Top

ಭಾರತ ತಂಡ ಮಾಜಿ ಕ್ರಿಕೆಟಿಗ ಬಿ.ಎಸ್​ ಚಂದ್ರಶೇಖರ್ ಆಸ್ಪತ್ರೆಗೆ ದಾಖಲು

ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಂದ್ರಶೇಖರ್ ಅವರ ಆರೋಗ್ಯ ಸ್ಥಿರವಾಗಿದೆ.

ಭಾರತ ತಂಡ ಮಾಜಿ ಕ್ರಿಕೆಟಿಗ ಬಿ.ಎಸ್​ ಚಂದ್ರಶೇಖರ್ ಆಸ್ಪತ್ರೆಗೆ ದಾಖಲು
X

ಬೆಂಗಳೂರು: ಟೀಂ ಇಂಡಿಯಾ ಕಂಡ ಶ್ರೇಷ್ಠ ಮಾಜಿ ಸ್ಪಿನ್ ಬೌಲರ್​ಗಳಲ್ಲಿ ಒಬ್ಬರಾದ ಬಿ.ಎಸ್ ಚಂದ್ರಶೇಖರ್ ಅವರು ಅನಾರೋಗ್ಯದಿಂದಾಗಿ ಬೆಂಗಳೂರಿನ ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಿ.ಎಸ್ ಚಂದ್ರಶೇಖರ್ ಅವರಿಗೆ 75 ವರ್ಷ ವಯಸ್ಸಾಗಿದ್ದು, ಅವರ ಆರೋಗ್ಯದ ಬಗ್ಗೆ ಆಸ್ಪತ್ರೆಯ ಮೂಲಗಳು ಮಾಹಿತಿಯನ್ನು ನೀಡಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಂದ್ರಶೇಖರ್ ಅವರ ಆರೋಗ್ಯ ಸ್ಥಿರವಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಇನ್ನೂ ಎರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಚಂದ್ರಶೇಖರ್ 16 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಈ ವೇಳೆ ಅವರು 68 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದು 242 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಇವರು ಬ್ಯಾಟ್​ ಹಿಡಿದು ಗಳಿಸಿದ ರನ್‌ಗಿಂತ ಅಧಿಕ ವಿಕೆಟ್ ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಚಂದ್ರ ಶೇಖರ್ ಒಟ್ಟಾರೆ 167 ರನ್ ಗಳಿಸಿದ್ದಾರೆ.

ಕೇವಲ 68 ಟೆಸ್ಟ್ ಪಂದ್ಯ ಆಡಿ 242 ವಿಕೆಟ್ ಉರುಳಿಸಿದ ಚಂದ್ರಶೇಖರ್ ಅವರ ಸಾಧನೆ ಅಮೋಘವಾದದ್ದು. ಇಂಗ್ಲೆಂಡ್ ವಿರುದ್ಧ ಓವಲ್ ಮೈದಾನದಲ್ಲಿ 38 ರನ್​ ನೀಡಿ 6 ವಿಕೆಟ್ ಉರುಳಿಸಿ ಭಾರತಕ್ಕೆ ಸರಣಿ ಜಯ ಒದಗಿಸಿದ ಅವರ ಸಾಧನೆಯನ್ನು, ಶತಮಾನದ ಒಂದು ಇನ್ನಿಂಗ್ಸಿನಲ್ಲಿನ ಅತ್ಯುತ್ಕೃಷ್ಟ ಬೌಲಿಂಗ್ ಎಂದು ಪರಿಗಣಿಸಿದ ವಿಸ್ಡೆನ್, ಅವರಿಗೆ 2002ರ ವರ್ಷದಲ್ಲಿ ಪ್ರಶಸ್ತಿ ಗೌರವವನ್ನು ಅರ್ಪಿಸಿತು.

ಮಾಸ್ಟರ್​ ಬ್ಲಾಸ್ಟರ್​ ಸಚಿನ್ ತೆಂಡೂಲ್ಕರ್ ಕ್ರಿಕೆಟ್​ ಲೋಕಕ್ಕೆ ಬರುವುದಕ್ಕೆ ಮುಂಚೆ ವಿಶ್ವದಲ್ಲಿ ಯಾರು ಅತ್ಯುತ್ಕೃಷ್ಟ ಬ್ಯಾಟ್ಸ್​​ಮನ್​ ಎಂದರೆ ಕ್ರಿಕೆಟ್​ ಪ್ರೇಮಿಗಳಿಗೆ ಥಟ್​ ಅಂತ ಹೊಳೆಯುವ ಹೆಸರು ವೆಸ್ಟ್ ಇಂಡೀಸ್​ ತಂಡದ ವಿವಿಯನ್ ರಿಚರ್ಡ್ಸ್. ಇವರು ಹೇಳುತ್ತಾರೆ "ನನಗೆ ಅತ್ಯಂತ ಸವಾಲು ಒಡ್ಡಿದ ಬೌಲರ್ ಅಂದರೆ ಬಿ.ಎಸ್. ಚಂದ್ರಶೇಖರ್" ಎಂದಿದ್ದಾರೆ.

Next Story

RELATED STORIES