ಬಾಯಿ ಚಪಲಕ್ಕೆ ಲೆಕ್ಕ ಕೇಳುತ್ತಿದ್ದಾರೆ - ಸಚಿವ ಎಸ್.ಟಿ ಸೋಮಶೇಖರ್
ಶ್ರೀರಾಮ ಮಂದಿರ ನಿರ್ಮಾಣಕ್ಕೆ ಯಾರೂ ಸಹ ಬಲವಂತವಾಗಿ ದೇಣಿಗೆ ಸಂಗ್ರಹಿಸುತ್ತಿಲ್ಲ

ಮೈಸೂರು: ರಾಮಮಂದಿರಕ್ಕೆ ಸಿದ್ದರಾಮಯ್ಯ ಸಹ ದೇಣಿಗೆ ಕೊಟ್ಟಿರುತ್ತಾರೆ. ಬಹಿರಂಗವಾಗಿ ಹೇಳಲು ಹಿಂದೇಟು ಹಾಕಿರುತ್ತಾರೆ ಅಷ್ಟೇ ಎಂದು ಎಸ್.ಟಿ ಸೋಮಶೇಖರ್ ಅವರು ಸೋಮವಾರ ಹೇಳಿದ್ದಾರೆ.
ಚಾಮುಂಡೇಶ್ವರಿ ರಥೋತ್ಸವಕ್ಕೆ ನೂತನ ಲಿಫ್ಟ್ ಲೋಕಾರ್ಪಣೆ ಮಾಡಿದ ಬಳಿಕ ಮೈಸೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಸರ್ಕಾರ ಸುಗಮವಾಗಿ ಸಾಗುತ್ತಿದೆ. ಅವರಿಗೆ ಬೇರೆ ವಿಚಾರ ಮಾತನಾಡಲು ಸಿಗುತ್ತಿಲ್ಲ. ಹೀಗಾಗಿ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಇನ್ನು ವಿಪಕ್ಷದವರಿಗೆ ಮಾತನಾಡಲೂ ಏನೂ ಉಳಿದಿಲ್ಲವಾದ್ದರಿಂದ ಇಂತಹ ಹೇಳಿಕೆ ಕೊಡುತ್ತಿದ್ದಾರೆ. ಇವರು ಬಾಯಿ ಚಪಲಕ್ಕೆ ಲೆಕ್ಕ ಕೇಳುತ್ತಿದ್ದಾರೆ ಅಷ್ಟೇ. ಶ್ರೀರಾಮ ಮಂದಿರ ನಿರ್ಮಾಣಕ್ಕೆ ಯಾರೂ ಸಹ ಬಲವಂತವಾಗಿ ದೇಣಿಗೆ ಸಂಗ್ರಹಿಸುತ್ತಿಲ್ಲ ಎಂದು ತಿಳಿಸಿದರು.
ಒಂದೊಂದು ಪೈಸೆ ಸಹ ರಾಮಮಂದಿರಕ್ಕೆ ಉಪಯೋಗವಾಗಲಿದೆ. ಎಲ್ಲವಕ್ಕೂ ಲೆಕ್ಕವನ್ನು ಇಡಲಾಗಿದೆ. ಯಾರು ಬೇಕಾದ್ರು ಲೆಕ್ಕ ಪಡೆದುಕೊಳ್ಳಬಹುದು. ದೇಣಿಗೆ ಸಂಗ್ರಹಿಸಿದ ಮನೆಯ ಸಂಖ್ಯೆ, ಸಹಿ ಪಡೆದು, ಪ್ಯಾನ್ ಸಂಖ್ಯೆಯನ್ನು ನಮೂದಿಸಲಾಗುತ್ತಿದೆ. ವಿರೋಧ ಪಕ್ಷದವರು ಹೇಳಿದಂತೆ ಶ್ರೀರಾಮಮಂದಿರಕ್ಕೆ ನೀಡಿದ ದೇಣಿಗೆಯ ಹಣ ದುರುಪಯೋಗವಾಗಿಲ್ಲ. ಖಂಡಿತವಾಗಿಯೂ ದೇಣಿಗೆಯ ಲೆಕ್ಕ ಸಿಗಲಿದೆ ಎಂದು ಮೈಸೂರಿನಲ್ಲಿ ಸಚಿವ ಎಸ್.ಟಿ ಸೋಮಶೇಖರ್ ಅವರು ಮಾತನಾಡಿದ್ದಾರೆ.