಓಡಾಡಿ ಗ್ರಾಮೀಣದಲ್ಲಿ ಕಾಂಗ್ರೆಸ್ ಗಟ್ಟಿ ಮಾಡಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ಕೊಟ್ಟಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ಗೆ ಹೈಕಮಾಂಡ್ ನೋಟಿಸ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಸನಗೌಡ ಯತ್ನಾಳ್ ಅವರಿಗೆ ಮುಂದೆ ಒಳ್ಳೆಯ ಭವಿಷ್ಯವಿದೆ. ಸಮಾಜದ ವಿಚಾರವಾಗಿ ಶಾಸಕ ಯತ್ನಾಳ್ ಮಾತನಾಡುತ್ತಿರುವುದರಲ್ಲಿ ತಪ್ಪಿಲ್ಲ. ಆದರೆ, ಇತಿ-ಮಿತಿಯಲ್ಲಿ ಮಾತನಾಡಿ ಅಂತ ರಿಕ್ವೆಸ್ಟ್ ಮಾಡುತ್ತೇವೆ. ಯತ್ನಾಳ್ ಅವರು ಸೀನಿಯರ್ ಇದ್ದಾರೆ. ಸಮಾಜದ ಪ್ರಮುಖರಿದ್ದಾರೆ. ಬಸನಗೌಡ ಯತ್ನಾಳ್ ನಮ್ಮ ಫ್ರೆಂಡ್ ಅವರಿಗೆ ತಿಳಿಸಿ ಹೇಳುತ್ತೇವೆ. ಈಗಾಗಲೇ ಮಾತನಾಡಿದ್ದೀವಿ, ಅವರು ನಮಗೆ ಒಳ್ಳೆಯ ಮಿತ್ರರು ಎಂದರು.
ಸಿದ್ದರಾಮಯ್ಯ ಅಹಿಂದ ಜಪ ವಿಚಾರದ ಪ್ರತಿಕ್ರಿಯೆ ನೀಡಿದ ಅವರು, ಪಕ್ಷಾತೀತವಾಗಿ ಮಾಡಿದ್ರೆ ನಾವೆಲ್ಲ ಯೆಸ್ ಅಂತೀವಿ. ಕಾಂಗ್ರೆಸ್ ಅಹಿಂದವೋ, ಎಲ್ಲಾ ಪಾರ್ಟಿ ಅಹಿಂದವೋ ಮೊದಲು ಕೇಳಿ ಆಮೇಲೆ ಉತ್ತರ ಕೊಡ್ತೀನಿ. ನಾವು ಅವರಿಗೆ ಸಾಥ್ ಕೊಡಲ್ಲ. ಪಕ್ಷಾತೀತವಾಗಿ ನಮಗೆ ಅವರು ಸಾಥ್ ಕೊಡ್ತಾರೆ. ನಾವು ಲೀಡರು. ಸಿದ್ದರಾಮಯ್ಯ ಅವರದೇ ಕ್ಲೀಯರ್ ಇಲ್ಲ, ಅವರು ಕನ್ಫ್ಯೂಸನ್ನಲ್ಲಿದ್ದಾರೆ ಎಂದು ಹೇಳಿದರು.
ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ವಿಚಾರದ ಬಗ್ಗೆ ಮಾತನಾಡಿದ ಅವರು, ಮಂತ್ರಿ ಅಂತಾ ಬಂದಾಗ ಮುಖ್ಯಮಂತ್ರಿಗಳ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ. ವೈಯಕ್ತಿಕವಾಗಿ ಸಮಾಜ ಅಂತಾ ಬಂದಾಗ, ಸ್ವಾಮೀಜಿಗಳು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಸಚಿವ ರಮೇಶ್ ಜಾರಕಿಹೊಳಿ ಅವರು ಹೇಳಿದ್ದಾರೆ.